Advertisement

ಗಡಿ ಬಿಕ್ಕಟ್ಟು ಉಲ್ಬಣ; ಅಡಕತ್ತರಿಯಲ್ಲಿ ಉದ್ಯೋಗಿಗಳು

03:01 AM Jul 09, 2020 | Sriram |

ಮಹಾನಗರ: ಕೋವಿಡ್‌ ಆತಂಕದಿಂದಾಗಿ ದಕ್ಷಿಣ ಕನ್ನಡ-ಕಾಸರಗೋಡು ಜಿಲ್ಲಾ ಗಡಿ ಬಂದ್‌ ಆಗಿ ಅತ್ತಿಂದಿತ್ತ ಸಂಚರಿಸುವ ಪ್ರಯಾಣಿಕರಿಗೆ ಎದುರಾಗಿದ್ದ ಸಮಸ್ಯೆ ಇದೀಗ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಮೂಲಕ ಉದ್ಯೋಗಕ್ಕಾಗಿ ಎರಡೂ ಜಿಲ್ಲೆಗಳನ್ನು ಆಶ್ರಯಿಸಿದ್ದವರು ಸಂಚಾರ ನಿಷೇಧ ಕಾರಣದಿಂದ ಮತ್ತೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

Advertisement

ಮಂಗಳೂರು, ಪುತ್ತೂರು ಮೊದಲಾದ ಭಾಗಗಳಿಗೆ ಉದ್ಯೋಗ ನಿಮಿತ್ತ ಹೋಗಿ ಬರುತ್ತಿದ್ದವರು ಮುಂದೆ 28 ದಿನಗಳವರೆಗೆ ಅಲ್ಲೇ ಇರಬೇಕು ಎಂಬ ನಿರ್ಣಯವನ್ನು ಸೋಮವಾರ ಕಾಸರಗೋಡು ಜಿಲ್ಲಾಡಳಿತ ಏಕಾಏಕಿ ಕೈಗೊಂಡ ಕಾರಣದಿಂದ ಆ ಭಾಗದಿಂದ ಕೆಲಸಕ್ಕಾಗಿ ಬರುವವರು ಇದೀಗ ಕೆಲಸಕ್ಕೆ ಬರಲಾರದೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಈ ಮಧ್ಯೆ ಕಾಸರಗೋಡು ಭಾಗಕ್ಕೆ ಹೋಗುವವರಿಗೂ ದಾರಿ ಇಲ್ಲವಾಗಿದೆ.

ಕೋವಿಡ್‌ ವ್ಯಾಪಕ ಆಗುತ್ತಿದ್ದ ಸಂದರ್ಭ ಕರ್ನಾಟಕವು ತನ್ನ ಎಲ್ಲ ಗಡಿಗಳನ್ನು ಬಂದ್‌ ಮಾಡಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಸಂಪರ್ಕಿಸುವ ಗಡಿ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಬಂದ್‌ ಆಗುವಂತಾಯಿತು. ಬಳಿಕ ಪಾಸ್‌ ವ್ಯವಸ್ಥೆಯನ್ನು ಎರಡೂ ಜಿಲ್ಲಾಡಳಿತ ಜಾರಿಗೆ ತಂದ ಕೆಲವೇ ದಿನಗಳಲ್ಲಿ ಮತ್ತೆ ಕೇರಳವು ಗಡಿ ಬಂದ್‌ ತೀರ್ಮಾನ ಕೈಗೊಂಡಿರುವುದು ಪ್ರಯಾಣಿಕರಿಗೆ ಬಿಸಿತುಪ್ಪವಾಗಿದೆ. ಇದು ಉಭಯ ರಾಜ್ಯಗಳ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದ್ದು, ಗಡಿ ದಾಟಿ ಬರಲಾಗದೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಗಡಿ ಸಂಬಂಧಕ್ಕೆ ನೀತಿ-ನಿಯಮ ಅಡ್ಡಿ!
ತುಳುನಾಡಿನ ಭಾಗವಾಗಿರುವ ಕಾಸರಗೋಡು ಜಿಲ್ಲೆಯು ಮಂಗಳೂರಿನೊಂದಿಗೆ ಅವಿನಾಭಾವ ಸಂಬಂಧ ಹಾಗೂ ನಂಟು ಹೊಂದಿಕೊಂಡಿದೆ. ಇದಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಈಗಲೂ ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆ ಪಡೆಯುವವರು, ಉದ್ಯೋಗಿಗಳು ಸಹಿತ ಸಾವಿರಾರು ಜನರು ಎರಡೂ ಜಿಲ್ಲೆಗಳ ಜತೆಗೆ ಬೆಸೆದುಕೊಂಡಿದ್ದಾರೆ. ನಮಗೆ ಎರಡು ರಾಜ್ಯಗಳ ಗಡಿ ಎಂಬುವುದೇ ಗೊತ್ತಿಲ್ಲ. ಜನರಲ್ಲಿಯೂ ಅಂತಹ ಮನೋಭಾವವೇ ಇಲ್ಲ. ಆದರೆ ಕರ್ನಾಟಕ ಹಾಗೂ ಕೇರಳ ಸರಕಾರದ ನೀತಿ-ನಿಯಮಗಳು ನಮ್ಮ ಸಂಬಂಧದ ನಡುವೆ ಗಡಿ ತಂದು ಭಾವನೆಗಳ ಜತೆಗೆ ಚೆಲ್ಲಾಟವಾಡುವಂತೆ ಮಾಡಿದೆ. ಅತ್ತಿಂದಿತ್ತ ಹೋಗಬಾರದೆಂಬ ಸಂವಿಧಾನಬಾಹಿರ ಕ್ರಮಕ್ಕೆ ಮುಂದಾಗಿರುವುದು ಬೇಸರ ತರಿಸಿದೆ. ಇದರ ವಿರುದ್ಧ ಸುಪ್ರಿಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಉದ್ದೇಶಿಸ ಲಾಗಿದೆ ಎಂದು ನ್ಯಾಯವಾದಿ, ಕೇರಳ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಸುಬ್ಬಯ್ಯ ರೈ ತಿಳಿಸಿದ್ದಾರೆ.

ಉದ್ಯೋಗಿಗಳ ಪರದಾಟ; ರೋಗಿಗಳಿಗೂ ಸಮಸ್ಯೆ
ಲಾಕ್‌ಡೌನ್‌ ಸಡಿಲಿಕೆಯಾದ ಕಾರಣ ಕನಿಷ್ಠ ಸಿಬಂದಿ ಮೂಲಕ ಎರಡೂ ಜಿಲ್ಲೆಗಳ ಕಂಪೆನಿ, ಸಂಸ್ಥೆಗಳು ಕಾರ್ಯಾರಂಭ ಮಾಡಿವೆ. ಇಲ್ಲಿ ದುಡಿಯುತ್ತಿರುವವರ ಉಪಯೋಗಕ್ಕಾಗಿ ಎರಡೂ ಜಿಲ್ಲೆಗಳ ಒಪ್ಪಂದದ ಮೇರೆಗೆ ನಿತ್ಯ ಪಾಸ್‌ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದರಂತೆ ಸಾವಿರಾರು ಉದ್ಯೋಗಿಗಳು ಅತ್ತಿಂದಿತ್ತ ಸಂಚರಿಸುತ್ತಿದ್ದರು. ಆದರೆ ಇದೀಗ ಏಕಾಏಕಿ ಕಾಸರಗೋಡು ಜಿಲ್ಲಾಡಳಿತ ತಡೆ ನೀಡಿದ ಹಿನ್ನೆಲೆಯಲ್ಲಿ ಉದ್ಯೋಗಕ್ಕೆ ತೆರಳಲಾಗದೆ ಉದ್ಯೋಗಿಗಳು ಪರದಾಟ ನಡೆಸುವಂತಾಗಿದೆ. ಈ ಮಧ್ಯೆ ಕಾಸರಗೋಡು ಭಾಗದಿಂದ ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಸಾವಿರಾರು ಮಂದಿ ಮತ್ತೆ ಸಮಸ್ಯೆಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯಕೀಯ ಕಾರಣಕ್ಕಾಗಿ ಮಂಗಳೂರನ್ನೇ ನೆಚ್ಚಿಕೊಂಡಿರುವ ಸಾವಿರಾರು ಮಂದಿ ಇದೀಗ ಚಿಕಿತ್ಸೆ ಸರಿಯಾಗಿ ದೊರೆಯದೆ ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.

Advertisement

 ಇಂದು ಮುಖ್ಯ ಕಾರ್ಯದರ್ಶಿ ಜತೆಗೆ ಸಭೆ
ದ.ಕ. ಜಿಲ್ಲೆಗೆ ಕೇರಳದಿಂದ ಆಗಮಿಸುವ ಉದ್ಯೋಗಿಗಳಿಗೆ ಕೇರಳ ಸರಕಾರ ಯಾಕಾಗಿ ನಿರ್ಬಂಧ ವಿಧಿಸಿದೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಬೇಕಾಗಿದೆ. ಹೀಗಾಗಿ ಗುರುವಾರ ಬೆಳಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಸರಕಾರದ ಗಮನ ಸೆಳೆಯಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ
ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

 

 

Advertisement

Udayavani is now on Telegram. Click here to join our channel and stay updated with the latest news.

Next