ಮ್ಯೂನಿಚ್: ಜರ್ಮನಿಯ ಪ್ರಸಿದ್ಧ ಬಾಕ್ಸರ್ ಮುಸಾ ಯಮಕ್ ಅವರು ಬಾಕ್ಸಿಂಗ್ ರಿಂಗ್ ನಲ್ಲೇ ಪ್ರಾಣ ಬಿಟ್ಟಿದ್ದಾರೆ. 38 ವರ್ಷ ಪ್ರಾಯದ ಮೂಸಾ ಯಮಕ್ ಅವರು ಕಳೆದ ಶನಿವಾರ ಮ್ಯೂನಿಚ್ ನಲ್ಲಿ ನಡೆದ ಬಾಕ್ಸಿಂಗ್ ಪಂದ್ಯದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
“ಯುರೋಪಿಯನ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಅಲುಕ್ರಾದ ಬಾಕ್ಸರ್, ನಮ್ಮ ದೇಶವಾಸಿ ಮೂಸಾ ಅಸ್ಕಾನ್ ಯಮಕ್ ಅವರನ್ನು ಹೃದಯಾಘಾತದ ನಂತರ ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದೇವೆ” ಎಂದು ಟರ್ಕಿಯ ಅಧಿಕಾರಿ ಹಸನ್ ತುರಾನ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಉಗಾಂಡದ ಹಂಜಾ ವಂಡೆರಾ ವಿರುದ್ಧ ಮೂಸಾ ಯಮಕ್ ಸೆಣಸುತ್ತಿದ್ದ. ಎರಡು ಸುತ್ತು ಮುಗಿದು ಮೂರನೇ ಸುತ್ತು ಆರಂಭಕ್ಕೆ ಮೊದಲೇ ಮೂಸಾ ರಿಂಗ್ ನಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಗಲೇ ಮುಸಾ ಯಮಕ್ ನಿಧನ ಹೊಂದಿದ್ದರು.
ಇದನ್ನೂ ಓದಿ:ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು
ಟರ್ಕಿ ಮೂಲದ ಬಾಕ್ಸರ್ ಮೂಸಾ ಯಮಕ್ 2017ರಲ್ಲಿ ವೃತ್ತಿಪರ ಬಾಕ್ಸಿಂಗ್ ಆರಂಭಿಸಿದ್ದರು. 2021ರಲ್ಲಿ ವಿಶ್ವ ಬಾಕ್ಸಿಂಗ್ ಫೆಡರೇಶನ್ ಟೈಟಲ್ ಗೆದ್ದ ಬಳಿಕ ಮೂಸಾ ಯಮಕ್ ಪ್ರಸಿದ್ದಿ ಪಡೆದಿದ್ದರು. ಎಲ್ಲಾ ನಾಕೌಟ್ ಪಂದ್ಯಗಳನ್ನು ಗೆದ್ದುಕೊಂಡಿದ್ದ ಮೂಸಾ 8-0 ಅಜೇಯ ದಾಖಲೆ ಹೊಂದಿದ್ದರು.