ಆಳಂದ: ಕ್ಷೇತ್ರದ ಅಭಿವೃದ್ಧಿಗೆ ಭ್ರಷ್ಟರಿಗೆ ಪಾಠಕಲಿಸಿದರೆ ಆಳಾಗಿ ದುಡಿಯುತ್ತೇನೆ ಎಂದು ಜೆಡಿಎಸ್ ಮುಖಂಡ ಸೂರ್ಯಕಾಂತ ಕೊರಳ್ಳಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೂರದೃಷ್ಟಿಕೋನ ಹೊಂದದೆ ಹಾಗೂ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ಚುನಾವಣೆ ಬಂದಾಗಲೊಮ್ಮೆ ಜನತೆಗೆ ಮೋಸ ಮಾಡಿ ನಾನೊಮ್ಮೆ, ನೀನೊಮ್ಮೆ ಎಂದು ಅಧಿಕಾರಕ್ಕೆ ಬರುತ್ತಿರುವ ಶಾಸಕ ಬಿ.ಆರ್. ಪಾಟೀಲ ಮತ್ತು ಮಾಜಿ ಶಾಸಕ ಸುಭಾಷ ಗುತ್ತೇದಾರ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಟೀಕಿಸಿದರು.
ತಾಲೂಕಿನಲ್ಲಿ ಮದ್ಯಮಾರಾಟ ಬಂದ್ ಮಾಡುತ್ತೇನೆ. ನೂರಾರು ಕೆರೆ ಕಟ್ಟಿ ಹಸಿರು ಕ್ರಾಂತಿ ಮಾಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ಮೇಲೆ ಇದ್ಯಾವುದನ್ನು ಮಾಡದೆ ರಸ್ತೆಯ ಮೇಲೆ ನಾಟಕೀಯವಾಗಿ ಪ್ರತಿಭಟನೆ, ಹೇಳಿಕೆ, ಕೇಳಿಕೆ ಮಾಡುತ್ತಲೆ ಶಾಸಕರು ಜನತೆಯನ್ನು ಮರಳು ಮಾಡುತ್ತಿದ್ದಾರೆ.
ವಾಸ್ತವ್ಯದಲ್ಲಿ ಯಾವ ಅಭಿವೃದ್ಧಿ ಆಗಿದೆ ಎಂದು ಪ್ರಶ್ನಿಸಿದರು. ಸರ್ಕಾರದಿಂದ ರಸ್ತೆ, ನೀರು, ಶಾಲೆ, ಕಟ್ಟಡಗಳಿಗೆ ಯಾರಿದ್ದರೂ ಅನುದಾನ ಬಂದೇ ಬರುತ್ತದೆ. ಇದನ್ನು ನಾನೆ ಮಾಡಿಸಿದ್ದೇನೆ, ನಾನೇ ತಂದಿದ್ದೇನೆ ಎಂದು ನಿತ್ಯ ಗುದ್ದಲಿ ಪೂಜೆ ಮಾಡುತ್ತಾ ಹೋದರೆ ಯಾವ ಪುರುಷಾರ್ಥ ಎಂದು ಪ್ರಶ್ನಿಸಿದರು.
15 ವರ್ಷ ಆಳ್ವಿಕೆ ಮಾಡಿದ ಮಾಜಿ ಶಾಸಕ ಸುಭಾಷ ಗುತ್ತೇದಾರ ತಾಕತ್ತಿದ್ದರೆ ಸಾರಾಯಿ ಮಾರಾಟ ಬಂದ್ ಮಾಡಿ ಎನ್ನುತ್ತಾರೆ. ಇದರರ್ಥ ಏನು? ಜನ ಜಾಣರಾಗಿದ್ದಾರೆ. ಯಾರ ಮಾತಿಗೂ ಕಿವಿಗೊಡುವುದಿಲ್ಲ ಎಂದರು. ಇಂಥ ಶಾಸಕರಿಂದ ಜನರ ಉದ್ಧಾರ ಅಸಾಧ್ಯ. ಸೊನ್ನ ಬ್ಯಾರೇಜ್ ನಿಂದ ಅಮರ್ಜಾ ಅಣೆಕಟ್ಟೆಗೆ ನೀರು ತರುವ ಕಾರ್ಯಾನುಷ್ಠಾನ ಆಗಬೇಕು.
ಇದು ಚುನಾವಣೆ ವಿಷಯ ಆಗಬಾರದು. ಅಫಜಲಪುರ ಮಾಜಿ ಶಾಸಕ ಎಂ.ವೈ. ಪಾಟೀಲ ಮತ್ತವರ ಬೆಂಬಲಿಗರು ನೀರು ಕೊಡಲು ವಿರೋಧಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜಫರ್ ಹುಸೇನ ಇದ್ದರು.