Advertisement

Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ

12:08 AM Nov 08, 2024 | Team Udayavani |

ಬೆಂಗಳೂರು: ಬಂಗಾಲ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕಕ್ಕೆ ಇನ್ನಿಂಗ್ಸ್‌ ಹಿನ್ನಡೆಯ ಭೀತಿ ಎದುರಾಗಿದೆ. ಬಂಗಾಲದ 301 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡುತ್ತಿರುವ ಕರ್ನಾಟಕ, 2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟಿಗೆ 155 ರನ್‌ ಗಳಿಸಿದೆ. ಇನ್ನೂ 146 ರನ್‌ ಹಿಂದಿದೆ.

Advertisement

ಕರ್ನಾಟಕದ 5 ವಿಕೆಟ್‌ 97 ರನ್ನಿಗೆ ಉರುಳಿತ್ತು. ಆದರೆ 6ನೇ ವಿಕೆಟಿಗೆ ಜತೆಗೂಡಿದ ಅಭಿನವ್‌ ಮನೋಹರ್‌ ಮತ್ತು ಶ್ರೇಯಸ್‌ ಗೋಪಾಲ್‌ ಸೇರಿಕೊಂಡು ಜವಾಬ್ದಾರಿಯುತ ಆಟದ ಮೂಲಕ ತಂಡದ ರಕ್ಷಣೆಗೆ ನಿಂತಿದ್ದಾರೆ. ಇಬ್ಬರೂ ಕೊನೆಯ ಅವಧಿಯ 18 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ಅಭಿನವ್‌ ಮನೋಹರ್‌ 50 ರನ್‌, ಶ್ರೇಯಸ್‌ ಗೋಪಾಲ್‌ 23 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ನಾಯಕ ಮಾಯಾಂಕ್‌ ಅಗರ್ವಾಲ್‌ (17), ಕಿಶನ್‌ ಬೆಡಾರೆ (23), ಸುಜಯ್‌ ಸಾತೇರಿ (10), ಸ್ಮರಣ್‌ ಆರ್‌. (26) ಮತ್ತು ಮನೀಷ್‌ ಪಾಂಡೆ (0) ಈಗಾಗಲೇ ಪೆವಿಲಿಯನ್‌ ಸೇರಿದ್ದಾರೆ. ಸೂರಜ್‌ ಸಿಂಧು ಜೈಸ್ವಾಲ್‌ ಮತ್ತು ರಿಷವ್‌ ವಿವೇಕ್‌ ತಲಾ 2 ವಿಕೆಟ್‌ ಉರುಳಿಸಿದರು.

ಇದಕ್ಕೂ ಮುನ್ನ 5ಕ್ಕೆ 249 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ಬಂಗಾಲ 52 ರನ್‌ ಮಾಡುವಷ್ಟರಲ್ಲಿ ಉಳಿದ ಐದೂ ವಿಕೆಟ್‌ ಕಳೆದುಕೊಂಡಿತು. 54 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಶಾಬಾಜ್‌ ಅಹ್ಮದ್‌ 59ರ ತನಕ ಸಾಗಿ ವಾಸುಕಿ ಕೌಶಿಕ್‌ಗೆ ವಿಕೆಟ್‌ ಒಪ್ಪಿಸಿದರು. ಕೌಶಿಕ್‌ 38ಕ್ಕೆ 5, ಶ್ರೇಯಸ್‌ ಗೋಪಾಲ್‌ 87ಕ್ಕೆ 3 ವಿಕೆಟ್‌ ಉರುಳಿಸಿದರು.

ನಿಕಿನ್‌ ಜೋಸ್‌ ತಲೆಗೆ ಏಟು
ಬುಧವಾರ ಕ್ಷೇತ್ರರಕ್ಷಣೆ ಮಾಡುವಾಗ ನಿಕಿನ್‌ ಜೋಸ್‌ ತಲೆಗೆ ಚೆಂಡಿನೇಟು ಬಿದ್ದಿದೆ. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದಾರೆ. ಕಿಶನ್‌ ಬೆಡಾರೆ ಬದಲಿ ಆಟಗಾರನಾಗಿ ಬ್ಯಾಟಿಂಗ್‌ ನಡೆಸಿದ್ದಾರೆ. ನಿಕಿನ್‌ ತಲೆಯಲ್ಲಿ ಸಣ್ಣ ಊತ ಕಂಡುಬಂದಿದ್ದು, ಹೊಲಿಗೆ ಹಾಕಲಾಗಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ಬಂಗಾಲ-301 (ಅನುಸ್ತೂಪ್‌ 101, ಸುದೀಪ್‌ 55, ಶಾಬಾಜ್‌ 55, ವಿ. ಕೌಶಿಕ್‌ 38ಕ್ಕೆ 5, ಶ್ರೇಯಸ್‌ ಗೋಪಾಲ್‌ 87ಕ್ಕೆ 3, ಅಭಿಲಾಷ್‌ ಶೆಟ್ಟಿ 62ಕ್ಕೆ 2). ಕರ್ನಾಟಕ-5 ವಿಕೆಟಿಗೆ 155 (ಅಭಿನವ್‌ ಮನೋಹರ್‌ ಬ್ಯಾಟಿಂಗ್‌ 50, ಸ್ಮರಣ್‌ 26, ಬೆಡಾರೆ 23, ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ 23, ಅಗರ್ವಾಲ್‌ 17, ರಿಷವ್‌ ವಿವೇಕ್‌ 44ಕ್ಕೆ 2, ಸೂರಜ್‌ ಸಿಂಧು ಜೈಸ್ವಾಲ್‌ 53ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next