ಬೆಂಗಳೂರು: ಗಡಿ ವಿವಾದದ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಜನರಿಗೆ ತೊಂದರೆ ಆಗುತ್ತಿದೆ. ಇದನ್ನು ಸರ್ಕಾರಗಳು ಅರಿತು ಹೆಜ್ಜೆಯಿರಿಸಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಸೊಲ್ಹಾಪುರ, ಕೊಲ್ಲಾಪುರ ಭಾಗದ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಬಸ್‌ಗಳನ್ನು ತಡೆಹಿಡಿಯಲಾಗುತ್ತಿದೆ. ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೂಡ ಗಮನ ಹರಿಸಬೇಕಾಗಿದೆ ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಮಂತ್ರಿಗಳು ರಾಜ್ಯದ ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಹಠತೊಟ್ಟಿದ್ದಾರೆ. ಅವರು ನಮ್ಮ ಜಿಲ್ಲೆಗೆ ಬರಬಹುದು. ಆದರೆ ಇಲ್ಲಿಗೆ ಬಂದು ಸಭೆ ಮಾಡಿ ಜನರ ಭಾವನೆ ಕೆರಳಿಸುವಂತಿಲ್ಲ. ಅದು ತಪ್ಪಾಗುತ್ತದೆ. ಅವರು ಬಂದು ಸರ್ಕಾರದ ಜತೆ ಸಮಸ್ಯೆ ಬಗ್ಗೆ ಚರ್ಚೆ ಮಾಡಲಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಗಡಿ ವಿಚಾರವಾಗಿ ರಕ್ತಪಾತ ಆಗಿತ್ತು ಎಂಬ ಗೃಹ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 40 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಹಿಂದೆ ಮರಾಠಿ ಮಾತನಾಡಿದರೆ ಹಲ್ಲೆ ಮಾಡುತ್ತಿದ್ದರು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಈ ಸುಧಾರಣೆ ಹಿಂದೆ ಕಾಂಗ್ರೆಸ್ ಪಕ್ಷದ ಕೊಡುಗೆ ಇದೆ. ಮರಾಠಿಗರು ಹಾಗೂ ಕನ್ನಡಿಗರ ಮನಸ್ಥಿತಿ ಸುಧಾರಿಸಿದ್ದು, ಕೇವಲ ರಾಜಕೀಯ ಮನಸ್ಥಿತಿ ಮಾತ್ರ ಸುಧಾರಿಸಬೇಕಿದೆ ಎಂದು ತಿಳಿಸಿದರು.