Advertisement
ಅದರಿಂದ ಅವರೆಲ್ಲರೂ ಹೇಗೆ ಹೊರ ಬರುತ್ತಾರೆ ಎಂಬುದನ್ನ ನಿರ್ದೇಶಕರು ಮಜವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.ಬೋರಾಪುರ ಎಂಬ ಊರಲ್ಲಿ ನಡೆಯುವ ಒಂದು ಕಳವು ಪ್ರಕರಣ ಸುತ್ತ ಇಡೀ ಕಥೆ ಸಾಗುತ್ತದೆ. ಒಂದೇ ಒಂದು ಕಳುವು ಪ್ರಕರಣ ಇಟ್ಟುಕೊಂಡು, ಎಲ್ಲಾ ಪಾತ್ರಗಳನ್ನು ಅದರ ಹಿಂದೆಯೇ ಗಿರಕಿ ಹೊಡೆಯುವಂತೆ ಮಾಡಿರುವುದು ನಿರ್ದೇಶಕರ ಜಾಣತನ.
Related Articles
Advertisement
ಇಡೀ ಚಿತ್ರದಲ್ಲಿ ಕಾಡುವ ಅಂಶವೆಂದರೆ, ಒಂದು ಸಣ್ಣ ಕಥೆ. ಉಳಿದಂತೆ ಆಯ್ಕೆ ಮಾಡಿಕೊಂಡಿರುವ ಪಾತ್ರ ಮತ್ತು ಪರಿಸರ. ಇವೆಲ್ಲವೂ ಆ ಚಿತ್ರಕ್ಕೆ ಪೂರಕ. ಅದು ಬಿಟ್ಟರೆ, ಹೆಚ್ಚೇನೂ ಪವಾಡಗಳಿಲ್ಲ. ಒಂದು ಹಳ್ಳಿ ಚಿತ್ರಣವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಸಫಲ. ಆದರೆ, ಮನರಂಜನೆ ಕೊಡಬೇಕು ಎಂಬ ಧಾವಂತದಲ್ಲಿ ಅಸಹ್ಯ ಹುಟ್ಟಿಸುವ ಕೆಲ ದೃಶ್ಯಗಳನ್ನು ಇಟ್ಟು, ಬೋರಾಪುರದ ಪರಿಸರವನ್ನು ಹದಗೆಡಿಸಲಾಗಿದೆ.
ಆ ಊರಲ್ಲಿ ಪ್ರೇಮಿಗಳಿದ್ದಾರೆ, ಭಗ್ನಪ್ರೇಮಿ ಸಂಗ ಇದ್ದಾನೆ, ಹೊಟ್ಟೆ ಪಾಡಿಗೆ ಬಣ್ಣ ಹಚ್ಚುವ ನಿಂಗಿಯೂ ಕಾಣಸಿಗುತ್ತಾಳೆ, ಸಾಲ ಕೇಳ್ಳೋ ರಂಗಣ್ಣ, ಸಿಕ್ಕಿದ್ದನ್ನೆಲ್ಲಾ ಕದಿರೋ ಕಳ್ಳರು, ಹಳೇ ಪಾತ್ರೆ, ಕಬ್ಬಿಣ ಖರೀದಿಸೋ ಫಕೀರ, ಟೀ ಅಂಗಡಿ ಮಾದಣ್ಣ, ಪಿಂಚಣಿ ಪಡೆಯೋ ಮೇಷ್ಟ್ರು, ಊರ ಗೌಡ ಹೀಗೆ ತರಹೇವಾರಿ ಪಾತ್ರಗಳು ಕಾಣಸಿಗುತ್ತವೆ. ಇವೆಲ್ಲವೂ ಮುಗ್ಧತೆಯ ಪಾತ್ರಗಳು.
ಆದರೆ, ಅಮಾಯಕರಂತೂ ಅಲ್ಲ. ಇಂತಹ ಪಾತ್ರಗಳಿರುವ ಬೋರಾಪುರಕ್ಕೆ ಬ್ಯಾಂಕ್‌ವೊಂದರ ಮ್ಯಾನೇಜರ್, ಎಟಿಎಂ ಹಾಕುವ ನಿರ್ಧಾರ ಮಾಡುತ್ತಾರೆ. ಅದರಂತೆ, ಎಟಿಎಂ ಬೋರಾಪುರಕ್ಕೆ ಬರುತ್ತೆ. ಊರ ಜನರ ಸಮ್ಮುಖದಲ್ಲಿ ಹೊಸ ಎಟಿಎಂಗೆ ಪೂಜೆಯೂ ಆಗುತ್ತೆ. ಆ ಊರಿನ ಕಳ್ಳರಿಬ್ಬರು ಒಂದು ರಾತ್ರಿ ಎಟಿಎಂ ಮೆಷಿನ್ ಕದಿಯುತ್ತಾರೆ. ಅವರಿಗೆ ಆ ಎಟಿಎಂ ಮೆಷಿನ್‌ನಲ್ಲಿ ದುಡ್ಡು ಇದೆ ಎಂಬುದು ಗೊತ್ತಿಲ್ಲ.
ಆದರೆ, ಕಬ್ಬಿಣದ ಎಟಿಎಂ ಮೆಷಿನ್‌ನನ್ನು ಗುಜರಿಗೆ ಹಾಕಿ ಹಣ ಪಡೆಯುವ ಉದ್ದೇಶ ಅವರದು. ಎಟಿಎಂ ಕಳುವಾಗುತ್ತೆ ನಿಜ. ಆದರೆ, ಆ ಎಟಿಎಂ ಮೆಷನ್ ಕಳುವಿನ ಹಿಂದೆ ಊರಿನ ಆರೇಳು ಮಂದಿಯ ಪಾಲೂ ಇರುತ್ತೆ! ಅದೇ ಚಿತ್ರದ ಹೈಲೈಟ್. ಪೊಲೀಸರೆಂದರೆ ಅವರಿಗೆ ಭಯ, ಕೊನೆಗೆ ಎಟಿಎಂ ಸಿಗುತ್ತಾ, ಕದ್ದವರು ಸಿಕ್ಕಿಬೀಳುತ್ತಾರಾ ಇತ್ಯಾದಿ ಪ್ರಶ್ನೆಗೆ ಉತ್ತರ ಬೇಕಿದ್ದರೆ, “ಬೋರಾಪುರ’ದ ದಿನಗಳನ್ನು ಮೆಲುಕು ಹಾಕಿಬರಬಹುದು.
ಇಲ್ಲಿರುವ ಪ್ರತಿಯೊಬ್ಬ ಕಲಾವಿದರು ಹೊಸಬರೇ. ಎಲ್ಲರೂ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನಿತಾಭಟ್ ಇರುವಷ್ಟು ಕಾಲ ಗಮನಸೆಳೆಯುತ್ತಾರೆ. ದಿನೇಶ್ ಮಂಗಳೂರು ಮಾನವೀಯತೆ ಇರುವ ಗೌಡರಾಗಿ ಇಷ್ಟವಾಗುತ್ತಾರೆ. ಮನುಶೆಟ್ಟಿ ಸಂಭಾಷಣೆ ಹಳ್ಳಿ ಪರಿಸರಕ್ಕೆ ತಕ್ಕದ್ದಾಗಿದೆ. ವಿವೇಕ್ ಚಕ್ರವರ್ತಿ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಸರವಣನ್ ಛಾಯಾಗ್ರಹಣದಲ್ಲಿ ಹಳ್ಳಿ ಸೊಗಡು ತುಂಬಿದೆ.
ಚಿತ್ರ: ಡೇಸ್ ಆಫ್ ಬೋರಾಪುರನಿರ್ಮಾಣ: ಅಜಿತ್‌ಕುಮಾರ್ ಗದ್ದಿ, ಮಧು ಬಸವರಾಜ್, ರಕ್ಷಗದ್ದು, ಶಾಂತಲಾ
ನಿರ್ದೇಶನ: ಆದಿತ್ಯ ಕುಣಿಗಲ್
ತಾರಾಗಣ: ಪ್ರಶಾಂತ್ ಸೂರ್ಯ ಸಿದ್ಧಾರ್ಥ, ಅನಿತಾಭಟ್, ಅಮಿತ್, ಪ್ರಕೃತಿ, ದಿನೇಶ್ ಮಂಗಳೂರು, ರಘು ಪಾಂಡೇಶ್ವರ್, ಪ್ರಶಾಂತ್ ವರದಮಾಲ ಇತರರು. * ವಿಜಯ್ ಭರಮಸಾಗರ