ಮೆಲ್ಬರ್ನ್: ಬಿಗ್ ಬಾಶ್ ಲೀಗ್‌ನಲ್ಲಿ ಅನಾರೋಗ್ಯ ಸಮಸ್ಯೆಯಿಂದ ಟೂರ್ನಿಯಿಂದ ಹೊರ ನಡೆದಿದ್ದ ಆಸ್ಟ್ರೇಲಿಯದ ಅನುಭವಿ ಆಟಗಾರ ಬ್ರಾಡ್ ಹಾಜ್, ಈ ಋತುವಿ ಅಂತ್ಯದಲ್ಲಿ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದಾರೆ. ಉಲ್ಬಣಿಸಿದ ಅಪೆಂಡಿಕ್ಸ್ ಸಮಸ್ಯೆಯಿಂದಾಗಿ ಕ್ರಿಕೆಟ್‌ಗೆ ವಿದಾಯ ಹೇಳಬೇಕಾಗಿದೆ ಎಂದಿದ್ದಾರೆ.
ದಾರಿ ಇನ್ನೇನು ಮುಗಿಯುವುದರಲ್ಲಿದೆ ಎಂದಿರುವ ಹಾಜ್, “ಈಸ್ಟ್ ಸಾಂಡ್ರಿಗಮ್‌ನಲ್ಲಿ ನಡೆಯುವ ಮೆಲ್ಬರ್ನ್ ಕಪ್‌ನ ಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದೇನೆ. ಅದೇ ನನ್ನ ಕ್ರಿಕೆಟ್ ಬದುಕಿನ ಕೊನೆಯ ಆಟವಾಗಲಿದೆ’ ಎಂದಿದ್ದಾರೆ.
ತನ್ನ ಅನಾರೋಗ್ಯದ ಬಗ್ಗೆ ವಿವರಿಸಿದ ಹಾಜ್, “ಆರೋಗ್ಯ ಸಮಸ್ಯೆಯಿಂದಲೇ ಮೆಲ್ಬರ್ನ್ ರೆನೆಗೇಡ್ಸ್‌ನ 2 ಪಂದ್ಯಗಳನ್ನು ಕಳೆದುಕೊಳ್ಳಬೇಕಾಯಿತು. ಜತೆಗೆ ಬಿಗ್ ಬಾಶ್ ಲೀಗ್‌ನ ಸೆಮಿಫೈನಲ್ಸ್‌ನಲ್ಲಿ ಅಡಿಲೇಡ್ ಸ್ಟೈಕರ್ ವಿರುದ್ಧ ಸೋಲಬೇಕಾಯಿತು’ ಎಂದರು.
ತಂತ್ರಜ್ಞಾನದ ಬೆಂಬಲದಿಂದ ನೀವು ಸ್ವಲ್ಪ ದಿನ ಬದುಕನ್ನು ಸವಿಯಬಹುದಾದರೂ 30-40 ವರ್ಷಗಳ ಬಳಿಕ ನಿಮ್ಮ ಬದುಕಿನ ದಾರಿ ಕೊನೆಗೊಳ್ಳಲಿದೆ ಎಂದು ಡಾಕ್ಟರ್ ಹೇಳಿದ್ದನ್ನು ಹಾಜ್ ನೆನಪಿಸಿಕೊಂಡರು. “ಕಾಲ ನನ್ನ ಪರವಾಗಿತ್ತು. ಅದೃಷ್ಟವೂ ನನ್ನ ಕೈ ಹಿಡಿಯಿತು. ಶನಿವಾರ ಆರೋಗ್ಯ ಕೈಕೊಟ್ಟ ಕೂಡಲೇ ನಾನು ಆಸ್ಪತ್ರೆಗೆ ಹೋದೆ. ನಾನೊಂದು ವೇಳೆ ಆಸ್ಪತ್ರೆಗೆ ಹೋಗುವುದು ಒಂದು ದಿನ ತಡವಾಗಿದ್ದರೂ ಪರಿಸ್ಥಿತಿ ಗಂಭೀರವಾಗುತ್ತಿತ್ತು’ ಎಂದರು.
43ರ ಹರೆಯದ ಬ್ರಾಡ್ ಹಾಜ್ 1993-94ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2005ರಿಂದ 2014 ಅವಧಿಯಲ್ಲಿ ಹಾಜ್ ಒಟ್ಟು 6 ಟೆಸ್ಟ್, 25 ಏಕದಿನ, 15 ಟಿ20 ಪಂದ್ಯಗಳನ್ನು ಆಡಿದ್ದಾರೆ. 2005ರಂದು ವಾಕಾ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 203 ರನ್ ಸಿಡಿಸಿದ್ದು ಹಾಜ್ ಅವರ ಸರ್ವಾಧಿಕ ವೈಯಕ್ತಿಕ ದಾಖಲೆಯಾಗಿದೆ.
ಟಿ20ಯಲ್ಲಿ 7,406 ರನ್‌ಗಳ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಪೇರಿಸಿದ 6ನೇ ಆಟಗಾರನೆಂಬ ಹೆಗ್ಗಳಿಕೆ ಹಾಜ್ ಅವರದು. ರಾಜಸ್ಥಾನ್ ರಾಯಲ್ಸ್, ಕೊಚ್ಚಿ ಟಸ್ಕರ್, ಕೋಲ್ಕತಾ ನೈಟ್‌ರೈಡರ್, ಗಯಾನಾ ಅಮೇಜಾನ್ ವಾರಿಯರ್, ಸೇಂಟ್ ಕಿಟ್ಸ್ ಮತ್ತು ನೆವೀಸ್ ಪ್ಯಾಟ್ರಿಯೋಟ್ಸ್, ಪೇಶಾವರ್ ಜಲಿ¾ ಮೊದಲಾದ ತಂಡಗಳಲ್ಲಿ ಆಡಿರುವ ಹಾಜ್, ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್‌ಗೆ ಕೋಚ್ ಆಗಿದ್ದರರು. ಕಳೆದ ಡಿಸೆಂಬರ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಕೋಚ್ ಹುದ್ದೆಗೂ ಅರ್ಜಿ ಸಲ್ಲಿಸಿದ್ದರು.