Advertisement

ಆತ್ಮದ ಬ್ರಹ್ಮಕಲಶವಾಗಲಿ: ಸಚಿವ ರಮಾನಾಥ ರೈ

12:56 PM Feb 21, 2017 | Team Udayavani |

ವಿಟ್ಲ: ದೇವಸ್ಥಾನ, ದೈವಸ್ಥಾನ ಜೀರ್ಣೋದ್ಧಾರ, ಬ್ರಹ್ಮಕಲಶ ಕರಾವಳಿಯಲ್ಲಿ ನಡೆದಷ್ಟು ದೇಶದ ಬೇರಾವ ಭಾಗದಲ್ಲೂ ನಡೆಯುತ್ತಿಲ್ಲ. ಇಷ್ಟೆಲ್ಲ ಸತ್ಕಾರ್ಯ ನಡೆಯುತ್ತಿದ್ದರೂ ಅಪರಾಧ ಚಟುವಟಿಕೆ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕಲುಷಿತಗೊಂಡ ಮನಸ್ಸು ಪರಿಶುದ್ಧವಾಗಬೇಕು. ಎಲ್ಲರ ಮನಸ್ಸು ಮಗುವಿನ ಅರ್ಥಾತ್‌ ದೇವರ ಮನಸ್ಸಾಗಬೇಕು. ಪ್ರಥಮವಾಗಿ ಪ್ರತಿಯೊಬ್ಬರ ಆತ್ಮದ ಬ್ರಹ್ಮಕಲಶವಾಗಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ರವಿವಾರ ಮಂಚಿ ಸಾವಿರದ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ನೂತನ ಮಾಡದಲ್ಲಿ ದೈವಂಗಳ ಪ್ರತಿಷ್ಠೆ, ಬ್ರಹ್ಮಕಲಶ, ನೇಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಮನುಷ್ಯ ಮನುಷ್ಯರ ನಡುವೆ ದ್ವೇಷ, ಅಸೂಯೆ ದೂರವಾಗಬೇಕು. ಜಾತಿ, ಧರ್ಮ, ಭಾಷೆ ಮೀರಿ, ಮಾನವೀಯತೆ ಮೆರೆದು ಸಮಾಜ ಕಟ್ಟುವ ಕಾರ್ಯವಾಗಬೇಕು ಎಂದು ಹೇಳಿದರು.

ಕಾರಣಿಕ ದೈವಗಳು
ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ದೈವಸ್ಥಾನಗಳಲ್ಲಿ ತುಳು ಭಾಷೆ ಜೀವಂತವಾಗಿದೆ. ಅಲ್ಲಿ ಅಸ್ಪೃಶ್ಯತೆ ಇಲ್ಲ. ಸುಪ್ರೀಂ ಕೋರ್ಟ್‌ನ ತೀರ್ಮಾನಗಳು ತೃಪ್ತಿಯಾಗದೆ ದೈವದ ಮುಂದೆ ಪರಿಹಾರವಾದ ಎಷ್ಟೋ ಪ್ರಕರಣಗಳಿವೆ. ಇದು ದೈವಗಳ ಕಾರಣಿಕ ಸಾರುತ್ತದೆ. ದೈವಸ್ಥಾನಕ್ಕೆ ಈ ಹಿಂದೆ 3 ಲಕ್ಷ ರೂ. ಅನುದಾನ ನೀಡಲಾಗಿದ್ದು, ಮತ್ತೆ 2 ಲಕ್ಷ ರೂ. ನೀಡಲಾಗುವುದು ಎಂದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಧಾರ್ಮಿಕ ಸಭೆ ಉದ್ಘಾಟಿಸಿ, ಸಮಿತಿ ಕಾರ್ಯಾಧ್ಯಕ್ಷ ವಿಠಲ ರೈ ಬಾಲಾಜಿಬೈಲು ಅವರನ್ನು ಮಂಚಿಕಟ್ಟೆ ಯುವಕ ವೃಂದದ ವತಿಯಿಂದ ಸಮ್ಮಾನಿಸಿ ಮಾತನಾಡಿ, ದೈವ-ದೇಗುಲಗಳ ಕಾರ್ಯದಲ್ಲಿ ತೊಡಗಿಸಿ ಕೊಂಡ ಭಕ್ತರು ತಮ್ಮ ಕಷ್ಟ, ದುಃಖ ಮರೆಯಲು ಸಾಧ್ಯವಾಗುತ್ತದೆ ಎಂದರು.

Advertisement

ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ, ಬಿ.ಸಿ.ರೋಡ್‌ ಪೊಲೀಸ್‌ ಲೇನ್‌ನ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಸೇಸಪ್ಪ ಕೋಟ್ಯಾನ್‌, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಮೋಂತಿ ಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಿಕಾಸ್‌ ಪುತ್ತೂರು, ಪುಣೆ ಉದ್ಯಮಿ ರೋಹಿತ್‌ ಶೆಟ್ಟಿ ನಗ್ರಿಗುತ್ತು, ಕೋಡಪದವು ಇಕೋವಿಷನ್‌ ರಾಜಾರಾಮ ಭಟ್‌ ಬಲಿಪಗುಳಿ, ಸಾಲೆತ್ತೂರು ವಲಯ ಶ್ರೀ ಕ್ಷೇ. ಧ. ಗ್ರಾ. ಯೋಜನೆ ಮೇಲ್ವಿಚಾರಕ ನವೀನ್‌ ಶೆಟ್ಟಿ, ಮಂಗಳೂರು ಕೋಸ್ಟಲ್‌ ಫಾಮ್ಸ್‌ì ಜನರಲ್‌ ಮೆನೇಜರ್‌ ವೈ.ಬಿ. ಸುಂದರ್‌ ಇರಾ, ಲಯನ್‌ ಪ್ರಾಂತೀಯ ಅಧ್ಯಕ್ಷ ಶಶಿಧರ ಮಾರ್ಲ ಮೊದಲಾದವರು ಭಾಗವಹಿಸಿದ್ದರು.

ಆಡಳಿತ ಮೊಕ್ತೇಸರ ಜಗದೀಶ ರಾವ್‌ ಪತ್ತು ಮುಡಿ, ರವಿ ಕುಮಾರ್‌ ಶೆಟ್ಟಿ ಯಾನೆ ಸಾವಿರದ ಕುಂಞಾಳ ಮಂಚಿಗುತ್ತು, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷರಾದ ಸೂರ್ಯನಾರಾಯಣ ರಾವ್‌ ಪತ್ತುಮುಡಿ, ಶಾಂತಾರಾಮ ಶೆಟ್ಟಿ ಬೋಳಂತೂರು, ಅಧ್ಯಕ್ಷ ಸತೀಶ್‌ ಕುಮಾರ್‌ ಆಳ್ವ ಇರಾಬಾಳಿಕೆ, ಕಾರ್ಯಾಧ್ಯಕ್ಷ ವಿಠಲ ರೈ ಬಾಲಾಜಿಬೈಲು, ಸೇವಾ ಸಮಿತಿ ಅಧ್ಯಕ್ಷ ಮೋಹನ್‌ದಾಸ್‌ ಶೆಟ್ಟಿ ಪುಧ್ದೋಟು ಉಪಸ್ಥಿತರಿದ್ದರು. ಇದೇ ಸಂದರ್ಭ ಮಾಡದ ಪುನಃ ನಿರ್ಮಾಣಕ್ಕೆ ಸಹಕರಿಸಿದ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಧಾರ್ಮಿಕ ಸಭೆ ಸಂಚಾಲಕ ಚಂದ್ರಹಾಸ ರೈ ಬಾಲಾಜಿಬೈಲು ಸ್ವಾಗತಿಸಿದರು. ಧಾರ್ಮಿಕ ಸಭೆ ಸಂಚಾಲಕ ಪುಷ್ಪರಾಜ ಕುಕ್ಕಾಜೆ ಪ್ರಸ್ತಾವನೆಗೈದರು. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಉಮಾನಾಥ ರೈ ಮೇರಾವು ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಶ್ರೀಧರ ಭಂಡಾರಿ ಬಾಲಾಜಿಬೈಲು ವಂದಿಸಿದರು. 

ಆತ್ಮ ಶಕ್ತಿ ಕೊರತೆ
ವಿದ್ವಾನ್‌ ಹಿರಣ್ಯ ವೆಂಕಟೇಶ್ವರ ಭಟ್‌ ಧಾರ್ಮಿಕ ಉಪನ್ಯಾಸ ನೀಡಿ, ಪ್ರಾಚೀನ ಕಾಲದಲ್ಲಿ ವ್ಯಕ್ತಿಗಳ ಆತ್ಮ ಶಕ್ತಿ ಬಲಿಷ್ಠವಾಗಿತ್ತು. ಇಂದು ವ್ಯಕ್ತಿಯಲ್ಲಿ ಆ ಕೊರತೆ ಇದೆ. ಆದುದರಿಂದ ದೈವ-ದೇವರ ಪ್ರತಿಷ್ಠೆಯನ್ನು ಮಂತ್ರ, ತಂತ್ರ, ಮುದ್ರೆಗಳ ಸಹಿತ ಪ್ರತಿಷ್ಠೆ, ಅಭಿಷೇಕ ಮಾಡುವ ಅನಿವಾರ್ಯತೆ ಎದುರಾಗಿದೆ. ದೈವಾರಾಧನೆ ಕೃಷಿಗೆ ಸಂಬಂಧಪಟ್ಟಿದೆ. ಕೃಷಿ ಅಭಿವೃದ್ಧಿ ಹೊಂದಿದರೆ ದೇಶವೇ ಅಭಿವೃದ್ಧಿಯಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next