ನಟ ಜಗ್ಗೇಶ್ ತಮ್ಮ ಬಿಝಿ ದಿನಚರಿ ಮಧ್ಯೆಯೂ ಕೆಲವು ಸಿನಿಮಾಗಳಿಗೆ ಹಾಡುತ್ತಾ, ಧ್ವನಿ ಕೊಡುತ್ತಾ ಹೊಸಬರಿಗೆ ಪ್ರೋತ್ಸಾಹ ನೀಡುತ್ತಿರುತ್ತಾರೆ. ಈಗ ಜಗ್ಗೇಶ್ ಮತ್ತೂಂದು ಹೊಸಬರ ಸಿನಿಮಾಕ್ಕೆ ಹಾಡಿದ್ದಾರೆ. ಅದು “ಡೇಸ್ ಆಫ್ ಬೋರಾಪುರ’ ಚಿತ್ರಕ್ಕೆ. ಈಗಾಗಲೇ “ಡೇಸ್ ಆಫ್ ಬೋರಾಪುರ’ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಜಗ್ಗೇಶ್ ಅವರ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಚಿತ್ರವನ್ನು ಆದಿತ್ಯ ಕುಣಿಗಲ್ ನಿರ್ದೇಶಿಸಿದ್ದು, ಅಜಿತ್ ಕುಮಾರ್ ಹಾಗೂ ಮಧು ಬಸವರಾಜು ಸೇರಿ ಚಿತ್ರ ನಿರ್ಮಿಸಿದ್ದಾರೆ. ಹೆಸರಿಗೆ ತಕ್ಕಂತೆ “ಡೇಸ್ ಆಫ್ ಬೋರಾಪುರ’ ಚಿತ್ರ ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಸಿನಿಮಾ. ಜೊತೆಗೆ ಕಾಮಿಡಿ ಜಾನರ್. ಜಗ್ಗೇಶ್ ಅವರಲ್ಲಿ ಹಾಡಿಸಲು ಅದು ಒಂದು ಕಾರಣವಂತೆ. “ನಮ್ಮ ಚಿತ್ರ ಕಾಮಿಡಿ ಹಿನ್ನೆಲೆಯಲ್ಲಿ ಸಾಗುತ್ತದೆ. ಜಗ್ಗೇಶ್ ಅವರು “ಒಲವಿನ ಪಡಸಾಲೆ’ ಎಂಬ ಹಾಡನ್ನು ಹಾಡಿದ್ದಾರೆ.
ಅದು ಬೋರಾಪುರ ಎಂಬ ಹಳ್ಳಿಯನ್ನು ಪರಿಚಯ ಮಾಡಿಕೊಡುವ ಹಾಡು. ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಹಾಡಿಗೆ ಜಗ್ಗೇಶ್ ಅವರ ಧ್ವನಿ ಇದ್ದರೆ ಚೆನ್ನಾಗಿರುತ್ತದೆ ಎನಿಸಿ ಅವರಲ್ಲಿ ಕೇಳಿಕೊಂಡೆವು. ಅವರು ಕೂಡಾ ಖುಷಿಯಿಂದ ಒಪ್ಪಿಕೊಂಡು ಹಾಡಿದ್ದಾರೆ. ಈಗ ಆ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ’ ಎನ್ನುವುದು ನಿರ್ಮಾಪಕರಲ್ಲೊಬ್ಬರಾದ ಮಧು ಮಾತು.
ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾವಾಗಿದ್ದು, ಪಕ್ಕಾ ಹಳ್ಳಿಯನ್ನು ತೋರಿಸಲಾಗಿದೆಯಂತೆ. ಮಂಡ್ಯ ಕನ್ನಡದಲ್ಲಿ ಇಡೀ ಸಿನಿಮಾದ ಸಂಭಾಷಣೆ ಇದ್ದು, ಹಳ್ಳಿಯ ಜನಜೀವನ, ಅಲ್ಲಿನ ಪರಿಸ್ಥಿತಿ, ಮುಂದೆ ಆಗುವ ಬದಲಾವಣೆಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆಯಂತೆ. ಹಳ್ಳಿಯೊಂದಕ್ಕೆ ವಸ್ತುವೊಂದು ಬಂದ ನಂತರ ಏನೆಲ್ಲಾ ಬದಲಾವಣೆಯಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ ಎಂಬುದು ನಿರ್ಮಾಪಕರ ಮಾತು.
ಆ ವಸ್ತು ಯಾವುದು ಎಂಬ ಕುತೂಹಲಕ್ಕೆ ಸಿನಿಮಾ ತೆರೆಕಾಣುವವರೆಗೆ ಕಾಯಲೇಬೇಕು. ಚಿತ್ರದಲ್ಲಿ ಅನಿತಾ ಭಟ್, ಶಫಿ, ದಿನೇಶ್ ಮಂಗಳೂರು, ಪ್ರಶಾಂತ್, ಸೂರ್ಯ ಸಿದ್ಧಾರ್ಥ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡಿದ್ದಾರೆ. ಚಿತ್ರ ಈ ತಿಂಗಳಾಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.