ರಬಕವಿ-ಬನಹಟ್ಟಿ: ಭಾರತ ತತ್ವಜ್ಞಾನಿಗಳ ಋಷಿ ಮುನಿಗಳ ಸಾಧು ಸಂತರ ತವರು ಮನೆ. ಶರಣರು ಸಾಧು ಸಂತರು ಈ ಸಂಸ್ಕೃತಿಯ ಸತ್ಪುರುಷರು ಅವರ ದರ್ಶನ ಉಪದೇಶ ಭಾರತೀಯ ಜೀವನದ ತಿರುಳು. ಲೌಕಿಕ ಹಾಗೂ ಪಾರಮಾರ್ಥಿಕ ಜೀವನಕ್ಕೆ ಬೆಳಕು ತೋರಬಲ್ಲ ಅನುಭಾವಿಗಳು ಕಾಲಕಾಲಕ್ಕೆ ಈ ಭರತ ಭೂಮಿಯಲ್ಲಿ ಜನ್ಮವೆತ್ತಿದ್ದಾರೆ.
ಬದುಕಿನ ಔನ್ನತ್ಯಸಾಧನೆಗೆ ಆಧ್ಯಾತ್ಮ ತತ್ವವಿಕಾಸಕ್ಕೆ ಮಹತ್ವರವಾದ ಕಾಣಿಕೆಯನ್ನು ನೀಡಿದವರಲ್ಲಿ ರಬಕವಿ ಬನಹಟ್ಟಿ ನಗರದಲ್ಲಿನ ಶ್ರೀ ಗುರುದೇವ ಬ್ರಹ್ಮಾನಂದ ಶಿವಯೋಗಿಗಳು ಒಬ್ಬರಾಗಿದ್ದಾರೆ. ಇವರು ಈ ನಾಡಿನ ಜನತೆಗೆ ಆಧ್ಯಾತ್ಮದ ಸವಿಜೇನನ್ನು ಉಣಬಡಿಸಿದ್ದಾರೆ. ಬದುಕು ಬೇಡವಾದವರಿಗೆ ಬರಡಾದವರಿಗೆ ತಮ್ಮ ತಪ:ಶಕ್ತಿಯ ಮೂಲಕ ಎಲ್ಲವನ್ನು ಸುಖಾಂತಗೊಳಿಸಿದ ಶಿವಸ್ವರೂಪಿಗಳು.
ತಮ್ಮ ತಪೋಬಲದಿಂದ ಜನರಲ್ಲಿ ಧರ್ಮದ ಝೇಂಕಾರದ ನಾದವನ್ನು ತುಂಬಿ ಸತ್ವಶಾಲಿ ಸಮಾಜವನ್ನು ಉಳಿಸಿ ಬೆಳಸಿ ಉದ್ದರಿಸಿದವರು. ತಾವು ಅನುಭವಿಸಿದ ಆತ್ಮಾನಂದ ಸುದೇಯನ್ನು ಭಕ್ತರೆಲ್ಲರಿಗೂ ಉಣಬಡಿಸಿದ ದಿವ್ಯಪುರುಷ, ನಿರ್ಲಿಪ್ತಭಾವದ ಶಿವಯೋಗಿ.
ಬ್ರಹ್ಮಾನಂದ ಶಿವಯೋಗಿಗಳು ಕ್ರಿ.ಶ. 1868ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆಯಲ್ಲಿ ಅನ್ನದಾನ ಶಿವಯೋಗಿಗಳ ಕೃಪಾಶೀರ್ವಾದದಿಂದ ಕೃಷಿಕಾಯಕದ ಹುಲ್ಯಾಳ ಮನೆತನದ ಶಿವದಂಪತಿಗಳ ಉದರದಲ್ಲಿ ಜನಿಸಿದರು. ರೂಢಿಯಂತೆ ಶಿಶುವಿಗೆ ವೀರಪ್ಪ ಎಂದು ನಾಮಕರಣ ಮಾಡಿದರು.
ಬಾಲ್ಯದಲ್ಲಿಯೇ ಅನೇಕ ಲೀಲೆಗಳನ್ನು ತೋರುತ್ತ, ವಿದ್ಯಾಭ್ಯಾಸ ಮಾಡುತ್ತ ಮುಲ್ಕಿ (7ನೇ ವರ್ಗ) ಪರೀಕ್ಷೆ ಪಾಸಾದರು. ಕೂಡಲೆ ಗದಗ ಮುನ್ಸಿಪಲ್ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡ ಅವರು ಬೋಧನಾ ಕಾರ್ಯದಲ್ಲಿ ನಿರತರಾದರೂ ಮನವು ಆಧ್ಯಾತ್ಮದತ್ತ ಹಾತೊರೆಯುತ್ತಿತ್ತು. ಶಿವಾನಂದ ಮಠದ ಸೇವಕರಾಗಿ ತೋಟದಲ್ಲಿ ಸಸಿಗಳನ್ನು ನೆಡಿಸಿ ನೀರುಣಿಸತೊಡಗಿದರು.
ಒಮ್ಮೆ ಶಿವಾನಂದರು ನಿಜಗುಣ ಶಿವಯೋಗಿಗಳ “ಪಡೆವೆ ನೀನೆಂದಿಗೆ ಪರಮುಕ್ತಿ ಸುಖವನು, ಕೆಡುವ ಕಾಯದ ಮೋಹವನು ಮಾಡಿ ಮನುಜ” ಎಂಬ ವಿಷಯ ಕುರಿತು ಪ್ರವಚನ ನೀಡುತ್ತಿದ್ದರು. ಇದು ವೀರಪ್ಪನ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿತು ಮನಸ್ಸು ಪರಮಾರ್ಥದತ್ತ ಹೊರಳಿತು. ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದರು.
ಶ್ರೀ ಮಠದ ಸೇವೆಗೈದರು. ಅವರ ಆಧ್ಯಾತ್ಮದ ಹಂಬಲ ಅಷ್ಟಕ್ಕೆ ತಣಿಯಲ್ಲಿಲ್ಲ. ಸದ್ಗುರು ಶಿವಾನಂದರಿಂದ ಸನ್ಯಾಸ ಹಾಗೂ ಧರ್ಮೋಪದೇಶ ದೀಕ್ಷೆ ಪಡೆದು ‘ಬ್ರಹ್ಮಾನಂದ’ರಾದರು. ಗುರುಗಳಿಂದ ಅಪ್ಪಣೆ ಪಡೆದು ದೇಶ ಸಂಚಾರಕ್ಕೆ ಹೊರಟ ಅವರು. 12 ಜ್ಯೋತಿರ್ಲಿಂಗಗಳ ದರ್ಶನ ಪಡೆದರು.
ಕಾಶಿ, ಹರಿದ್ವಾರ-ಋಷಿಕೇಶ, ಬದರಿನಾಥ, ಕೇದಾರನಾಥ, ಮುಂತಾದ ಪುಣ್ಯಮಯತಾಣಗಳಲ್ಲಿ ಸಾಧನೆಗೈದರು. ಕಲ್ಕತ್ತಾದ ರಾಮಕೃಷ್ಣರ ಕಾಳಿಮಂದಿರ, ಸಿದ್ಧಾರ್ಥನ ಬೋಧಗಯಾ ಮುಂತಾದವುಗಳನ್ನು ಸಂದರ್ಶಿಸಿದರು. ಕಾಡುಮೇಡುಗಳೆನ್ನದೆ, ಗಿರಿ-ಶಿಖರ, ನದಿ-ಸರೋವರಗಳನ್ನು ದಾಟಿ ಮುನ್ನೆಡೆದರು. ಹೀಗೆಯೇ ದೇಶಾಟನೆಗೈದು ತಾಯಿನಾಡಿಗೆ ಮರಳಿ ಧಾರವಾಡ-ಹುಬ್ಬಳಿ ಮಧ್ಯದ ರಾಯಾಪುರದ ಗುಡಿಸಲಿನಲ್ಲಿ ವಾಸಮಾಡ ತೊಡಗಿದರು.
ಅಲ್ಲಿಯ ಭಕ್ತರು 7 ಎಕರೆ ಭೂಮಿಯನ್ನು ದಾನವಾಗಿ ನೀಡಿದರು. ಅಲ್ಲಿಯೇ ಭಕ್ತರೊಂದಿಗೆ ಬಾವಿ ಅಗೆದು 60 ಮಾವಿನ ಸಸಿ ನೆಟ್ಟರು. ಬಂದ ಫಲಗಳನ್ನು ಭಕ್ತರಿಗೆ ಹಂಚಿದರು. ಇಂದಿಗೂ ಆ ಮರಗಳು ಭಕ್ತರನ್ನು ಕೈಬೀಸಿ ಕರೆಯುತ್ತಿವೆ. ಅವರ ನಿಷ್ಕಲ್ಮಷ ಹೃದಯ ಸರಳವಾಣಿ ಜನಸಾಮಾನ್ಯರ ಮೇಲೆ ಅಪಾರ ಪ್ರಭಾವ ಬೀರಿದವು. ಮುಂದೆ ಶಿರೂರಿನಲ್ಲಿ ಹಾಗೂ 1952ರ ನಂತರ ಸಂಶಿಗೆ ಪ್ರವಚನ ನೀಡಲು ತೆರಳಿದರು. ಊರ ಹೊರಗಿನ ಕೆರೆ ದಂಡೆಯ ಮೇಲೆ ಆಶ್ರಮ ನಿರ್ಮಿಸಿಕೊಂಡರು.
ಸದ್ಭಕ್ತರ ಒತ್ತಾಸೆಯಂತೆ ಪ್ರವಚನ ನೀಡಲು, ಜಮಖಂಡಿ ತಾಲೂಕಿನ ರಬಕವಿ ಬನಹಟ್ಟಿ ಅವಳಿ ನಗರಕ್ಕೆ ಆಗಮಿಸಿದರು. ಅವಳಿ ನಗರದ ರಾಂಪುರ ಗ್ರಾಮದ ನೀಲಕಂಠೇಶ್ವರ ಮಠದಲ್ಲಿ ಪ್ರವಚನ ಪ್ರಾರಂಭಿಸಿದರು. ಒಮ್ಮೆ ಅವರ ವಾಣಿಯನ್ನು ಕೇಳಿದರೆ ಸಾಕು, ಪರಮ ಭಕ್ತರಾಗುತ್ತಿದ್ದರು. ಸಮೀಪದ ತೇರದಾಳ, ಪರಮಾನಂದವಾಡಿಯಲ್ಲಿಯೂ ಪ್ರವಚನ ನೀಡಿದರು.
“ನೀನೊಲಿದು ಪಾದವನಿಟ್ಟ ನೆಲವೇ ಸುಕ್ಷೇತ್ರ, ಮುಟ್ಟಿದ ಜಲವೇ ಪಾವನ ತೀರ್ಥ” ಎನ್ನುವಂತೆ ಎಲ್ಲೆಲ್ಲಿ ಸಂಚರಿಸಿದರೋ ಅಲ್ಲೆಲ್ಲಾ ಮಠಗಳು ನಿರ್ಮಾಣವಾದವು. ಅವರಲ್ಲಿ ಜಾತಿ-ಮತ-ಪಂಥಗಳ ಭೇದವೇ ಇರಲಿಲ್ಲ. ಎಲ್ಲ ಧರ್ಮಿಯರೂ ಅವರ ದರ್ಶನಾಶೀರ್ವಾದಕ್ಕಾಗಿ ಕಾಯುತ್ತಿದ್ದರು.
1976ರಲ್ಲಿ ಮೈಸೂರಿನ ಅರಮನೆಯ ಪ್ರಾಂಗಣದಲ್ಲಿ ನಡೆದ ಧರ್ಮವಿಚಾರ ಪರಿಷತ್ತಿನ ಅಧ್ಯಕ್ಷತೆ ವಹಿಸಿ ಮನುಷ್ಯನ ಮನಸ್ಸಿಗೆ ಅಗಾಧ ಶಕ್ತಿಯಿದೆ. ನಾವು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲೆವು. ನೀವು ನನಗೆ ಸಾಯಲು ಹೇಳಿದರೆ ‘ಈ ಕ್ಷಣದಲ್ಲಿಯೇ ದೇಹ ತ್ಯಜಿಸುವೆ ಅಥವಾ ಸಹಸ್ರ ವರ್ಷ ಬದುಕಿರೆಂದರೆ ಬದುಕಬಲ್ಲೆ’ ಎಂದಾಗ ಸಭಿಕರೆಲ್ಲ ಬೆರಗಾದರು. ಅವರ ವಾಣಿಯ ಮಹತಿಯೇ ಅಂತಹುದು.
ಹೀಗೆ ಶ್ರೀಗಳು 108 ವರ್ಷ ಬದುಕಿ ಅನಂತ ಲೀಲೆಗೈಯುತ್ತ ಬೇಡಿ ಬಂದ ಸಹಸ್ರಾರು ಭಕ್ತರನ್ನುದ್ಧರಿಸುತ್ತ, ರೋಗ- ರುಜಿನಗಳನ್ನು ಪರಿಹರಿಸುತ್ತ, ಕಷ್ಟದಲ್ಲಿದ್ದವರಿಗೆ ಅಭಯ ಹಸ್ತನಿಡುತ್ತ ಭಕ್ತರ ಹೃನ್ಮನ ತಣಿಸಿದರು. ಖಾಲಿ ಕೊಡಕ್ಕೆ ಕೈ ಹಚ್ಚಿದಾಗ ನೀರು ತುಂಬಿದ್ದು, ರಬಕವಿಯ ಭಕ್ತರು ಮಳೆ ಇಲ್ಲದೇ ಕಂಗಾಲಾದಾಗ ಧೋ ಎಂದು ಮಳೆ ಸುರಿಸಿದ್ದುದು ಪವಾಡವಲ್ಲ ಎನ್ನಲಾದೀತೆ.
ಶ್ರೀಗಳು ತ್ರಿಕಾಲ ಜ್ಞಾನಿಗಳಾಗಿದ್ದರು. ಅವರ ನಿಧನಾನಂತರ ಸಂಶಿಯಲ್ಲಿಯೇ ಅಂತ್ಯಕ್ರಿಯೆ ಜರುಗಬೇಕೇಂದು ಅಲ್ಲಿಯ ಜನ ಒಪ್ಪ್ಪಿಗೆ ಪಡೆದುಕೊಂಡರು. ಆಗ ರಬಕವಿಯ ಭಕ್ತರು ವಿಚಲಿತರಾದಗ ‘ಅವ್ರು ನನ್ನ ದೇಹಾಮಾತ್ರ ಒಯ್ಯತಾರ, ನಾ ರಬಕವಿಯಾಗ ಇರತೇನಿ, ನೀನಗ ಬೇಕಾದರ ತಗೋ ಇದನ್ನ ಅಂತ ಒಂದು ಹಲ್ಲನ್ನೇ ಕಿತ್ತುಕೊಟ್ಟಿದ್ದು ಪವಾಡವೇ ಸರಿ. 1976 ಏಪ್ರಿಲ್ 29 ರ ಗುರುವಾರ ಪ್ರತ:ಕಾಲ ಶಿವನಾಮಸ್ಮರಣೆ ಮಾಡುತ್ತ ಶಿವಲೋಕವಗೈದರು.
ಬ್ರಹ್ಮಾನಂದ ಶ್ರೀಗಳ ಸದಿಚ್ಛೆಯ ಮೇಲೆ ಅವರ ಸನ್ನಿಧಾನದಲ್ಲಿ ಬೆಳೆದ ಶ್ರೀ ಸಿದ್ಧೇಶ್ವರ ಸ್ವಾಮಿಗಳಿಗೆ ಉತ್ತರಾಧಿಕಾರಿಯನ್ನಾಗಿಸಿ 1976 ಮೇ. 10 ರಂದು ಮಠದ ಸಂಪೂರ್ಣ ಜವಾಬ್ದಾರಿಯನ್ನು ಭಕ್ತಾದಿಗಳು ವಹಿಸಿಕೊಟ್ಟರು. ಅವರು ತತ್ವಜ್ಞಾನ ಪಂಡಿತ ಉತ್ತಮ ವಾಗ್ಮಿಗಳು ಆಗಿದ್ದರು.
ದಾವಣಗೆರೆ, ಮೈಸೂರಿನಲ್ಲಿ ಇಂಗ್ಲೀಷ, ಸಂಸ್ಕೃತ, ಕನ್ನಡ ಮುಂತಾದ ವಿಷಯಗಳ ಅಧ್ಯಯನದೊಂದಿಗೆ ತತ್ವಶಾಸ್ತçದಲ್ಲಿ ಸ್ನಾತಕೋತ್ತರ ಪದವಿ ಪಡೆದ್ದಿದ್ದರು. ಗುರುಗಳು ತೋರಿದ ದಾರಿಯಲ್ಲಿ ಮುನ್ನಡೆದು ಶ್ರೀಮಠದ ಕೀರ್ತಿಯನ್ನು ಹೆಚ್ಚಿಸಿದರು.
ಸದ್ಗುರು ಬ್ರಹ್ಮಾನಂದರು ತಪವಗೈದ ಸಂಶಿ, ರಾಯಾಪುರ, ರಬಕವಿ, ತೇರದಾಳ, ಪರಮಾನಂದವಾಡಿಗಳಲ್ಲಿ ದಿವ್ಯ ಮಂದಿರಗಳನ್ನು ನಿರ್ಮಿಸಿ ಭಕ್ತಿಕೇಂದ್ರಗಳನ್ನಾಗಿಸಿದರು. ಸಾಮಾಜಿಕ,ಶೈಕ್ಷಣಿಕ,ಆರ್ಥಿಕ ಕ್ಷೇತ್ರದಲ್ಲಿ ಸೇವೆಗೈದು 2006ರ ಜುಲೈ 6 ರಂದು ಶಿವಾಧೀನರಾದರು. ಅವರ ದಿವ್ಯ ಪ್ರಭೆ ಇಂದಿಗೂ ಬೆಳಗುತ್ತಿದೆ.
ಈಗ ಶ್ರೀಮಠದ ಉತ್ತರಾಧಿಕಾರಿಗಳನ್ನಾಗಿ 2012ಎ ಫೆ. 29 ರಂದು ಬಸವಲಿಂಗ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ ಜರುಗಿಸಲಾಯಿತು. ಪೀಠಾಧಿಕಾರಿಗಳಾದ ಬಳಿಕ ಶ್ರೀ ಗುರುಸಿದ್ಧೇಶ್ವರರೆಂದು ನೂತನ ನಾಮಾಂಕಿತರಾಗಿ ಸದ್ಗುರು ಬ್ರಹ್ಮಾನಂದರು ಮತ್ತು ಸಿದ್ಧೇಶ್ವರರ ಸದಿಚ್ಛೆಯಂತೆ ಯೋಗ, ತತ್ವಚಿಂತನೆ, ಲಿಂಗಧಾರಣೆ ಮುಂತಾದ ಕಾರ್ಯಕ್ರಮಗಳ ಮೂಲಕ ಜನಾನುರಾಗಿಯಾಗಿದ್ದಾರೆ.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಂಸ್ಕೃತಿಕ ಮಹೋತ್ಸವಗಳ ಸಂಗಮ ಇಲ್ಲಿ ಜರುಗುತ್ತಿದೆ. ಇಂದಿನ ಆಧುನಿಕ ಸಮಾಜದ ಅಭಿವೃದ್ಧಿಗೆ ಪೂರಕವಾದ ಹಲವು ಹತ್ತು ಸಾರ್ಥಕ ಕಾರ್ಯಕ್ರಮಗಳು ಮೇಳೈಸುತ್ತಿವೆ.
ಗುರು ಪರಂಪರೆಯ ದ್ಯೋತಕವಾಗಿ ಪ್ರತಿ ವರ್ಷ ಶ್ರಾವಣ ಮಾಸ ಹಾಗೂ ಮಕರ ಸಂಕ್ರಾಂತಿಯಂದು ಪ್ರವಚನ ಹಾಗೂ ವಿಷೇಶ ಕಾರ್ಯಕ್ರಮ ಸಂಸ್ಮರಣೋತ್ಸವಗಳು ಜರಗುತ್ತಿವೆ. ಜ್ಞಾನದಾಸೋಹದ ಮೂಲಕ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಶ್ರೀ ಗುರುಸಿದ್ಧೇಶ್ವರರ ಕೆಲಸ ನಿಜಕ್ಕೂ ಶ್ಲಾಘನೀಯ.
ರಬಕವಿಯಂತಹ ಪ್ರದೇಶದಲ್ಲಿದ್ದುಕೊಂಡು ಶರಣ ಸಂಸ್ಕೃತಿ ಬೆಳೆಸುತ್ತ ಸಮಾಜದ ಪ್ರಗತಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ಯೋಜನೆಗಳನ್ನು ರೂಪಿಸಿ ಮಠದ ಎಲ್ಲ ಭಕ್ತರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿರುವ ಈಗಿನ ಗುರುಸಿದ್ಧೇಶ್ವರರು ಬ್ರಹ್ಮಾನಂದ ಆಶ್ರಮಕ್ಕೆ ಕಳಸ ಪ್ರಾಯರು.
ಇದೇ ಡಿ. 29 ರಿಂದ ಬ್ರಹ್ಮಾನಂದ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಡಿ. 29 ರಿಂದ ಜನೆವರಿ ರಬಕವಿಯ 15 ರವರೆಗೆ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶಿವಯೋಗಿಗಳ 156ನೇ ಜಯಂತ್ಯುತ್ಸವದ ಕಾರ್ಯಕ್ರಮಗಳು ನಡೆಯಲಿವೆ.
ದಿ. 29 ರಂದು ಬೆಳಗ್ಗೆ 9 ಕ್ಕೆ ಹೊಸೂರಿನ ಪರಮಾನಂದ ಸ್ವಾಮೀಜಿಯವರಿಂದ ಪ್ರಣವ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಕ್ಕೆ ಚಿಕೇನಕೊಪ್ಪದ ಚನ್ನವೀರ ಶರಣರ ಜೀವನ ದರ್ಶನ ಕುರಿತು ಪ್ರವಚನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.
ಗುರುಸಿದ್ಧೇಶ್ವರ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ವಿಜಯಪುರದ ಕನ್ನೂರಿನ ಭಾರತೀಯ ಸುರಾಜ್ಯ ಸಂಸ್ಥೆಯಿಂದ ಗಣಪತರಾವ ಮಹಾರಾಜರ ತತ್ವಪ್ರಸಾರ ರಥ ಯಾತ್ರೆಯ ಕುರಿತು ವಿಶೇಷ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಶ್ರೀಕೃಷ್ಣ ಸಂಪಗಾಂವಕರ್, ಸಂಗಪ್ಪ ಕುಂದಗೋಳ, ರವಿ ದೇಸಾಯಿ, ಪ್ರಶಾಂತ ಪಾಲಭಾವಿ, ಸೂರಜ ಕಾಗಲೆ, ಬಲದೇವ ಸಾಬೋಜಿ, ಉಮೇಶ ಖಟಾವಕರ, ಗಿರೀಶ ಮುತ್ತೂರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.
– ಕಿರಣ ಶ್ರೀಶೈಲ ಆಳಗಿ