ಕುಷ್ಟಗಿ: 5ನೇ ತರಗತಿ ಬಾಲಕ ಕಿಡ್ನ್ಯಾಪ್ ಪ್ರಕರಣ ಕೆಲವೇ ತಾಸುಗಳಲ್ಲಿ ಸುಖಾಂತ್ಯ ಕಂಡಿದೆ. ಈ ಹುಸಿ ಕಿಡ್ನ್ಯಾಪ್ ಪ್ರಕರಣಕ್ಕೆ ಈ ಬಾಲಕನೇ ಸೂತ್ರದಾರನಾಗಿದ್ದು, ಕಲಿಯಲು ಕಷ್ಟ ಎಂದು ಯಾರೋ ಅಪರಚಿತರು ಕಿಡ್ನ್ಯಾಪ್ ಮಾಡಿದ್ದಾರೆಂದು ತಂದೆಗೆ ಕರೆ ಮಾಡಿ ಯಾಮಾರಿಸಿದ ಪ್ರಹಸನ ನಡೆದಿದೆ.
ಯಲಬುರ್ಗಾ ತಾಲೂಕಿನ ಸಾಲಬಾವಿ ಗ್ರಾಮದ ಲಕ್ಷ್ಮಣಗೌಡ ಶಿವನಗೌಡ ಮಾಲಿಪಾಟೀಲ ಎಂಬ ಬಾಲಕ ಕುಷ್ಟಗಿ ಚಂದ್ರಶೇಖರ ಲೇಔಟ್ ನಲ್ಲಿರುವ ಖಾಸಗಿ ಕೋಚಿಂಗ್ ಸೆಂಟರ್ ನಲ್ಲಿ ಕಲಿಯುತ್ತಿದ್ದ.
ಆತನಿಗೆ ಕಲಿಕೆಯಲ್ಲಿ ಎಳ್ಳಷ್ಟು ಆಸಕ್ತಿ ಇರಲಿಲ್ಲವಾದ್ದರಿಂದ ಪಾರಾಗಲು ತನ್ನ ಮೊಬೈಲ್‌ನಿಂದ ತಂದೆಗೆ ಕರೆ ಮಾಡಿ ತನ್ನನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆಂದು ಹೇಳಿದ ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಇದನ್ನು ನಂಬಿ ಗಾಬರಿಗೊಂಡ ಪಾಲಕರು ಕೂಡಲೇ ಕುಷ್ಟಗಿ ಪೊಲೀಸರಿಗೆ ಮಾಹಿತಿ ನೀಡಿದರು. ಆ ಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ತೀವ್ರಗತಿಯಲ್ಲಿ ಹುಡುಕಾಟ ನಡೆಸಿದಾಗ ಬಾಲಕ ಬಸ್ ನಿಲ್ದಾಣದಲ್ಲಿರುವುದು ಕಂಡು ಬಂತು.
ಬಾಲಕನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಆತ ಕಲಿಯುವುದು ಇಷ್ಟವಿರಲಿಲ್ಲ. ಹೀಗಾಗಿ ಈ ರೀತಿ ಮಾಡಿರುವುದಾಗಿ ತನ್ನ ನಿಜ ಸ್ಥಿತಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
ನಂತರ ಬಾಲಕನ ತಂದೆ ಶಿವನಗೌಡ ಮಾಲಿ ಪಾಟೀಲ ಅವರನ್ನು ಠಾಣೆಗೆ ಕರೆಸಿ ಬಾಲಕ ಲಕ್ಷ್ಮಣಗೌಡನಿಗೆ ಬುದ್ದಿವಾದ ಹೇಳಿಗೆ ಮನೆಗೆ ಕಳುಹಿಸಿದ್ದಾರೆ.