ಚಿತ್ರದ ಶೀರ್ಷಿಕೆಯೇ ಹೇಳುವಂತೆ, “ಇಬ್ಬರು ಬಿ.ಟೆಕ್ ಸ್ಟೂಡೆಂಟ್ ಜರ್ನಿ’ ಚಿತ್ರವು ಇಬ್ಬರೂ ಬಿ.ಟೆಕ್ ಹುಡುಗ ಹುಡುಗಿಯ ಕಾಲೇಜ್ ಜರ್ನಿಯ ಸ್ಟೋರಿಯಾಗಿದ್ದು, ತೆಲುಗಿನ ಪ್ರತಿಷ್ಠಿತ “ನಂದಿ ಅವಾರ್ಡ್’ ವಿಜೇತ ನಿರ್ದೇಶಕ ವೇಮು ಗಂಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವೇಮು ಗಂಟಿ, “ಇಂದಿನ ಹುಡುಗ-ಹುಡುಗಿಯರ ಜೀವನ, ಯೋಜನೆಗಳನ್ನು ಚಿತ್ರದಲ್ಲಿ ಹೇಳಿದ್ದೇವೆ. ಇದರ ಜೊತೆಗೆ ಮದುವೆಯ ನಂತರದ ಸಮಸ್ಯೆಗಳು, ಸವಾಲುಗಳನ್ನೂ ಈ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುವುದು’ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
Advertisement
ಆಂಧ್ರ ಮೂಲದ ಹುಡಗ ಕೃಷ್ಣ ಈ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನವನಟಿ ಕಿರಣ್ ಚೇತ್ವಾನಿ ಕೃಷ್ಣ ಅವರಿಗೆ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ನಟ ಸಾಯಿಕುಮಾರ್, ಬುಲೆಟ್ ಪ್ರಕಾಶ್, ರವಿಕಿರಣ್ ,ವೀಣಾ ಸುಂದರ್, ವಿಜಯ್ ಚಂಡೂರ್ ಮೊದಲಾದ ಕಲಾವಿದರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಚಂದ್ರು ಮಹಾವೀರ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಮಾಜಿ ಸೈನಿಕರಾದ ಪ್ರಹ್ಲಾದ್ ಚಿತ್ರದಲ್ಲಿರುವ ಎಲ್ಲಾ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುಧ್ ಶಾಸ್ತ್ರಿ, ಸಂತೋಷ್ ,ಹೇಮಂತ್, ಚೇತನ್ ನಾಯಕ್, ಸುಪ್ರಿಯ, ಮೇಘನಾ ಜೋಷಿ ಮೊದಲಾದ ಗಾಯಕರು ಧ್ವನಿಯಾಗಿದ್ದಾರೆ. “ಶ್ರೀ ಶಾನ್ವಿ ಆಟ್ಸ್ ಆ್ಯಂಡ್ ಪಿಎಸ್ ಮೂವಿ ಮೇಕರ್ಸ್’ ಬ್ಯಾನರ್‌ನಲ್ಲಿ ಶ್ರೀನಿವಾಸ್ ಯಾದವ್, ವಿನಯ್ ಕುಮಾರ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಪ್ರಾದೇಶಿಕ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ “ಯು’ ಪ್ರಮಾಣಪತ್ರ ಪಡೆದುಕೊಂಡಿರುವ ಈ ಚಿತ್ರವನ್ನು ಇದೇ ಡಿಸೆಂಬರ್ ಅಂತ್ಯದಲ್ಲಿ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.