ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಹಾಗೂ ಶ್ರೀಗಳ ಆದರ್ಶವನ್ನು ವಿವಿಧ ಆಯಾಮಗಳಲ್ಲಿ ಪ್ರಕಟಿಸುವ ಕಾರ್ಯವನ್ನು ಸರಕಾರ ನಡೆಸಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಲೇಡಿಹಿಲ್‌ನಲ್ಲಿ ಮುಡಾ ವತಿಯಿಂದ 48 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಕಾಮಗಾರಿಗೆ ರವಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಲೇಡಿಹಿಲ್ ಸರ್ಕಲ್‌ಗೆ ಗುರುಗಳ ಹೆಸರನ್ನು ಈಗಾಗಲೇ ಇಡಲಾಗಿತ್ತು. ಈಗ ನಗರಾಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಸುಮಾರು 48 ಲಕ್ಷ ರೂ. ವೆಚ್ಚದಲ್ಲಿ ಸುಂದರವಾದ ನಾರಾಯಣ ಗುರು ಅವರ ವೃತ್ತ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಲ್ಲಿ ವೃತ್ತ ಹಾಗೂ ನಾರಾಯಣ ಗುರುಗಳ ಸುಂದರ ಪುತ್ಥಳಿ ನಿರ್ಮಿಸಲಾಗುವುದು. ನವರಾತ್ರಿ ವೇಳೆಗೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, “ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಶಾಶ್ವತವಾಗಿ ನೆನಪಿನಲ್ಲಿರಿಸುವ ನೆಲೆಯಿಂದ ಲೇಡಿಹಿಲ್ ಸರ್ಕಲ್‌ಗೆ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗಿತ್ತು. ಇದೀಗ ಅತ್ಯಾಕರ್ಷಕ ವೃತ್ತ ನಿರ್ಮಾಣವಾಗಲಿದೆ ಎಂದರು.
ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಮಾತನಾಡಿ, ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಬೇಕೆಂದು ಬಿರುವೆರ್ ಕುಡ್ಲ ಕಳೆದ 2 ವರ್ಷಗಳಲ್ಲಿ ಅಭಿಯಾನ ನಡೆಸಿತ್ತು. ಈಗ ಸಾಕಾರವಾಗುತ್ತಿರುವುದು ಸಂತಸ ತಂದಿದೆ ಎಂದರು.
ಶಾಸಕ ಡಾ| ವೈ. ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು, ವಿವಿಧ ನಿಗಮದ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ನಿತಿನ್ ಕುಮಾರ್, ಸಂತೋಷ್ ಕುಮಾರ್ ರೈ ಬೋಳಿಯಾರು, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಪ್ರಮುಖರಾದ ಊರ್ಮಿಳಾ ರಮೇಶ್ ಕುಮಾರ್ ಉಪಸ್ಥಿತರಿದ್ದರು.