ಮುಂಬಯಿ: ಧರ್ಮವೇ ಶ್ರೇಷ್ಠ ವಾಗಿದೆ. ಧರ್ಮ ಉಳಿದರೆ ಮಾತ್ರ ಬದುಕು ಹಸನವಾಗುವುದು. ಸನಾತನ ಹಿಂದೂ ಧರ್ಮದ ಉದ್ದೇಶವೂ ಇದಾಗಿದೆ. ನಾವೂ ನಾರಾಯಣ ಗುರು ಚಿಂತನೆಗೆ ಪ್ರೇರಕರಾದಾಗ ಅದೇ ನಿಜವಾದ ಧರ್ಮವಾಗಿ ಫಲಿಸುವುದು. ಕರ್ಮ ಶುದ್ಧಿ ಒಂದು ಪಾಲಿಸಿದಾಗ ಜೀವನವೇ ಪರಿಪೂರ್ಣವಾಗುವುದು. ಬುದ್ಧಿ ಜ್ಞಾನದಿಂದ ಜಗತ್ತನ್ನು ಆಳಬಹುದು. ಅದಕ್ಕಾಗಿ ದ್ವಂದ್ವ ನಿವಾರಣೆ ನಮ್ಮ ಧರ್ಮವಾಗಲಿ ಎಂದು ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಜೂ. 9 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಬ್ರಹ್ಮಾ ನಂದ ಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವ ಸಂಭ್ರಮ ಮತ್ತು ಶ್ರೀರಾಮ ತಾರಕ ಮಂತ್ರ ಯಜ್ಞ ಹಾಗೂ ಧರ್ಮ ಸಂಸದ್‌ನ ಪೂರ್ವಭಾವಿ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು, ಆತ್ಮದ ಮೋಕ್ಷದ ಜೊತೆಗೆ ಜನತಾ ಜನಾರ್ದನ ಸೇವೆ ಅದೇ ಕರ್ಮಯೋಗ. ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಹಾಗೆ ನಾವೆಲ್ಲ ಶ್ರದ್ಧಾ ಭಕ್ತಿಯಿಂದ ಲೋಕ ಕಲ್ಯಾಣಕ್ಕಾಗಿ ನಿಸ್ವಾರ್ಥ ಕರ್ಮವನ್ನು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಗುರು ಪೀಠ ವಸುದೈವ ಕುಟುಂಬಕಂ ಎಂಬ ತತ್ವದಡಿ ಎಲ್ಲಾ ಜಾತಿ ಜನಾಂಗಗಳಲ್ಲಿ ಸಂಸ್ಕಾರಯುಕ್ತ ಪ್ರಜೆಗಳನ್ನು ನಿರ್ಮಿಸುವಲ್ಲಿ ಅಹೋರಾತ್ರಿ ಕೆಲಸ ನಿರ್ವ”ಸುತ್ತಿದೆ. ಯಾವುದೇ ಜಾತಿ, ಮತ, ಪಂಥದ ತಾರತಮ್ಯವಿಲ್ಲದೆ ತಮ್ಮ ಗುರುಕುಲ ಮಾದರಿಯ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ನೂರಾರು ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣದೊಂದಿಗೆ ಯೋಗ, ಧ್ಯಾನ, ಭಜನೆ, ಸತ್ಸಂಗ, ಭಗವದ್ಗೀತೆ, ವಾಸ್ತು, ಜ್ಯೋತಿಷ್ಯ ಎಲ್ಲವನ್ನೂ ಉಚಿತವಾಗಿ ವಸತಿ ಸೌಲಭ್ಯದೊಂದಿಗೆ ಬೋಧಿ ಸುದ್ದೇವೆ. ಸಮಾಜದ ಎಲ್ಲಾ ಜಾತಿಯ ಬಡ ಮಕ್ಕಳಿಗೆ ಇದು ಅಸರೆಯಾಗಿದ್ದು, ಇದರ ಖರ್ಚು ವೆಚ್ಚಗಳಿಗೆ ನಾವೂ ಅಹೋರಾತ್ರಿ ಭಗೀರಥ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಂದಾಳುತ್ವದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ, ಪುರುಷೋತ್ತಮ ಎಸ್. ಕೋಟ್ಯಾನ್ ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಕಾರ್ಯಾಧ್ಯಕ್ಷ ಮೋಹನ್‌ದಾಸ್ ಜಿ. ಪೂಜಾರಿ, ಹಾಗೂ ಸೇವಾದಳದ ಜಿಒಸಿ ಗಣೇಶ್ ಕೆ. ಪೂಜಾರಿ, ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ಅಸೋಸಿಯೇಶನ್‌ನ ಸಂಚಾಲಕತ್ವದ ಭಾರತ್ ಬ್ಯಾಂಕ್‌ನ ನಿರ್ದೇಶಕರುಗಳಾದ ಭಾಸ್ಕರ್ ಎಂ. ಸಾಲ್ಯಾನ್, ಚಂದ್ರಶೇಖರ ಎಸ್. ಪೂಜಾರಿ, ಗಂಗಾಧರ್ ಜೆ. ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ ಉಪಸ್ಥಿತರಿದ್ದರು.
ಸಭೆಯ ಮುನ್ನ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು ನಂತರ ಶ್ರೀಗಳು ಭವನದ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಪೂಜೆ ನೆರವೇರಿಸಿ ಆರತಿಗೈದರು.
ಶ್ರೀಗಳನ್ನು ಜಯ ಸಿ. ಸುವರ್ಣರು ಗೌರವಿಸಿದರು. ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಸ್ವಾಗತಿಸಿದರು. ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ ಪ್ರಸ್ತಾವಿಕ ನುಡಿಗಳನ್ನಾಡಿ ಕ್ಷೇತ್ರದ ಯೋಜನೆ, ಉದ್ದೇಶವನ್ನು ವಿವರಿಸಿದರು. ಧಾರ್ಮಿಕ ಉಪಸಮಿತಿ ಕಾರ್ಯದರ್ಶಿ ರವೀಂದ್ರ ಶಾಂತಿ ಅವರ ನೇತೃತ್ವದಲ್ಲಿ ಭಜನೆ ನಡೆಯಿತು. ಗೌ| ಪ್ರ| ಕಾರ್ಯದರ್ಶಿ ಧರ್ಮ ಪಾಲ ಜಿ.ಅಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಗತ ವರ್ಷದ ಕೊನೆಯ ಯಕ್ಷಗಾನಕ್ಕೆ ಮಂಗಳಹಾಡಲಾಯಿತು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್