Advertisement

ಕ್ರೀಡೆಯಿಂದ ಸ್ನೇಹ ವೃದ್ಧಿಯಾಗಿ ಸಂಘಟನೆ ಸದೃಢ: ದಯಾನಂದ ಎಸ್‌. ಶೆಟ್ಟಿ

11:33 AM Feb 15, 2022 | Team Udayavani |

ಮುಂಬಯಿ: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಮೊದಲಾದ ಕರ್ನಾಟಕದ ವಿಭಿನ್ನ ಕಲಾ ಸಂಸ್ಕೃತಿಯನ್ನು ಕಳೆದ 53 ವರ್ಷಗಳಿಂದ ಮಹಾರಾಷ್ಟದ ನೆಲದಲ್ಲಿ  ನವೋದಯ ಕನ್ನಡ ಸೇವಾ ಸಂಘ ಸಂಸ್ಥೆ ಪಸರಿಸುತ್ತಾ ಬಂದಿದೆ. ನವೋದಯ ಇಂಗ್ಲಿಷ್‌ ಹೈಸ್ಕೂಲ್‌ ಮತ್ತು ಜೂನಿಯರ್‌ ಕಾಲೇಜಿನಲ್ಲಿ  ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿ¨ªಾರೆ. ಅನುಭವಿ ಶಿಕ್ಷಕರ ಸಾಧನೆಯಿಂದ ವಿದ್ಯಾರ್ಥಿಗಳು ಯಶಸ್ಸಿನ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಯುವ ಸಮುದಾಯಕ್ಕೆ ಕ್ರೀಡೆಯೊಂದಿಗೆ ಶಿಕ್ಷಣಕ್ಕೆ ಒತ್ತು ನೀಡಿದಲ್ಲಿ  ಪ್ರತಿಭೆಗೆ ತಕ್ಕಂತೆ ಉದ್ಯೋಗ ಲಭಿಸಲು ಸಾಧ್ಯವಾಗಲಿದೆ ಎಂದು ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷ, ನವೋದಯ ಇಂಗ್ಲಿಷ್‌ ಹೈಸ್ಕೂಲ್‌ ಮತ್ತು ಜೂನಿಯರ್‌ ಕಾಲೇಜಿನ ಕಾರ್ಯಾಧ್ಯಕ್ಷ ದಯಾನಂದ ಎಸ್‌. ಶೆಟ್ಟಿ  ಎಳತ್ತೂರುಗುತ್ತು ತಿಳಿಸಿದರು.

Advertisement

ಥಾಣೆ ಪಶ್ವಿ‌ಮದ ಹಜೂರಿ ಪಾಸ್‌ ಪೋರ್ಟ್‌ ಕಚೇರಿಯ ಸಮೀಪದ ಪಡ್ವಲ್‌ ಮೈದಾನದಲ್ಲಿ ಫೆ. 13ರಂದು ಸಂಜೆ ನವೋದಯ ಕನ್ನಡ ಸೇವಾ ಸಂಘ ಥಾಣೆ ಇದರ ನವೋದಯ ಪ್ರೀಮಿಯರ್‌ ಲೀಗ್‌-2022 ಸೀಮಿತ ಓವರ್‌ಗಳ ಬಾಕ್ಸ್‌ ಕ್ರಿಕೆಟ್‌ ಪಂದ್ಯಾಕೂಟದ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೀರ್ಘ‌ಕಾಲದ ಲಾಕ್‌ಡೌನ್‌ನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿಭೆಗಳು ವೇದಿಕೆ ಸಿಗದೆ ಸೊರಗುತ್ತಿವೆ. ಪ್ರತಿಭಾವಂತರು ಮಾನಸಿಕ ಖನ್ನತೆಗೆ ಒಳಪಟ್ಟು ಭವಿಷ್ಯದ ಚಿಂತೆ ಅವರನ್ನು ಕಾಡುತ್ತಿದೆ. ಇಂತಹ ಸಂಕಷ್ಟ ಸಮಯದಲ್ಲಿ ನಮ್ಮ ಆಡಳಿತ ಸಮಿತಿ ಪಂದ್ಯಾಟ ಆಯೋಜಿಸಿ ಯುವಕರಲ್ಲಿ ಮನೋರಂಜನೆ ಜತೆಗೆ ಹೊಸ ಚೈತನ್ಯ ತುಂಬುವ ಕೆಲಸ ಮಾಡಿದೆ. ಇದರಿಂದ ಸ್ನೇಹ ವೃದ್ಧಿಯಾಗಿ ಸಂಘಟನೆ ಸದೃಢವಾಗಲಿದೆ ಎಂದು ತಿಳಿಸಿ, ದಿನಪೂರ್ತಿ ನಡೆದ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿದ್ದ ಸ್ಥಾಪಕ ಮತ್ತು ಥಾಣೆ ಬ್ಯಾಡ್ಮಿಂಟನ್‌ ಅಕಾಡೆಮಿಯ ಅಧ್ಯಕ್ಷ ಶ್ರೀಕಾಂತ್‌ ಎಸ್‌. ವಾಡ್‌ ಮಾತನಾಡಿ, ಸತತ ಅಭ್ಯಾಸ, ಸ್ವಯಂ ಸಾಮರ್ಥ್ಯದಿಂದ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಪಡೆಯಬಹುದು. ಇತ್ತೀಚೆಗಿನ ಐಪಿಎಲ್‌ ಹರಾಜಿನಲ್ಲಿ  ಭಾರತೀಯ ಕ್ರಿಕೆಟಿಗರಿಗೆ ಬಂಪರ್‌ ಕೊಡುಗೆ ಬಂದಿದೆ. ಪೋಷಕರು ಮಕ್ಕಳನ್ನು ಪಠೇತ್ಯರ ಚಟುವಟಿಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದಾಗ ಅವರ ಕನಸು ನನಸಾಗುವುದು. ಪಂದ್ಯಾವಳಿಯಿಂದ ಸಹಬಾಳ್ವೆಯ ವಾತಾವರಣ ಮೈಗೂಡುವುದು. ಯುವಕರನ್ನು ಒಗ್ಗೂಡಿಸುವ ಮೂಲಕ ಐಪಿಎಲ್‌ ಮಾದರಿಯಲ್ಲಿ ತುಂಬಾ ಅಚ್ಚುಕಟ್ಟಾಗಿ ಸಂಘದವರು ಕ್ರಿಕೆಟ್‌ ಆಯೋಜನೆ ಮಾಡಿರುವುದು ಪ್ರಶಂಸನೀಯ ಎಂದರು.

ಸಮಾರಂಭದಲ್ಲಿ ಶ್ರೀಕಾಂತ್‌ ಎಸ್‌. ವಾಡ್‌ ಅವರನ್ನು ಕನ್ನಡ ಸಂಘದ ವತಿಯಿಂದ ಸಮ್ಮಾನಿಸ ಲಾಯಿತು. ಉಪಾಧ್ಯಕ್ಷ ಶಶಿಧರ್‌ ಕೆ. ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರಶಾಂತ್‌ ಕೆ. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ದಯಾನಂದ ಬಿ. ಹೆಗ್ಡೆ, ಜತೆ ಕೋಶಾಧಿಕಾರಿ ಕೀರ್ತಿ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ನಯನಾ ಎಸ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ದರ್ಶನ್‌ ಜೆ. ಶೆಟ್ಟಿ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಬಿಲ್ಲವರ ಅಸೋಸಿಯೇಶನ್‌ ಭಿವಂಡಿ ಸ್ಥಳೀಯ ಸಮಿತಿ, ನವೋದಯ ಕನ್ನಡ ಸೇವಾ ಸಂಘ ಥಾಣೆ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್‌ ನಗರ ಥಾಣೆ, ಮೂಕಾಂಬಿಕಾ ಟೆಂಪಲ್‌ ಘನ್ಸೋಲಿ, ಬಿಲ್ಲವರ ಅಸೋಸಿಯೇಶನ್‌ ಥಾಣೆ ಸ್ಥಳೀಯ ಕಚೇರಿ, ಕನ್ನಡ ಸಂಘ ಘೋಡ್‌ಬಂದರ್‌ ರೋಡ್‌, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ ನೆರುಲ…, ಕನ್ನಡ ಮೀಡಿಯಂ ಹಳೆ ವಿದ್ಯಾರ್ಥಿ ಅಸೋಸಿಯೇಶನ್‌ ಮುಂಬಯಿ, ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಕಚೇರಿ, ವಿದ್ಯಾ ಪ್ರಸಾರಕ ಮಂಡಳಿ ಮುಲುಂಡ್‌, ಕಲ್ವಾ ಫ್ರೆಂಡ್ಸ್‌, ಮುಲುಂಡು ಬಂಟ್ಸ್‌, ಶ್ರೀ ಆದಿಶಕ್ತಿ ಕನ್ನಡ ಸಂಘ ಮಾಜಿವಾಡ, ಹೆಗ್ಗಡೆ ಸೇವಾ ಸಂಘ ಮುಂಬಯಿ, ಕನ್ನಡ ಸಂಘ ವರ್ತಕ್‌ ನಗರ, ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಸಹಿತ ಒಟ್ಟು 16 ತಂಡಗಳು ಭಾಗವಹಿಸಿದ್ದವು. ತೀರ್ಪುಗಾರರಾಗಿ ಗುರುಪ್ರಸಾದ್‌ ರಮಣೆ, ನಿತೇಶ್‌ ಪಟೀಲ್‌, ಪ್ರಥಮೇಶ್‌ ಶಿಂಧೆ, ಅಜಿಂಕ್ಯ ಬಾಲೇಕರ್‌ ಸಹಕರಿಸಿದರು. ಪ್ರವೀಣ್‌ ಶೆಟ್ಟಿ ಮತ್ತು ವೈಭವ್‌ ಚವ್ಹಾಣ್‌ ವೀಕ್ಷಕ ವಿವರಣೆ ನೀಡಿದರು.

Advertisement

ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧಾಕರ ಜಿ. ಕರ್ಕೇರ, ಅವಿನಾಶ್‌ ಎನ್‌. ಶೆಟ್ಟಿ, ಸಂಜೀವ ಎಸ್‌. ಪೂಜಾರಿ, ರಾಘವೇಂದ್ರ ಶೇs…, ಪ್ರಶಸ್ಥ ಎಸ್‌. ಶೆಟ್ಟಿ, ಪ್ರಶಾಂತ್‌ ಎಸ್‌. ಶೆಟ್ಟಿ, ಪ್ರಕಾಶ್‌ ಎಸ್‌. ಆಳ್ವ, ರಾಜೇಶ್‌ ಆರ್‌. ಹೆಗ್ಡೆ, ಪ್ರಖ್ಯಾತ್‌ ಪಿ. ಶೆಟ್ಟಿ, ಪ್ರಶಾಂತ್‌ ಎಸ್‌. ಪೂಜಾರಿ, ಸಂಜೊತ್‌ ಎಸ್‌. ಶೆಟ್ಟಿ, ಶೇಖರ್‌ ಎಸ್‌. ಹೆಗ್ಡೆ, ಅಭಿಷೇಕ್‌ ಆರ್‌. ಶೆಟ್ಟಿ, ರವಿ ಎಸ್‌. ಹೆಗ್ಡೆ, ರೊನಕ್‌ ಕುಂದರ್‌, ಕಾಲೇಜಿನ ಪ್ರಿನ್ಸಿಪಾಲ್‌ ಡಾ| ಉಷಾವತಿ ಶೆಟ್ಟಿ, ರೇಖಾ ಭಂಡಾರಿ, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಮಹಿಳಾ ವಿಭಾಗದವರು, ಯುವ ವಿಭಾಗದವರು, ಶಿಕ್ಷಕರು-ಶಿಕ್ಷಕರೇತರ ಸಿಬಂದಿ, ವಿದ್ಯಾಥಿಗಳು, ಪರಿಸರದ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್‌ ಹೆಗ್ಡೆ ಪರಿಚಯಿಸಿದರು. ಶೋಭಾ ಶೆಟ್ಟಿ, ವೇದಾ ಶೆಟ್ಟಿ  ಮತ್ತು ವೀಣಾ ಶೆಟ್ಟಿ  ಪ್ರಾರ್ಥಿಸಿದರು. ರವಿ ಹೆಗ್ಡೆ ನಿರೂಪಿಸಿ,  ವಂದಿಸಿದರು.

ಬಹುಮಾನ ವಿತರಣೆ :

ಪ್ರಥಮ ಸ್ಥಾನ ಪಡೆದ ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್‌ ನಗರ ಥಾಣೆ ತಂಡಕ್ಕೆ ಟ್ರೋಫಿ, ಪ್ರಮಾಣಪತ್ರ, ಪದಕ, 22,222 ರೂ. ನಗದು ಮತ್ತು ಪ್ರಶಸ್ತಿ, ದ್ವಿತೀಯ ಸ್ಥಾನ ಪಡೆದ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ ನೆರೂಲ್‌ ತಂಡಕ್ಕೆ ಟ್ರೋಫಿ, ಪ್ರಮಾಣಪತ್ರ, ಪದಕ, 11,111 ರೂ. ನಗದು ಮತ್ತು ಪ್ರಶಸ್ತಿಯನ್ನು ಗಣ್ಯರು ವಿತರಿಸಿದರು. ಶ್ರೀ ಅಯ್ಯಪ್ಪ ಸೇವಾ ಸಮೀತಿ ಕಿಸನ್‌ ನಗರ ಥಾಣೆ ತಂಡದ ಮನೋಜ್‌ ಪಂದ್ಯ ಪುರುಷೋತ್ತಮ, ಅದೇ ತಂಡದಿಂದ ಉತ್ತಮ ಎಸೆತಗಾರರಾಗಿ ನಾಗೇಶ್‌ ಮತ್ತು ಉತ್ತಮ ದಾಂಡಿಗರಾಗಿ ಹಷೀತ್‌ ಆಯ್ಕೆಯಾಗಿ ಬಹುಮಾನ ಸ್ವೀಕರಿಸಿದರು.

ನೊಂದವರ ಧ್ವನಿಯಾಗಿರುವ ನಮ್ಮ ಸಂಸ್ಥೆ ಭರವಸೆಯ ಬೆಳಕನ್ನು ಮೂಡಿಸಿದೆ. ದೂರಗಾಮಿ ಯೋಜನೆ, ಸಾಮಾಜಿಕ ಚಿಂತನೆಯಲ್ಲಿ ಮಾನವೀಯ ಮೌಲ್ಯ ಬೆಳೆಸಿದೆ. ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅನೇಕತೆಯಲ್ಲಿ ಏಕತೆಯ ಮನೋಭಾವ ಸಾಧಿಸಿದೆ. ಸಮಗ್ರ ತುಳು, ಕನ್ನಡಿಗರ ಶ್ರೇಯೊಭಿವೃದ್ಧಿ ನಮ್ಮ ಧ್ಯೇಯವಾಗಿದೆ. ಒಗ್ಗಟಿದ್ದರೆ ಮಾತ್ರ ಸಂಘಟನೆ ಯಶಸ್ವಿಯಾಗಲು ಸಾಧ್ಯ. ಅದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ.-ಸುನೀಲ್‌ ಎಸ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ, ನವೋದಯ ಕನ್ನಡ ಸೇವಾ ಸಂಘ ಥಾಣೆ

 

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next