ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಆರಂಭಿಸಿರುವ ನಿಗಮಕ್ಕೆ ಅನುದಾನ ಹಾಗೂ ಅಧ್ಯಕ್ಷರ ನೇಮಕ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಸರಕಾರ ವಿಶೇಷ ಆಸ್ಥೆ ವಹಿಸಬೇಕಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ದ.ಕ. ಜಿಲ್ಲಾಡಳಿತ, ದ.ಕ. ಜಿ. ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇಲ್ಲಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಮಂಗಳವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣ ಗುರುಗಳ ಹೆಸರಿನಲ್ಲಿ ಕೋಶ ರಚನೆ ಮಾಡುವ ಸಂದರ್ಭ ಕೋಶ ಬೇಡ-ನಿಗಮ ಬೇಕು ಎಂಬ ಬೇಡಿಕೆ ಇತ್ತು. ಇದರಂತೆ ನಿಗಮ ಆಗಿದೆ. ಆದರೆ, ಹಲವು ತಿಂಗಳು ಕಳೆದರೂ ಇನ್ನೂ ನಿಗಮಕ್ಕೆ ಅನುದಾನ ಬಂದಿಲ್ಲ. ಅಧ್ಯಕ್ಷರ ನೇಮಕ ಆಗಿಲ್ಲ. ಇದನ್ನು ಆದ್ಯತೆ ನೆಲೆಯಲ್ಲಿ ನಡೆಸಬೇಕಿದೆ ಎಂದು ಹೇಳಿದರು.
ಚಿಂತಕ, ಲೇಖಕ ಅರವಿಂದ ಚೊಕ್ಕಾಡಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಅದ್ವೈತ ಸಿದ್ದಾಂತವನ್ನು ಬೆಳೆಸಿಕೊಂಡವರು. ಅವರ ಎಲ್ಲ ಸಾಮಾಜಿಕ ಸುಧಾರಣೆಯ ಹಿಂದೆ ಇಂತಹುದೇ ಪ್ರೇರಣಾ ಶಕ್ತಿ ಇತ್ತು. ಶಿಕ್ಷಣದ ಬಗ್ಗೆ ವಿಶೇಷ ಆಸ್ಥೆ ವಹಿಸಿದರು. ಹೆಣ್ಣಿನ ಅನುಮತಿ ಪಡೆಯದೆ ಮದುವೆ ಮಾಡಬಾರದು ಹಾಗೂ ಮದುವೆ ಸರಳವಾಗಿ ನಡೆಯಬೇಕು. ಈ ಮೂಲಕ ಸರಳ ಬದುಕನ್ನು ಗುರುಗಳು ಪ್ರತಿಪಾದನೆ ಮಾಡಿದರು ಎಂದರು.
ಧಾರ್ಮಿಕ ಕೇಂದ್ರ ಆಧಾರವಾಗಿರಿಸಿಕೊಂಡು ಶಿಕ್ಷಣವನ್ನು ಆದ್ಯತೆಯಲ್ಲಿರಿಸಿ ಆರ್ಥಿಕ ವ್ಯವಸ್ಥೆಗಳನ್ನು ಒಳಗೊಂಡ ಸೂತ್ರವನ್ನು ಗುರುಗಳು ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವರ ಜಾಗೃತಿ ಸ್ವರೂಪ ವಿಶೇಷ ಎಂದರು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ಎಂ.ಪಿ., ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಲೇಜಿನ ಸಂಚಾಲಕ ವಸಂತ್ ಕಾರಂದೂರು, ಪ್ರಾಂಶುಪಾಲ ಡಾ| ಜಯಪ್ರಕಾಶ್ ಉಪಸ್ಥಿತರಿದ್ದರು.ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ರೇಣುಕಾ ನಿರೂ ಪಿಸಿದರು.