ಕಾಪು: ಬಿಲ್ಲವ, ಈಡಿಗ ಸೇರಿದಂತೆ ರಾಜ್ಯಾದ್ಯಂತ 29 ಉಪ ಪಂಗಡಗಳನ್ನು ಹೊಂದಿರುವ ನಮ್ಮ ಸಮುದಾಯದ ಬೇಡಿಕೆ, ಮನವಿಗೆ ಸ್ಪಂದಿಸಿ ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಪಠ್ಯಭಾಗವನ್ನು ಸಮಾಜ ವಿಜ್ಞಾನದಲ್ಲೇ ಮರು ಸೇರ್ಪಡೆಗೆ ಆದೇಶಿಸುವಂತೆ ಶಿಕ್ಷಣ ಸಚಿವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವುದನ್ನು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಸ್ವಾಗತಿದ್ದಾರೆ.
ಪಠ್ಯ ಸೇರ್ಪಡೆ ವಿಚಾರದಲ್ಲಿ ಸಮಾಜದ ಧ್ವನಿಯನ್ನು ಸರಕಾರ ಮತ್ತು ಶಿಕ್ಷಣ ಸಚಿವರ ಬಳಿಗೆ ತಲುಪಿಸಿ, ಅವರ ಮನವೊಲಿಸಿದ ಸಚಿವರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ವಿಶ್ವ ಮಾನವತಾವಾದದ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಸ್ತ ಹಿಂದುಳಿದ ವರ್ಗಗಳನ್ನು ಕಾಡುತ್ತಿದ್ದ ಅಸ್ಪೃಶ್ಯತೆ ಎಂಬ ಪಿಡುಗನ್ನು ಹೋಗಲಾಡಿಸುವಲ್ಲಿ ಸಾಮಾಜಿಕ ಕ್ರಾಂತಿಯನ್ನೇ ನಡೆಸಿದ್ದು, ಅವರ ಜೀವನ ಕ್ರಮ, ತತ್ವಾದರ್ಶ ಮತ್ತು ಸಂದೇಶವು ಸಾರ್ವಕಾಲಿಕ ಅನುಕರಣೀಯವಾಗಿದೆ. ಅವರ ಪಾಠ ಮುಂದಿನ ಪೀಳಿಗೆಗೂ ಅತ್ಯವಶ್ಯಕವಾಗಿದ್ದು, ರಾಜ್ಯ ಸರಕಾರ ಕೂಡಲೇ ಸಮಾಜ ವಿಜ್ಞಾನ ಪಠ್ಯದೊಳಗೆ ನಾರಾಯಣ ಗುರುಗಳ ಮರು ಸೇರ್ಪಡೆಗೊಳಿಸಿ ಆದೇಶ ಹೊರಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಠ್ಯ ವಿಚಾರದಲ್ಲಿ ಸತ್ಯಾಂಶವನ್ನು ಸಮಾಜದ ಮುಂದಿಟ್ಟ ಮಾಧ್ಯಮಗಳಿಗೆ, ಸಮಾಜ ವಿಜ್ಞಾನದಲ್ಲಿ ಮರುಸೇರ್ಪಡೆಗೊಳಿಸಲು ಒತ್ತಾಯಿಸಿದ ಗುರುಗಳ ಅನುಯಾಯಿಗಳಿಗೆ, ಹೋರಾಟ ಬೆಂಬಲಿಸಿದ ಸಮಾಜದ ಸಂಘಟನೆಗಳು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಹಾಗೂ ರಾಜಕೀಯ ಬದಿಗಿಟ್ಟು ಪಕ್ಷಾತೀತವಾಗಿ ನಮ್ಮೊಂದಿಗೆ ಕೈ ಜೋಡಿಸಿದ ರಾಜಕೀಯ ಮುಖಂಡರು ಮತ್ತು ಸಮಸ್ತ ಸಮಾಜ ಬಾಂಧವರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.