Advertisement
ಬರೋಬ್ಬರಿ 46 ವರ್ಷಗಳ ಹಿಂದಿನ ಮಾತು. ಒಂದೇ ಊರಿನವರಾದರೂ, ಪರಿಚಯದ ಮನೆಯೇ ಆದರೂ, ಆ “ಹುಡುಗ’ನನ್ನು ನಾನು ಮೊದಲ ಬಾರಿಗೆ ನೋಡಿದ್ದು ಕಾಲೇಜಿನಲ್ಲಿದ್ದಾಗಲೇ. ನನ್ನ ನೆರೆಯ ಮನೆಯವನು ಆ ಹುಡುಗನ ಆಪ್ತ ಮಿತ್ರ. ಅವನ ಮದುವೆಗೆ ಹಾಜರಾಗಲು ಈ ಹುಡುಗ ಹುಟ್ಟೂರಿಗೆ ಬಂದ.
Related Articles
Advertisement
“ನೋಡೋ, ಹುಡುಗಿ ನಮ್ಮೂರು, ನಮ್ಮ ಜನ, ಎಲ್ಲಾ ಸರಿ. ಆದ್ರೆ, ನಂದೊಂದೆರಡು ಪರೀಕ್ಷೆ ನಾ ಮಾಡಿಯೇ ಮಾಡ್ತೀನಿ. ಅವಳು ಅದ್ರಲ್ಲಿ ಪಾಸಾದ ಮೇಲೆಯೇ ನಾವು ಒಪ್ಪಿಗೆ ಕೊಡೋದು…’ ಎಂದರು ಅಮ್ಮ. ಹುಡುಗನಿಂದ ಹೀಗೊಂದು ಪತ್ರ ಬಂದಿತು ನನಗೆ- “ನೀನು ಇಂತಿಂಥ ಪರೀಕ್ಷೆಗಳಲ್ಲಿ ಪಾಸಾಗಲೇಬೇಕು, ಪ್ಲೀಸ್ ತಯಾರಾಗು…’ ಆಗಿನ ಮಕ್ಕಳು ಹೆತ್ತವರು ಮಾತನ್ನು ಮೀರುತ್ತಿರಲಿಲ್ಲವಾದ್ದರಿಂದ ಹುಡುಗನಿಗೆ ಭಯ. ಕೊನೆಗೆ ಅಮ್ಮ ಈ ಹುಡುಗಿ ಬೇಡ ಅಂದಿºಟ್ರೆ ಅಂತ.
ಅಮ್ಮ ನಡೆಸಿದ ಪರೀಕ್ಷೆಗಳು ಎರಡು – ಹುಡುಗಿ ಹಾಡು ಹೇಳಲೇಬೇಕು, ಸಣ್ಣ ಸೂಜಿಯಲ್ಲೂ ದಾರ ಪೋಣಿಸಬೇಕು…ಇವೆರಡೇ! ವಧುಪರೀಕ್ಷೆಗೆ ಒಂದು ವಾರವಿದ್ದಾಗ, ದಿನದಲ್ಲಿ ಹತ್ತಾರು ಬಾರಿ ಹಿತ್ತಲಂಗಳಕ್ಕೆ ಓಡಲಾರಂಭಿಸಿದೆ. ಎರಡು ಹಾಡುಗಳನ್ನು ಕಂಠಪಾಠ ಮಾಡಲು. ಅಪ್ಪನಿಗೆ ಗಾಬರಿ, ಪದೇಪದೆ ನಾನು ಹಿತ್ತಲಿಗೋಡುವುದ ಕಂಡು. ಸರಾಗವಾಗಿ ಪೋಣಿಸುವಷ್ಟು ಕಣ್ಣು ಪರ್ಫೆಕ್ಟ್ ಇತ್ತಾದರೂ ಹಾಳು ಆತಂಕ. ಮೂರೊತ್ತೂ ಕೈಯ್ಯಲ್ಲಿ ಸೂಜಿದಾರ, ಪೋಣಿಸೋದು ತೆಗ್ಯೋದು…ಇವೆಲ್ಲ ಗೊತ್ತಿಲ್ಲದ ಅಪ್ಪ-ಅಮ್ಮಂಗೆ ಆತಂಕ, “ಏನಾಗಿದೆ ಇವ್ಳಿಗೆ’ ಅಂತ! ವಧುಪರೀಕ್ಷೆ, ಎರಡು ಹಾಡಿನ ಪರೀಕ್ಷೆಯೊಂದಿಗೆ ಸಂಪನ್ನವಾಯ್ತು. ಗಾಬರಿಗೆ ಸಾಲುಗಳೆಲ್ಲಾ ಕೈಕೊಟ್ಟು. ಕಣ್ಣಿನ ಪರೀಕ್ಷೆಯೇನೂ ನಡೀಲಿಲ್ಲ, ಅವ್ರಿಗೂ ಗೊತ್ತಿತ್ತು; ಆ ವಯಸ್ಸಲ್ಲಿ ಕಣ್ಣೂ ಚೆನ್ನಾಗಿರುತ್ತೆ ಅಂತ. ಮುಂದೆ ಎಲ್ಲವೂ ಸುಖಾಂತವೇ!
(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ uv.avalu@gmail.comಗೆ ಬರೆದು ಕಳಿಸಿ.)
-ಎಸ್.ಪಿ.ವಿಜಯಲಕ್ಷ್ಮೀ