Advertisement

ಬ್ರಾಡ್‌ಮನ್‌ಗೆ ಗೂಗಲ್‌ ಡೂಡಲ್‌ ಗೌರವ

02:51 PM Aug 28, 2018 | Team Udayavani |

ಮೆಲ್ಬರ್ನ್: ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌, ಆಸ್ಟ್ರೇಲಿಯದ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ ಅವರ 110ನೇ ಜನ್ಮದಿನದ ಅಂಗವಾಗಿ ಬ್ರಾಡ್‌ಮನ್‌ ಅವರು ಕ್ರಿಕೆಟ್‌ ಶಾಟ್‌ ಹೊಡೆಯುತ್ತಿರುವ ವಿಶೇಷ ರೇಖಾಚಿತ್ರವೊಂದರ ಡೂಡಲ್‌ ಅನ್ನು ಗೂಗಲ್‌ ಸೋಮವಾರ ಪ್ರಕಟಿಸಿದೆ.

Advertisement

ಆಗಸ್ಟ್‌ 27, 1908ರಂದು ಜನಿಸಿದ ಬ್ರಾಡ್‌ಮನ್‌, 20 ವರ್ಷಗಳ ಸುದೀರ್ಘ‌ ಕ್ರಿಕೆಟ್‌ ಬಾಳ್ವೆಯಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸರಣಿಗಳಲ್ಲಿ ಆಜೇಯರಾಗಿ ಉಳಿದ ಆಸ್ಟ್ರೇಲಿಯದ ಪ್ರಖ್ಯಾತ “ದಿ ಇನ್‌ವಿನ್ಸಿಬಲ್ಸ್‌’ ತಂಡದ ನಾಯಕರೂ ಆಗಿದ್ದರು. ನಿವೃತ್ತಿ ಬಳಿಕವೂ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ ಆಡಳಿತಗಾರನಾಗಿ, ಆಯ್ಕೆಗಾರನಾಗಿ, ವೀಕ್ಷಕ ವಿವರಣೆ ಕಾರ ಹಾಗೂ ಲೇಖಕನಾಗಿ ಹೆಸರು ಮಾಡಿದ್ದರು.

ಟೆಸ್ಟ್‌ ಇತಿಹಾಸದಲ್ಲಿ ಗರಿಷ್ಠ ರನ್‌ ಸರಾಸರಿಯ ದಾಖಲೆ ಇನ್ನೂ ಬ್ರಾಡ್‌ಮನ್‌ ಅವರ ಹೆಸರಿನಲ್ಲೇ ಇದೆ. ಸರಣಿಯೊಂದರಲ್ಲಿ ಗರಿಷ್ಠ ಸರಾಸರಿ, ಆಡಿದ ಇನ್ನಿಂಗ್ಸ್‌ಗಳಿಗೆ ಹೋಲಿಸಿದರೆ ಗರಿಷ್ಠ ಶತಕ, ದ್ವಿಶತಕದ ಸಾಧನೆಗಳನ್ನು ಅವರು ಮಾಡಿದ್ದಾರೆ. ಅವರು ಟೆಸ್ಟ್‌ ಪಂದ್ಯಗಳಲ್ಲಿ ಎರಡು ತ್ರಿಶತಕ ಹೊಡೆದ ಮೊದಲ ಬ್ಯಾಟ್ಸ್‌ಮನ್‌. 299 ರನ್‌ ಗಳಿಸಿ ಆಜೇಯರಾಗಿ ಉಳಿದ ಮೊದಲ ಹಾಗೂ ಏಕೈಕ ಆಟಗಾರರೂ ಆಗಿದ್ದಾರೆ. ನಂ. 5 ಆಟಗಾರನಾಗಿ ಕಣಕ್ಕಿಳಿದು ತ್ರಿಶತಕ (304) ಬಾರಿಸಿದ್ದು ಅವರ ಹೆಗ್ಗಳಿಕೆ.

ನೂರಕ್ಕೇರದ ಸರಾಸರಿ!
1948ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಡಿದ ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ಬ್ರಾಡ್‌ಮನ್‌ ಕೇವಲ 4 ರನ್‌ ಗಳಿಸಿದ್ದರೂ ಅವರ ಸರಾಸರಿ 100 ಆಗಿರುತ್ತಿತ್ತು. ದುರದೃಷ್ಟವಶಾತ್‌ ಅಂದು ಅವರು ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರಿಂದ 99.94 ಸರಾಸರಿಯಲ್ಲಿ ಉಳಿಯಬೇಕಾಯಿತು. ಆಡಿದ 52 ಟೆಸ್ಟ್‌ಗಳಿಂದ ಅವರು 6,994 ರನ್‌ ಗಳಿಸಿದ್ದಾರೆ. ಇದರಲ್ಲಿ 29 ಶತಕ ಹಾಗೂ 13 ಅರ್ಧ ಶತಕಗಳು ಒಳಗೊಂಡಿದ್ದು, ಇನ್ನಿಂಗ್ಸ್‌ ಒಂದರಲ್ಲಿ ಗರಿಷ್ಠ 334 ರನ್‌ ಬಾರಿಸಿದ್ದಾರೆ. 2 ವಿಕೆಟ್‌ಗಳನ್ನು ಸಂಪಾದಿಸಿದ್ದು, 32 ಕ್ಯಾಚ್‌ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next