ಕೋವಿಡ್ ಮಹಾಮಾರಿ ತಂದೊಡ್ಡಿದ ಲಾಕ್ ಡೌನ್ ಪರಿಸ್ಥಿತಿ ಸರಿ ಸುಮಾರು ಎರಡು ತಿಂಗಳ ಕಾಲ ಜನರನ್ನು ಮನೆಯಲ್ಲೇ ಇರುವಂತೆ ಮಾಡಿತ್ತು.
ಅದರಲ್ಲೂ ಭಾರತದಲ್ಲಿ ಕೋವಿಡ್ ಸೋಂಕು ಹರಡದಂತೆ ಪ್ರಥಮ ಹಂತದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಸ್ಥಿತಿಯನ್ನು ಘೋಷಿಸಲಾಗಿತ್ತು.
ಈ ಸಂದರ್ಭದಲ್ಲಂತೂ ಸರಿಸುಮಾರು ಎಲ್ಲಾ ಚಟುವಟಿಕೆಗಳೂ ಸ್ತಬ್ಧವಾಗಿದ್ದವು. ಇದು ಹೆಚ್ಚಿನವರಿಗೆ ಬಹಳ ಸಂಕಷ್ಟವನ್ನು ತಂದೊಡ್ಡಿದ್ದಂತೂ ಸುಳ್ಳಲ್ಲ.
ಜನರು ಸರಿಯಾದ ಕೆಲಸ ಕಾರ್ಯಗಳಿಲ್ಲದೆ, ಆದಾಯ ಮೂಲವಿಲ್ಲದೇ ತೊಂದರೆಗೆ ಒಳಗಾಗಿದ್ದ ಸಮಯ ಅದಾಗಿತ್ತು.
ಇದೀಗ ಸರಕಾರ ಲಾಕ್ ಡೌನ್ ಅನ್ನು ಹಂತ ಹಂತವಾಗಿ ಸಡಿಲಿಸಿದ್ದರೂ ವ್ಯಾಪಾರ ವಹಿವಾಟು ಒಂದು ಹಂತಕ್ಕೆ ಬರಲು ಇನ್ನು ಕೆಲವು ತಿಂಗಳುಗಳೇ ಹಿಡಿಯಬಹುದು.
ಅದೇನೇ ಇರಲಿ, ಈ ಲಾಕ್ ಡೌನ್ ಅವಧಿಯಲ್ಲಿ ಹಲವರ ಪ್ರತಿಭೆಗಳು ಹೊರಬಂದದ್ದು ಮಾತ್ರ ಸುಳ್ಳಲ್ಲ. ದೈನಂದಿನ ಜಂಜಾಟದಲ್ಲಿ ಕಳೆದುಹೋಗುತ್ತಿದ್ದವರಿಗೆ ಈ ಲಾಕ್ ಡೌನ್ ಅನ್ನುವುದು ಅವರವರ ಆಸಕ್ತಿಯ ವಿಷಯಗಳತ್ತ ಗಮನಕೊಡಲು ಮತ್ತು ಅವುಗಳನ್ನು ಪುನಃಪ್ರಾರಂಭಿಸಲು ಒಂದು ಸದವಕಾಶವನ್ನು ನಿರ್ಮಿಸಿಕೊಟ್ಟಿತು.
ಸಿಂಗಿಂಗ್, ಡ್ಯಾನ್ಸಿಂಗ್, ಕುಕ್ಕಿಂಗ್, ಪೈಂಟಿಂಗ್.. ಹೀಗೆ ಹಲವರು ತಮ್ಮ ತಮ್ಮ ಇಷ್ಟದ ಹವ್ಯಾಸಗಳನ್ನು ಮನಸೋ ಇಚ್ಛೆ ಮಾಡಿ ತಮ್ಮ ಮನಸ್ಸನ್ನು ಹಗುರಾಗಿಸಿಕೊಂಡರು ಮಾತ್ರವಲ್ಲದೇ ತಮ್ಮನ್ನು ತಾವು ‘ರಿಫ್ರೆಶ್’ ಮಾಡಿಕೊಂಡರು.
ಹಾಗೆಯೇ ನಮ್ಮೂರಿನ ಪ್ರತಿಭೆಯೊಂದು ಈ ಲಾಕ್ ಡೌನ್ ಸಂದರ್ಭದಲ್ಲಿ ಸದ್ದಿಲ್ಲದೇ ಬೆಳಕಿಗೆ ಬಂದಿದೆ. ಗಡಿನಾಡು ಕಾಸರಗೋಡಿನ ಕುಂಬಳೆ ನಿವಾಸಿಯಾಗಿರುವ ಭರತ್ ಆಚಾರ್ಯ ಅವರೇ ಈ ಎಲೆಮರೆಯ ಬಣ್ಣದ ಪ್ರತಿಭೆ!
ಹಾಗೆಂದು ಇವರೇನೂ ವೃತ್ತಿಪರ ಚಿತ್ರಕಲಾವಿದನಲ್ಲ, ಬದುಕಿಗಾಗಿ ಇವರು ಆಯ್ದುಕೊಂಡಿದ್ದು ಟೈಲರಿಂಗ್ ವೃತ್ತಿಯನ್ನು. ಆದರೆ ಲಾಕ್ ಡೌನ್ ಘೋಷಣೆಯಾಗಿ ತಮ್ಮ ವೃತ್ತಿಯಲ್ಲಿ ಬೇಡಿಕೆ ಕಡಿಮೆಯಾದ ಸಂದರ್ಭದಲ್ಲಿ ಭರತ್ ತಮ್ಮ ಪ್ರವೃತ್ತಿಯ ಕಡೆಗೆ ಹೊರಳಿಕೊಂಡರು.
ಪೈಂಟಿಂಗ್ ನಲ್ಲಿ ಈ ಬಾರಿ ವಿಶಿಷ್ಟವೇನಾದರೂ ಮಾಡಬೇಕೆಂದು ಭರತ್ ಅವರಿಗೆ ಹೊಳೆದಾಗ ಅವರ ಕಣ್ಣಿಗೆ ಬಿದ್ದಿದ್ದು ಖಾಲಿ ಬಾಟಲ್ ಗಳು. ಆ ಬಾಟಲ್ ಗಳನ್ನು ತಂದು ಸ್ವಚ್ಛಗೊಳಿಸಿ ಅವುಗಳ ಹೊರ ಮೈ ಮೇಲೆ ಆರ್ಕಲಿಕ್ ಬಣ್ಣಗಳನ್ನು ಬಳಸಿ 40ಕ್ಕೂ ಹೆಚ್ಚು ವಿವಿಧ ಚಿತ್ರಗಳನ್ನು ಭರತ್ ತಮ್ಮ ಮ್ಯಾಜಿಕ್ ಕೈಗಳಿಂದ ಬಿಡಿಸಿದ್ದಾರೆ.
ಪೈಂಟ್ ಅದ್ದಿದ ಬ್ರಶ್ ಹಿಡಿದು ಖಾಲಿ ಬಾಟಲ್ ಮೇಲೆ ಇವರ ಕೈ ಹರಿಯತೊಡಗಿದರೆ ಮತ್ತೊಂದು ಕ್ಷಣದಲ್ಲಿ ಅಲ್ಲಿ ಕಥಕ್ಕಳಿ, ಕೊರಗಜ್ಜ, ಸೂಪರ್ ಮ್ಯಾನ್, ಜೋಕರ್, ತೃಶೂರ್ ಪುರಂ, ಮೋದಿ, ಹನುಮ, ಗಣಪತಿ, ಕಿರುನಗೆಯ ಯುವತಿ… ಹೀಗೆ ಎಲ್ಲಾ ವಿಧದ ಚಿತ್ರಗಳೂ ರೂಪುತಳೆಯುತ್ತವೆ. ಗಾಜಿನ ಬಾಟಲ್ ಗಳ ಮೇಲೆ ರೂಪುತಳೆದ ಈ ಚಿತ್ರಗಳು ನೋಡುಗರು ಕಂಡೊಡನೆ ಎದ್ದುಬರುತ್ತವೆಯೋ ಎನ್ನುವಷ್ಟು ಸ್ವಾಭಾವಿಕವಾಗಿ ಮೂಡಿಬಂದಿರುವುದು ಈ ಕಲಾವಿದನ ಕೈಚಳಕವೇ ಸರಿ.
ಇನ್ನು ತಾನು ಬಿಡಿಸಿದ ಈ ಬಾಟಲಿ ಚಿತ್ರಗಳನ್ನು ಕ್ರಿಯೇಟಿವ್ ರೂಪದಲ್ಲಿ ಫೊಟೋ ಕ್ಲಿಕ್ಕಿಸಿ ನೋಡುಗರ ಮನಸೆಳೆಯುವಲ್ಲಿಯೂ ಭರತ್ ಅವರ ಕ್ರಿಯಾಶೀಲ ಮನಸ್ಸು ಕೆಲಸಮಾಡಿದೆ ಎಂದರೆ ತಪ್ಪಾಗಲಾರದು. ಉರಿಯುವ ಬೆಂಕಿಯ ಹಿನ್ನಲೆಯಲ್ಲಿ ತನ್ನ ಬಾಟಲಿ ಚಿತ್ರಗಳನ್ನು ಇರಿಸಿ ತೆಗೆದಿರುವ ಫೊಟೋಗಳು, ಎಲೆಗಳನ್ನು ಹರಡಿ ಅವುಗಳ ಮಧ್ಯದಲ್ಲಿ ತನ್ನ ಕಲೆಯನ್ನು ಪ್ರದರ್ಶಿಸುವ ರೀತಿ ನೋಡುಗರ ಗಮನವನ್ನು ಖಂಡಿತವಾಗಿಯೂ ಸೆಳೆಯುತ್ತದೆ.
ನಮ್ಮ ಮನೆಯ ಶೋಕೇಸ್ ಗಳಲ್ಲಿ, ಕಛೇರಿಯ ಟೇಬಲ್ ಗಳ ಮೇಲೆ ಅಲಂಕೃತಗೊಳ್ಳುವ ಎಲ್ಲಾ ಅರ್ಹತೆಗಳನ್ನು ಈ ಅಪರೂಪದ ಚಿತ್ರಗಳು ಹೊಂದಿವೆ ಎನ್ನುವುದಕ್ಕೆ ಭರತ್ ಅವರು ಬಿಡಿಸಿರುವ ಈ ಬಾಟಲಿ ಚಿತ್ರಗಳಿಗೆ ಸಿಕ್ಕಿರುವ ಬೇಡಿಕೆಗಳೇ ಸಾಕ್ಷಿಯಾಗಿವೆ.
ತನ್ನ ಟೈಲರಿಂಗ್ ವೃತ್ತಿಯ ಜೊತೆಗೆ ಈ ಕಲಾ ಪ್ರವೃತ್ತಿಯನ್ನೂ ಮುಂದುವರೆಸಿಕೊಂಡು ಹೋದಲ್ಲಿ ಭರತ್ ಆಚಾರ್ಯ ಅವರೊಬ್ಬ ಬೇಡಿಕೆಯ ಚಿತ್ರ ಕಲಾವಿದನಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿರಲಾರದು. ಭರತ್ ಅವರ ಬಾಟಲಿ ಕೈಚಳಕದ ಕೆಲವೊಂದು ಸ್ಯಾಂಪಲ್ ಗಳು ಇಲ್ಲಿವೆ ನೋಡಿ, ಆನಂದಿಸಿ, ಪ್ರೋತ್ಸಾಹಿಸಿ…
ಚಿತ್ರಗಳು ಮತ್ತು ಪೂರಕ ಮಾಹಿತಿ: ಹರ್ಷ, ಪುತ್ತೂರು