Advertisement

ಬಸವನ ಹುಳು, ಶಂಖದ ಹುಳುವಿನ ಬಾಧೆಗಿದೆ ಮದ್ದು

01:05 PM Jul 05, 2022 | Team Udayavani |

ಬ್ರಹ್ಮಾವರ: ಬಸವನ ಹುಳು ಮತ್ತು ಶಂಖದ ಹುಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ತೇವಾಂಶ ಅಧಿಕವಿರುವಲ್ಲಿ ಕಂಡು ಬರುವ ಜೀವಿಯಾಗಿದ್ದು, ಸಂಧ್ಯಾಕಾಲ ಹಾಗೂ ರಾತ್ರಿಯ ಸಮಯದಲ್ಲಿ ಸಂಚಾರ ಅಧಿಕವಾಗಿರುತ್ತದೆ.

Advertisement

ಇದು ಬೆಳೆಗಳಿಗೆ ವಿವಿಧ ರೀತಿಯಲ್ಲಿ ಹಾನಿಯುಂಟು ಮಾಡುತ್ತಿದ್ದು, ಎಲೆ, ಕಾಂಡ, ಹಣ್ಣು, ಬೇರು ಹಾಗೂ ಹೂವುಗಳನ್ನು ತಿನ್ನುವುದರಿಂದ ಇವುಗಳ ಸಮಗ್ರ ಹತೋಟಿ ಅನಿವಾರ್ಯ.

ಸಾಮಾನ್ಯವಾಗಿ ಈ ಹುಳುಗಳು ದ್ವಿಲಿಂಗಗಳಾಗಿದ್ದು ಸರಿಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿಹುಳುಗಳು ಹೊರ ಬರುತ್ತವೆ. ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗಿದ್ದು, ಜೀವಿತಾವಧಿ 3-5 ವರ್ಷಗಳಾಗಿರುತ್ತದೆ. ಮಳೆಗಾಲ ಮುಗಿಯುವ ಹಂತದಲ್ಲಿ ಮರಿಗಳು ಹೊರ ಬಂದರೆ ತೇವಾಂಶದ ಕೊರತೆ ಯಿಂದಾಗಿ ಸುಪ್ತಾವಸ್ಥೆಗೆ ಹೋಗು ವುದರಿಂದ ಇವುಗಳ ಬೆಳವಣಿಗೆ ನಿಧಾನವಾಗುತ್ತದೆ.

ಹತೋಟಿ ಕ್ರಮಗಳು

ಹುಳುಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವನ್ನು ಒದಗಿಸದೇ ತೋಟಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಶುಚಿಯಾಗಿಡುವುದು. ತೋಟ ಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೇ ಹುಳುಗಳಿಗೆ ಅಡಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡುವುದು ಮುಖ್ಯ.

Advertisement

ಅಡಿಕೆ ಹಾಳೆಗಳನ್ನು ಒಟ್ಟು ಮಾಡಿ ರಾಶಿ ಹಾಕಿ ನೆನೆಯಿಸುವುದರಿಂದ ಅದರ ಆಶ್ರಯವನ್ನು ಪಡೆಯಲು ಬರುವ ಹುಳುಗಳನ್ನು ಆಯ್ದು ನಾಶಪಡಿಸುವುದು ಅಥವಾ 25-30 ಗ್ರಾಂ ಬ್ಲೀಚಿಂಗ್‌ ಪುಡಿ/ಸುಣ್ಣದ ಪುಡಿಯನ್ನು ಧೂಳೀಕರಿಸಿ ಹುಳುಗಳನ್ನು ನಾಶಮಾಡಬಹುದಾಗಿದೆ.

ಅತೀ ಹೆಚ್ಚು ಬಾಧೆಯಿರುವ ತೋಟಗಳಲ್ಲಿ ಶೇ 2.5ರ ಮೇಟಾಲ್ಡಿಹೈಡ್‌ ತುಣುಕುಗಳನ್ನು 20 ಗ್ರಾಂನಂತೆ, ಸಂಜೆ 6 ಗಂಟೆಯ ಅನಂತರ ತೆಂಗಿನ ಚಿಪ್ಪಿನಲ್ಲಿ ಹಾಕಿ ಅಲ್ಲಲ್ಲಿ ಇಡಬೇಕು. ಹುಳುಗಳು ಪಾಷಾಣಕ್ಕೆ ಆಕರ್ಷಣೆಗೊಂಡು, ಅವುಗಳನ್ನು ತಿಂದು ಸಾವನ್ನಪ್ಪುತ್ತವೆ.

ವಿಷ ಪಾಷಾಣದ ತಯಾರಿ

ಗೋಧಿ ಅಥವಾ ಅಕ್ಕಿಯ ತೌಡು (10 ಕಿ.ಗ್ರಾಂ), ಬೆಲ್ಲ (1.5 ಕಿ.ಗ್ರಾಂ) ಮತ್ತು ತಕ್ಕ ಮಟ್ಟಿಗೆ ನೀರನ್ನು (3-4 ಲೀ.) ಬೆರೆಸಿ, 36 ಗಂಟೆಗಳ ಕಾಲ ಬಿಡಬೇಕು. ಅನಂತರ ಮಿಥೋಮಿಲ್‌ 40 ಎಸ್‌.ಪಿ. (150 ಗ್ರಾಂ) ಅಥವಾ ಕ್ಲೋರೋಪೈರಿಫಾಸ್‌ 20 ಇ.ಸಿ. (100 ಮಿ.ಲೀ.) ಕೀಟನಾಶಕ ವನ್ನು ಚೆನ್ನಾಗಿ ಮಿಶ್ರಣ ಮಾಡಿ ಸಂಜೆ 6 ಗಂಟೆಯ ಅನಂತರ ಹೊಲದ ಸುತ್ತ ಅಂಚಿನಲ್ಲಿ ಅಥವಾ ಸಾಲುಗಳಲ್ಲಿ ಚೆಲ್ಲಿ ಹುಳುಗಳನ್ನು ನಾಶಪಡಿಸಬಹುದಾಗಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next