ಬಂಟ್ವಾಳ: ಸದಾ ಒಂದಿಲ್ಲೊಂದು ಸಮಸ್ಯೆಗಳಿಂದ ಸುದ್ದಿಯಾಗು ತ್ತಿರುವ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾ ದಲ್ಲಿ ಇದೀಗ ಸರ್ವಿಸ್ ರಸ್ತೆ ಕೆಟ್ಟು ಹೋಗಿರುವ ಆರೋಪಗಳು ಕೇಳಿ ಬರುತ್ತಿದೆ. ಸರ್ವಿಸ್ ರಸ್ತೆಯಿಂದ ಹೆದ್ದಾರಿ ಹತ್ತುವಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿ ನಿತ್ಯವೂ ಹತ್ತಾರು ವಾಹನಗಳು ಜಖಂಗೊಳ್ಳುವ ಘಟನೆಗಳು ನಡೆಯುತ್ತಿದೆ.
ಬಿ.ಸಿ.ರೋಡ್ ಭಾಗದಿಂದ ಸರ್ವಿಸ್ ರಸ್ತೆಯಲ್ಲಿ ಸಾಗುವ ವಾಹನಗಳು ಬ್ರಹ್ಮರ ಕೂಟ್ಲು ಬಳಿ ಹೆದ್ದಾರಿಗೆ ಸಂಪರ್ಕಿಸುವಲ್ಲಿ ಸಂಪೂರ್ಣವಾಗಿ ಹೆದ್ದಾರಿ ಹದಗೆಟ್ಟಿದ್ದು, ರಸ್ತೆಯ ಪೂರ್ತಿ ಅಗಲದಲ್ಲಿ ವಾಹನಗಳ ಚಕ್ರಗಳೇ ಮುಳುಗುವಷ್ಟು ದೊಡ್ಡ ಗಾತ್ರದ ಹೊಂಡಗಳು ಸೃಷ್ಟಿಯಾಗಿದೆ. ಹೊಂಡಗಳ ಪರಿಣಾಮ ನಿತ್ಯವೂ ಹತ್ತಾರು ವಾಹನಗಳ ತಳ ಭಾಗ ತಾಗಿ ಜಖಂಗೊಳ್ಳುವ ಘಟನೆ ಗಳು ಕೂಡ ನಡೆಯುತ್ತಿದೆ. ಆದರೆ ಸಂಬಂಧಪಟ್ಟವರ್ಯಾರೂ ಇದರ ಕುರಿತು ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಟೋಲ್ ತಪ್ಪಿಸಿಕೊಂಡು ವ್ಯಾಪಕ ಪ್ರಮಾಣದಲ್ಲಿ ಸಾಗುವ ಲಾರಿಗಳ ಸಾಗಾಟದಿಂದ ಈ ರೀತಿ ಹೊಂಡಗಳು ಸೃಷ್ಟಿಯಾಗಿರುವ ಸಾಧ್ಯತೆ ಇದ್ದು, ಇದೀಗ ಹೊಂಡಗಳು ಕಾರುಗಳಿಗೆ ಸಂಕಷ್ಟವನ್ನು ತಂದಿದೆ. ಈ ಹೊಂಡಗಳನ್ನು ತಪ್ಪಿಸುವ ಭರದಲ್ಲಿ ವಾಹನಗಳು ಕೆಳ ಭಾಗದಲ್ಲಿರುವ ಮತ್ತೂಂದು ರಸ್ತೆಯಲ್ಲಿ ಸಾಗಿದರೆ ಮತ್ತೊಂದು ಹೊಂಡ ಎದುರಾಗುತ್ತದೆ. ಹೀಗಾಗಿ ಈ ಭಾಗದಲ್ಲಿ ವಾಹನಗಳ ಸಂಚಾರವೇ ದುಸ್ತರವೆನಿಸಿದೆ.
ವಾಹನಗಳು ಟೋಲ್ ತಪ್ಪಿಸಿಕೊಂಡು ಹೋಗುತ್ತವೆ ಎಂಬ ಕಾರಣಕ್ಕೆ ಈ ಹೊಂಡಗಳನ್ನು ದುರಸ್ತಿ ಮಾಡದೇ ಇರುವ ಸಾಧ್ಯತೆ ಇದೆ. ಆದರೆ ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಸ್ಥಳೀಯ ವಾಹನಗಳಿಗೂ ಉಚಿತ ಅವಕಾಶ ಇಲ್ಲದೆ ಇರುವುದರಿಂದ ಸರ್ವಿಸ್ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಸಾಗುತ್ತಿದೆ. ಹಿಂದೆ ಸುರತ್ಕಲ್ ಎನ್‌ಐಟಿಕೆ ಟೋಲ್‌ನಲ್ಲಿ ಕೆಎ 19 ವಾಹನಗಳಿಗೆ ಉಚಿತ ಪ್ರಯಾಣದ ಅವಕಾಶವಿತ್ತು.
ಹೀಗಾಗಿ ಸಂಬಂಧಪಟ್ಟ ದ.ಕ.ಜಿಲ್ಲಾಧಿ ಕಾರಿಗಳು ಇತ್ತ ಗಮನಹರಿಸಿ ಬ್ರಹ್ಮರ ಕೂಟ್ಲು ಟೋಲ್ ಪ್ಲಾಝಾ ಬಳಿಯ ಸರ್ವಿಸ್ ರಸ್ತೆಯ ಹೊಂಡಗಳನ್ನು ಮುಚ್ಚಿ ಸುವುದಕ್ಕೆ ಕ್ರಮಕೈಗೊಳ್ಳಬೇಕಿದೆ. ಪ್ರಸ್ತುತ ಮಳೆಯಾಗುತ್ತಿರುವ ಪರಿಣಾಮ ಶಾಶ್ವತ ಪರಿಹಾರ ಸಾಧ್ಯವಾಗದೇ ಇದ್ದರೂ, ತಾತ್ಕಾಲಿಕ ದುರಸ್ತಿ ನಿಟ್ಟಿನಲ್ಲಿ ರಾ.ಹೆ. ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.