ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿವೆ. ಅದಕ್ಕೆ ಪೂರಕವಾಗಿ ಡೆಮಾಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳಾಗಿರುವ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅಮೆರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಮತದಾರರ ಪೈಕಿ ಶೇ.60 ಮಂದಿ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಬೆಂಬಲ ನೀಡುವ ಇಚ್ಛೆ ವ್ಯಕ್ತಪಡಿಸಿದ್ದರೆ, ಶೇ.32 ಮಂದಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿಲುವು ವ್ಯಕ್ತಪಡಿಸಿದ್ದಾರೆ.
“ಇಂಡಿಯನ್ ಅಮೆರಿಕನ್ ಆ್ಯಟಿಟ್ಯೂಡ್’ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಇದಲ್ಲದೇ ಶೇ.67ರಷ್ಟು ಮಹಿಳೆಯರು ಹಾಗೂ ಶೇ.53ರಷ್ಟು ಪುರುಷರು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಬೆಂಬಲಿಸಿದ್ದಾರೆ.
ಇದರ ಜತೆಗೆ ಭಾರತೀಯ ಅಮೆರಿಕನ್ನರಿಗೆ ಡೆಮಾಕ್ರಟಿಕ್ ಪಕ್ಷದೊಂದಿಗಿನ ಸಂಬಂಧ ಕ್ಷೀಣಿಸುತ್ತಿದೆ ಎಂದು ಡೆಮಾಕ್ರೆಟಿಕ್ ಪಕ್ಷಕ್ಕೆ ಭಾರತೀಯ ಅಮೆರಿಕನ್ನರು ಬೆಂಬಲ ಸೂಚಿಸಿದರೂ ಆ ಸಂಖ್ಯೆಯಲ್ಲಿ ಕುಸಿದಿದೆ ಎಂದು ಸಮೀಕ್ಷೆ ತಿಳಿಸಿದೆ. 2020ರ ಚುನಾವಣೆ ವೇಳೆ ನಡೆಸಿದ್ದ ಸಮೀಕ್ಷೆಯಲ್ಲಿ ಶೇ.56ರಷ್ಟು ಮಂದಿ ಡೆಮಾಕ್ರೆಟ್ಸ್ ಎಂದು ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಆ ಸಂಖ್ಯೆ ಶೇ.47ಕ್ಕೆ ಕುಸಿದಿದೆ. ಇದೇ ವೇಳೆ ರಿಪಬ್ಲಿಕನ್ನರ ಸಂಖ್ಯೆ ಶೇ.21ರೊಂದಿಗೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಸೆ.18ರಿಂದ ಅ.15ರವರೆಗೆ ಆನ್‌ಲೈನ್‌ನಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, 714 ಭಾರತೀಯ ಅಮೆರಿಕನ್ನರನ್ನು ಇದು ಒಳಗೊಂಡಿತ್ತು.