Advertisement

ಬೆಳಗಾವಿಗೆ ಗಡಿ ಸಂರಕ್ಷಣ ಆಯೋಗ ಕಚೇರಿ ಕೂಗು

12:34 AM Dec 29, 2022 | Team Udayavani |

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಗಡಿ ವಿವಾದ ಮತ್ತೆ ಸದ್ದು ಮಾಡುತ್ತಿರುವುದು ಗಡಿ ಭಾಗದಲ್ಲಿ ಹಲವು ಹೊಸ ಚಟುವಟಿಕೆಗಳಿಗೆ ಜೀವ ನೀಡಿದೆ. ಗಡಿ ಅಭಿವೃದ್ಧಿಗಾಗಿರುವ ಕಚೇರಿಗಳ ಸ್ಥಾಪನೆ ವಿಷಯ ಪ್ರಧಾನವಾಗಿ ಮುನ್ನೆಲೆಗೆ ಬಂದಿದೆ.

Advertisement

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೆಲವು ದಿನಗಳ ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸಿಎಂಗಳ ಸಭೆ ನಡೆಸಿ ಎರಡೂ ರಾಜ್ಯಗಳ ಗಡಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವ ವಿಷಯ ಪ್ರಸ್ತಾವಿಸಿದ ಬಳಿಕ ಸುವರ್ಣ ವಿಧಾನಸೌಧದಲ್ಲಿ ಗಡಿ ಸಂರಕ್ಷಣ ಆಯೋಗದ ಕಚೇರಿ ಸ್ಥಾಪನೆಗೆ ಹೆಚ್ಚಿನ ಮಹತ್ವ ಬಂದಿದೆ.

ಗಡಿ ಕಾನೂನು ಸಲಹಾ ಸಮಿತಿ ಬದಲಾಗಿ ಗಡಿ ಸಂರಕ್ಷಣ ಆಯೋಗ ರಚನೆಯಾದಾಗಿನಿಂದ ಈ ಮುಖ್ಯ ಕಚೇರಿಯನ್ನು ಸುವರ್ಣ ವಿಧಾನಸೌಧದಲ್ಲಿ ಆರಂಭಿಸಬೇಕು ಎಂಬ ಬೇಡಿಕೆ ಸಲ್ಲಿಸುತ್ತ ಬಂದಿರುವ ಕನ್ನಡ ಹಾಗೂ ಗಡಿ ಅಭಿವೃದ್ಧಿ ಹೋರಾಟಗಾರರು ಈಗ ಮತ್ತೊಮ್ಮೆ ಸರಕಾರಕ್ಕೆ ತಮ್ಮ ಬೇಡಿಕೆಯ ನೆನಪು ಮಾಡಿಕೊಟ್ಟಿದ್ದಾರೆ.

ಮನವಿಗಳಿಗೆ ಲೆಕ್ಕವಿಲ್ಲ
2005ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಗಡಿ ಕಾನೂನು ಸಲಹಾ ಸಮಿತಿ 2015ರಲ್ಲಿ ವಿ.ಎಸ್‌.ಮಳೀಮಠ ಅಧ್ಯಕ್ಷರಾಗಿದ್ದಾಗ ಮರು ನಾಮಕರಣಗೊಂಡು ಗಡಿ ಸಂರಕ್ಷಣ ಆಯೋಗ ಎಂದು ಬದಲಾವಣೆಯಾಗಿದೆ. ಆಗಿ ನಿಂದಲೂ ಸರಕಾರಕ್ಕೆ ಈ ಕಚೇರಿ ಸ್ಥಳಾಂತರದ ಬಗ್ಗೆ ಒತ್ತಾಯ ಮಾಡಲಾಗುತ್ತಿದೆ. ಆಯೋಗದ ಕಚೇರಿ ಬೆಂಗಳೂರಿನಲ್ಲಿ ಇರುವುದರಿಂದ ಗಡಿ ಭಾಗದ ಜನರಿಗೆ ಈ ಆಯೋಗದ ಬಗ್ಗೆ ಕಲ್ಪನೆಯೇ ಇಲ್ಲ. ಇದರ ಪರಿಣಾಮ ಎಲ್ಲ ಮನವಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಕೆಯಾಗುತ್ತಿದ್ದು ಗಡಿ ಸಂರಕ್ಷಣ ಆಯೋಗಕ್ಕೆ ಸಂಬಂಧಿಸಿದ ವಿಷಯಗಳು ಅಲ್ಲಿಗೆ ತಲುಪುತ್ತಲೇ ಇಲ್ಲ. ತಲುಪಿದರೂ ಯಾವ ಕ್ರಮವೂ ಆಗುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಆಯೋಗ ಬಿಳಿಯಾನೆ ಆಗಲಿದೆ ಎಂಬುದು ಕನ್ನಡ ಹೋರಾಟಗಾರರ ಆತಂಕ.

ಕಳೆದ ಹಲವು ವರ್ಷಗಳಿಂದ ಗಡಿ ಭಾಗದ ಜನರು ಒಂದು ರೀತಿಯಲ್ಲಿ ಭದ್ರ ನೆಲೆಯ ಹುಡುಕಾಟದಲ್ಲಿದ್ದಾರೆ. ಗಡಿ ಅಭಿವೃದ್ಧಿ ಪ್ರಾಧಿಕಾರ ಇದ್ದರೂ ಅದರ ಕಾರ್ಯನಿರ್ವಹಣೆ ತೃಪ್ತಿ ತಂದಿಲ್ಲ. ಈ ಭಾಗದ ಎಷ್ಟೋ ಜನರಿಗೆ ಅದರ ಅಧ್ಯಕ್ಷರು ಯಾರು ಎಂಬುದು ಗೊತ್ತಿಲ್ಲ. ಬೆಳಗಾವಿ ನಗರ ಸಹಿತ ಗಡಿ ಭಾಗದ ಪ್ರದೇಶ ಇನ್ನೂ ಸಾಕಷ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ. ಸರಕಾರದ ಅನುದಾನ ಮತ್ತು ಯೋಜನೆಗಳು ಸಹ ಹೆಚ್ಚಾಗಿ ಗಡಿ ಭಾಗಕ್ಕೆ ಹೋಗುತ್ತಿಲ್ಲ  ಎಂಬ ಆರೋಪ ಮೊದಲಿಂದಲೂ ಇದೆ. ಒಂದೆಡೆ ಕನ್ನಡ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿದ್ದರೆ, ಇನ್ನೊಂದೆಡೆ ನೀರಾವರಿ ಯೋಜನೆಗಳ ಸಂಪೂರ್ಣ ಲಾಭ ಇಲ್ಲಿಯ ರೈತರಿಗೆ ಸಿಕ್ಕಿಲ್ಲ ಎಂಬ ಕೊರಗು ಕಾಡುತ್ತಿದೆ.

Advertisement

ಗಡಿ ಸಂರಕ್ಷಣ ಆಯೋಗ ಎಂಬುದು ಕೇವಲ ಗಡಿ ವಿವಾದಕ್ಕೆ ಸಂಬಂಧಿಸಿದ ಆಯೋಗ ಅಲ್ಲ. ಇದು ಗಡಿ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರದ ಜತೆ ಕೆಲಸ ಮಾಡಲಿದೆ. ಈ ಹಿನ್ನೆಲೆಯಲ್ಲಿ ಆಯೋಗ ಬೆಂಗಳೂರಿ ನಲ್ಲಿ ಇರುವುದಕ್ಕಿಂತ ಬೆಳಗಾವಿಯಲ್ಲಿ ಇರುವುದು ಹೆಚ್ಚು ಸೂಕ್ತ ಎಂಬುದು ಗಡಿ ಅಭಿವೃದ್ಧಿ ಚಿಂತಕರ ಅಭಿಮತ.

ಗಡಿ ಸಂರಕ್ಷಣ ಆಯೋಗವು ಗಡಿ ವಿವಾದದ ಜತೆಗೆ ಗಡಿ ಹಿತರಕ್ಷಣೆ, ಕನ್ನಡ ಶಾಲೆಗಳ ಸ್ಥಿತಿಯಲ್ಲಿ ಸುಧಾರಣೆ ತರುವುದು, ಉದ್ಯಮ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಸಂಬಂಧಿಸಿದ ವಿಷಯಗಳಲ್ಲೂ ಕೆಲಸ ಮಾಡಬೇಕು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು.
– ಜಿನದತ್ತ ದೇಸಾಯಿ, ನಿವೃತ್ತ ನ್ಯಾಯಾಧೀಶರು ಹಾಗೂ ಸಾಹಿತಿ

ಗಡಿ ಭಾಗದ ಜನರ ಮತ್ತು ಸರಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕಿರುವ ಗಡಿ ಸಂರಕ್ಷಣ ಆಯೋಗದ ಮುಖ್ಯ ಕಚೇರಿ ಸುವರ್ಣ ವಿಧಾನಸೌಧದಲ್ಲಿ ಸ್ಥಾಪನೆಯಾಗಬೇಕು. ಸರಕಾರ ಈ ವಿಷಯದಲ್ಲಿ ಸುಳ್ಳು ಭರವಸೆ ನೀಡುವುದು ಬೇಡ. ಬೆಂಗಳೂರಿನಲ್ಲಿ ಈ ಕಚೇರಿಯಿದ್ದರೆ ಗಡಿ ಭಾಗದ ಜನರು ಮೇಲಿಂದ ಮೇಲೆ ಅಲ್ಲಿಗೆ ಅಲೆದಾಡಬೇಕಾಗುತ್ತದೆ.
– ಅಶೋಕ, ಕನ್ನಡ ಸಂಘಟನೆಗಳ ಜಂಟಿ ಕ್ರಿ.ಸಮಿತಿ ಅಧ್ಯಕ್ಷ 

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next