ಬ್ರಹ್ಮಾವರ: ಇಲ್ಲಿನ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಬಹುಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸೋಮವಾರ ಬ್ರಹ್ಮಾವರದಲ್ಲಿ ಕಾಲ್ನಡಿಗೆ ಜಾಥಾ, ಪ್ರತಿಭಟನೆ ಸಭೆ ಜರಗಿತು.
ಸುಧೀರ್ ಕುಮಾರ್ ಮುರೋಳಿ ದಿಕ್ಸೂಚಿ ಭಾಷಣ ಮಾಡಿ, ಕಾರ್ಖಾನೆ ಆಡಳಿತ ಮಂಡಳಿ ಗುಜರಿ ಮಾರಾಟ ನೆಪದಲ್ಲಿ ತಾಮ್ರ, ಬೆಲೆಬಾಳುವ ಮೋಟಾರ್, ತಳಪಾಯದ ಕಲ್ಲಿನ ಸಹಿತ ಎಲ್ಲವನ್ನೂ ಮಾರಿದೆ. ಗುಜರಿ ಖರೀದಿಸಿದ ಚೆನ್ನೈ ಮೂಲದ ಕಂಪೆನಿಯ ಜತೆಗೆ ಶಾಮೀಲಾಗಿ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಸರಕಾರದ ನಿಯಮಾನುಸಾರ ಪ್ರಕ್ರಿಯೆ ನಡೆಸದೆ ವಂಚಿಸಲಾಗಿದೆ. 82 ರೂ. ಮೌಲ್ಯದ ವಸ್ತುವನ್ನು 32 ರೂ.ಗೆ ಮಾರಾಟ ಮಾಡಲಾಗಿದೆ. 22 ಲಕ್ಷ ಕೆ.ಜಿ. ಗುಜರಿ ಮಾರಾಟ ಮಾಡಿ 11 ಲಕ್ಷ ಕೆ.ಜಿ. ತೋರಿಸಲಾಗಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕರಾವಳಿಯಲ್ಲೂ ಸಕ್ಕರೆ ಕಾರ್ಖಾನೆಯನ್ನು ಲಾಭದಾಯಕ ವಾಗಿ ನಡೆಸಬಹುದುದು ಎನ್ನುವುದನ್ನು ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ತೋರಿಸಿದ್ದರು. ಈಗ ರೈತರ ಸೊತ್ತಾದ ಕಾರ್ಖಾನೆಯ ಜತೆಗೆ ಜಾಗವನ್ನೂ ಮಾರಾಟ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಕುರಿತು ತನಿಖೆ ನಡೆಸಿ ತಾತ್ವಿಕ ಗುರಿ ಮುಟ್ಟಲೇ ಬೇಕು ಎಂದರು.
ಪ್ರಮುಖರಾದ ಅಶೋಕ್ ಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಎಂ.ಎ. ಗಫೂರ್, ಡಾ| ಅಂಜುಮನ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಸರಳಾ ಕಾಂಚನ್, ಗೋಪಾಲ ಪೂಜಾರಿ, ದಿನಕರ ಹೇರೂರು, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ದಿನೇಶ್ ಪುತ್ರನ್, ಸದಾಶಿವ ಅಮೀನ್, ದಿವಾಕರ ಕುಂದರ್, ವಿವಿಧ ಬ್ಲಾಕ್ ಅಧ್ಯಕ್ಷರು, ಪ್ರಮುಖರು ಉಪಸ್ಥಿತರಿದ್ದರು.
ಡಾ| ಸುನೀತಾ ಡಿ. ಶೆಟ್ಟಿ, ಜ್ಯೋತಿ ಹೆಬ್ಟಾರ್ ನಿರೂಪಿಸಿದರು.