ನವದೆಹಲಿ:ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶುಭ ಸುದ್ದಿಯನ್ನು ನೀಡಿದೆ. ಇನ್ಮುಂದೆ ರೈಲು ನಿಲ್ದಾಣದಿಂದ ಹೊರಡುವ ಕೇವಲ ಐದು ನಿಮಿಷದ ಮೊದಲು ಟಿಕೆಟ್ ಕಾಯ್ದಿರಿಸಲು ಮತ್ತು ರದ್ದುಗೊಳಿಸುವ ಅವಕಾಶ ನೀಡಿದೆ.
ರೈಲ್ವೆ ಇಲಾಖೆಯ ಈ ಹೊಸ ಕಾನೂನು ಕೋವಿಡ್ ಸಂದರ್ಭದಲ್ಲಿ ಸಂಚರಿಸುವ ಎಲ್ಲಾ ವಿಶೇಷ ರೈಲುಗಳಿಗೆ ಅನ್ವಯಿಸಲಿದೆಯಂತೆ. ಅಲ್ಲದೇ ಇಂದಿನಿಂದಲೇ (ಅಕ್ಟೋಬರ್ 10,2020) ಈ ಕಾನೂನು ಜಾರಿಯಾಗಲಿದೆ ಎಂದು ತಿಳಿಸಿದೆ.
ಕೋವಿಡ್ 19 ಸೋಂಕಿನಿಂದಾಗಿ ಕಳೆದ ಕೆಲವು ತಿಂಗಳಿನಿಂದ ನಿಲ್ಲಿಸಲಾಗಿದ್ದ ರೈಲು ಸಂಚಾರ ಆರಂಭಿಸಿದ್ದು, ಈ ನಿಟ್ಟಿನಲ್ಲಿ ರೈಲು ಹೊರಡುವ 30 ನಿಮಿಷದ ಮೊದಲು 2ನೇ ರಿಸರ್ವೇಶನ್ ಪಟ್ಟಿಯನ್ನು ಸಿದ್ದಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದೆ.
ಈ ಮೊದಲು ರೈಲು ನಿಗದಿತ ಸಮಯಕ್ಕೆ ಹೊರಡುವ ಎರಡು ಗಂಟೆ ಮೊದಲು ಎರಡನೇ ರಿಸರ್ಸ್ ವೇಶನ್ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿತ್ತು. ಅಲ್ಲದೇ ಪ್ರಯಾಣಿಕರು ಪ್ರಯಾಣಿಸುವ ಮೊದಲ ರಿಸರ್ವೇಶನ್ ಪಟ್ಟಿಯನ್ನು ರೈಲು ನಿಗದಿತ ಸಮಯಕ್ಕೆ ಹೊರಡುವ ನಾಲ್ಕು ಗಂಟೆಗಳ ಮೊದಲು ಸಿದ್ದಪಡಿಸಲಾಗುತ್ತಿತ್ತು ಎಂದು ವರದಿ ವಿವರಿಸಿದೆ.
ಭಾರತೀಯ ರೈಲ್ವೆ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ರೈಲ್ವೆ ವಲಯದ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರೈಲು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲು ಹೊರಡುವ ನಿಗದಿತ ಸಮಯಕ್ಕಿಂತ 30 ನಿಮಿಷಗಳ ಮೊದಲು ಎರಡನೇ ರಿಸರ್ವೇಶನ್ ಪಟ್ಟಿ ಸಿದ್ದಪಡಿಸಲು ನಿರ್ಧಾರ ತೆಗೆದುಕೊಂಡಿದ್ದು, ಇದರಿಂದಾಗಿ ರೈಲು ಹೊರಡುವ 5 ನಿಮಿಷದ ಮೊದಲು ಟಿಕೆಟ್ ಬುಕ್ಕಿಂಗ್ ಅಥವಾ ರದ್ದು ಮಾಡಬಹುದಾಗಿದೆ ಎಂದು ವಿವರಿಸಿದೆ.
ರೈಲು ಹೊರಡುವ ಐದು ನಿಮಿಷದ ಮೊದಲು ಸೀಟು ಲಭ್ಯವಿದ್ದಲ್ಲಿ ರೈಲ್ವೆ ಕೌಂಟರ್ ಗಳಲ್ಲಿ ಅಥವಾ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಅಥವಾ ರದ್ದು ಮಾಡಲು ಅವಕಾಶ ಇದೆ ಎಂದು ಹೇಳಿದೆ.