Advertisement

ಬೊರಿವಲಿ ಮಹಿಷಮರ್ದಿನಿ ದೇಗುಲ: ಉತ್ಸವ  

11:21 AM Jun 05, 2018 | Team Udayavani |

ಮುಂಬಯಿ: ಬೊರಿವಲಿ ಪಶ್ಚಿಮದ ಜೈರಾಜ್‌ ನಗರದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್‌ ಇದರ 28ನೇ ವಾರ್ಷಿಕ ಮಹೋತ್ಸವವು ಮೇ 30 ರಂದು ಪ್ರಾರಂಭಗೊಂಡು ಜೂ. 3 ರವರೆಗೆ ವಿವಿಧ  ಕಾರ್ಯಕ್ರಮಗಳೊಂದಿಗೆ ದೇವಸ್ಥಾನದ ಪ್ರಾಂಗಣದಲ್ಲಿ  ಜರಗಿತು.

Advertisement

ಜೂ. 3 ರಂದು ಶ್ರೀ ಕ್ಷೇತ್ರದ ಸ್ಥಾಪಕ ಮೊಕ್ತೇಸರ ವಂಶಸ್ಥರಾದ ಜಯರಾಜ ಶ್ರೀಧರ ಶೆಟ್ಟಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ, ಮೊಕ್ತೇಸರ ಜಯಪಾಲಿ ಅಶೋಕ್‌ ಶೆಟ್ಟಿ ದಂಪತಿಗಳ  ನೇತೃತ್ವದಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದ ಕುಮಾರ ತಂತ್ರಿ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮವಾಗಿ ಕವಾಟೋದ್ಘಾಟನೆ, ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ತುಲಾಭಾರ ಸೇವೆ, ಶ್ರೀ ಮಹಿಷಮರ್ದಿನಿ ಭಜನ ಮಂಡಳಿಯವರಿಂದ ಭಜನೆ, ಅಪರಾಹ್ನ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.

ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ಯಾತ್ರಾ ಹೋಮ, ಉತ್ಸವ ಬಲಿ, ಪಲ್ಲಕಿ ಉತ್ಸವ, ವಿಶೇಷ ಉತ್ಸವವು ವಿಜೃಂಭಣೆಯ ಮೆರವಣಿಗೆಯ ಮೂಲಕ ಅವಭೃಥ ಯಾತ್ರಾ ಮಹೋತ್ಸವ, ಧರ್ಮದೈವ ಕೊಡಮಣಿತ್ತಾಯ ದರ್ಶನದೊಂದಿಗೆ ದೇವರ ಭೇಟಿ, ಹರಿವಾಣ ಕಾಣಿಕೆ, ಕಟ್ಟೆಪೂಜೆ ನೆರವೇರಿತು.

ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ, ಆರ್ಚಕ ವೃಂದ, ಶ್ರೀ ಮಹಿಷಮರ್ದಿನಿ ಭಜನ ಮಂಡಳಿ, ಪರಿಸರದ ಭಕ್ತಾದಿಗಳು, ಹಿತೈಷಿಗಳು, ರಾಜಕೀಯ ನೇತಾರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಉದ್ಯಮಿಗಳು, ದಾನಿಗಳು, ಅಸಂಖ್ಯಾತ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಶ್ರೀ ಕ್ಷೇತ್ರದಲ್ಲಿ ಮೇ 31 ರಂದು ಬೆಳಗ್ಗೆ 6 ರಿಂದ ದೀಪಬಲಿ, ಮಹಾಪೂಜೆ, ಸಂಜೆ 6 ರಿಂದ ಕೃಷ್ಣ ಕಲಾ ಡಾನ್ಸ್‌ ಅಕಾಡೆಮಿ ದಹಿಸರ್‌ ಇವರಿಂದ ಭರತನಾಟ್ಯ, ಸಂಜೆ 7 ರಿಂದ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ನಿತ್ಯ ಬಲಿ ನಡೆಯಿತು. ಜೂ. 1 ರಂದು ಬೆಳಗ್ಗೆ 6 ರಿಂದ ದೀಪ ಬಲಿ, ಮಹಾಪೂಜೆ, ಬೆಳಗ್ಗೆ 9.30 ರಿಂದ ಚಂಡಿಕಾ ಹೋಮ, ಅನ್ನಸಂತರ್ಪಣೆ, ರಾತ್ರಿ 7 ರಿಂದ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ರಾತ್ರಿ 9.30 ರಿಂದ ಸಾರ್ವಜನಿಕ ಮಹಾ ರಂಗಪೂಜೆ, ಪ್ರಸಾದ ವಿತರಣೆ ನೆರವೇರಿತು.

Advertisement

ಜೂ. 2 ರಂದು ಮುಂಜಾನೆ 6 ರಿಂದ ದೀಪ ಬಲಿ, ಮಹಾಪೂಜೆ, ಬೆಳಗ್ಗೆ 9.30 ರಿಂದ ವಾಯುಸ್ತುತಿಪುರಶ್ಚರಣೆ ಹೋಮ, ಮಹಾಪೂಜೆ, ನಿತ್ಯಬಲಿ, ಸಂಜೆ 5.30 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 7 ರಿಂದ ಉತ್ಸವ ಬಲಿ, ವಸಂತಕಟ್ಟೆ ಪೂಜೆ, ಮಹಾಪೂಜೆ, ರಾತ್ರಿ 9.30 ರಿಂದ ಮಹಾಭೂತ ಬಲಿ, ಶಯ್ನಾಕಲ್ವನಂ ಕವಾಟ ಬಂಧನ ಜರಗಿತು. 

ಉಪನಗರ ಬೊರಿವಲಿ ಪರಿಸರದಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುವ ಶ್ರೀ ಮಹಿಷಾಮರ್ದಿನಿ ದೇವಸ್ಥಾನವು ತವರೂರ ಜನತೆಯ ಪೂಜೆ, ಪುನಸ್ಕಾರಗಳ ತಾಣವಾಗಿದೆ. ಪ್ರತಿನಿತ್ಯ ಯಜ್ಞ ಯಾಗಾಧಿಗಳು, ವಿವಾಹ ಮೊದಲಾದ ಶುಭ ಮಂಗಳ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರೀ ಮಹಾಗಣಪತಿ ಮತ್ತು ನಾಗಬನದಲ್ಲಿ ನಾಗದೇವರಿಗೆ ವಿಶೇಷ ಪೂಜೆ, ವಂಶಸ್ಥರು ನಂಬಿಕೊಂಡು ಬಂದಿರುವ ಕೊಡಮಣಿತ್ತಾಯ ದೈವದ ಆರಾಧನೆ ಇಲ್ಲಿ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವುದು ವಿಶೇಷತೆಯಾಗಿದೆ. ಉಡುಪಿ ಪರ್ಯಾಯ ಶ್ರೀಗಳು, ಒಡಿಯೂರು ಶ್ರೀಗಳು, ಅನೇಕ ಗಣ್ಯರು ದೇವಸಾœನಕ್ಕೆ ಭೇಟಿ ನೀಡಿ ಕಾರಣಿಕ ಕ್ಷೇತ್ರವೆಂದು ಬಣ್ಣಿಸಿರುವುದು ಶ್ರೀಕ್ಷೇತ್ರದ ಹೆಗ್ಗಳಿಕೆಯಾಗಿದೆ.

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next