Advertisement

ಸಂವೇದನೆಗೆ ಧ್ವನಿಕೊಟ್ಟ ‘ಮನಸು ಅಭಿಸಾರಿಕೆ’

02:16 PM Apr 11, 2021 | ಶ್ರೀರಾಜ್ ವಕ್ವಾಡಿ |

ಕಥೆಗಾರನಾದವನಿಗೆ ಬದುಕನ್ನು ಬಂದ ಹಾಗೆ ಸ್ವೀಕರಿಸುವ, ಸ್ವೀಕರಿಸಿದ್ದನ್ನು ಗೆಲ್ಲುವ, ಉರಿ ಎಬ್ಬಿಸುವ ಎದೆಗೊದೆವ ನೋವುಗಳನ್ನು ನುಂಗುವ, ಅಂತಿಮ ಗುರಿಯನ್ನು ಕಂಡುಕೊಳ್ಳುವ ಗುಣ ಇರಬೇಕು.

Advertisement

ಕಥೆಗಳು ವಸ್ತುವಿನ ಆಳಕ್ಕಿಳಿದು ಅದನ್ನು ಎಲ್ಲಾ ರೀತಿಯಲ್ಲೂ  ಒಟ್ಟಾಗಿ ನೋಡುವ ಸಮಕ್ಷಮತೆಯ ಒಳಾರ್ಥವನ್ನು ಬಿಂಬಿಸುವ ಹೆಚ್ಚುಗಾರಿಕೆಯನ್ನು ಹೊಂದಿರಬೇಕು.

ಈ ಮೇಲಿನ ಗುಣವನ್ನು ಹೊಂದಿದವ ಒಬ್ಬ ನಿಜವಾದ ಕಥೆಗಾರನಾಗುವುದಕ್ಕೆ ಸಾಧ್ಯ, ಆತ ಬರೆದು ಕರೆದ ಕಥೆಗಳು ಓದುಗರಿಂದ, ಹೌದು ಇದು ನಿಜವಾದ ಕಥೆ ಅಂತ ಒಪ್ಪಿಗೆ ಪಡೆಯಲು ಸಾಧ್ಯವಾಗುತ್ತದೆ.

ಚೌಕಟ್ಟುಗಳನ್ನು ಮೀರುವುದು ಬದುಕಲ್ಲ, ಕಟ್ಟುವುದು ಮಾತ್ರ ಕಥೆಯಲ್ಲ‌.‌ ಹೆಣೆದುಕೊಳ್ಳುವುದು ಕೂಡ ಕಥೆ ಅಂತನ್ನಿಸಿಕೊಳ್ಳುತ್ತವೆ. ಕಥೆಗಳು ಓದುವಾಗ ಅದು ಯಾವುದೇ ಚೌಕಟ್ಟಿಲ್ಲದೇ ಸ್ವತಂತ್ರವಾಗಿ ಹೆಣೆದುಕೊಂಡಿದ್ದು ಎಂದು ಓದುಗನೊಬ್ಬನಿಗೆ ಅನ್ನಿಸಿದಾಗ ಆ ಕಥೆ ಗೆಲುವು ಕಂಡಿದೆ ಎಂದರ್ಥ.

 ಓದಿ : ರಾಜ್ಯದ ಕೋವಿಡ್ ಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿ

Advertisement

‘ಮನಸು ಅಭಿಸಾರಿಕೆ’ ಅಂತಹುದೇ ಕಥೆಗಳನ್ನೊಳಗೊಂಡ ಕೃತಿ. ಕೊಡಗಿನ ಮೂಲದವರಾದ, ಕನ್ನಡ ಕಥಾ ಸಾಹಿತ್ಯ ಕ್ಷೇತ್ರದ ಇತ್ತಿಚೆಗಿನ ಬರಹಗಾರರಲ್ಲಿ ಅಗ್ರ ಪಂಕ್ತಿಯಲ್ಲಿರುವ ಶಾಂತಿ ಕೆ. ಅಪ್ಪಣ್ಣ ಅವರ ಬದುಕು ಕಂಡ ಏಟುಗಳು ಮತ್ತದನ್ನು ಸಹಿಸಿಕೊಂಡ ಅನುಭವಗಳ ತೇಲ್ನೋಟ ಈ ಕೃತಿ ಅಂತ ನನಗನ್ನಿಸುತ್ತದೆ‌‌.

ಇಲ್ಲಿನ ಹದಿನಾಲ್ಕು ಕಥೆಗಳಲ್ಲಿ ಒಂದೊಂದು ಪಾತ್ರದಲ್ಲಿ ಕಥೆಗಾರ್ತಿ ನಿರೂಪಕಿಯ ಸ್ಥಾನವನ್ನು ಹೊತ್ತುಕೊಂಡು ತನ್ನ ಬದುಕು ಮತ್ತು ತನ್ನ ಬದುಕಿನ ಸುತ್ತ ನಡೆದ, ನಡೆಯುತ್ತಿರುವ ಬದಲಾವಣೆ ಕಾಣಬಾರದ ಹಾಗೆ ಬದಲಾವಣೆಯಾದ,‌ಸಹಜತೆಯನ್ನು ಕಳೆದುಕೊಂಡು ಬೇರೂರಿ, ಅದರಿಂದ ಹೊರಗೆ ಬರಲು ಆಗದ ರೀತಿಯಲ್ಲಿ ನಾವು ಅದರೊಂದಿಗೆ ಬೆರೆತು ಬಿಟ್ಟ ಬೇರೆ ಬೇರೆ ವರ್ತನೆಯ ದರ್ಶನವನ್ನು ತೋರಿಸುವ ಪ್ರಯತ್ನ ಮೆಚ್ಚುಗೆಗೆ ಯೋಗ್ಯವಾದದ್ದು.

ಬದುಕಿನ ಬಾಹ್ಯ ಹಾಗೂ ಆಂತರ್ಯದ ಚಡಪಡಿಕೆ, ಸಹನೆ ಮೀರಿ ಆಗಿ ಹೋದ ಪಲ್ಲಟಗಳು ಕಥೆಗಳನ್ನು ಗಟ್ಟಿಗೊಳಿಸಿವೆ ಎನ್ನುವುದು ಇಲ್ಲಿನ ಹಲವು ಕಥೆಗಳಲ್ಲಿ, ಕಥೆಗಳ ಆಳದಲ್ಲಿ ನಾವು ಗಮನಿಸಬಹುದು.

ಕಾಮಾದಿ ಅರಿಷಡ್ವರ್ಗಗಳಂತಹ ಮನುಷ್ಯನ ಸಹಜ ಭಾವನೆಗಳ ಬಯಕೆಗಳಿಗೆ ಸಿಲುಕಿ ತೊಳಲಾಡುವ ಸಾಮಾನ್ಯ ವಿಷಯಗಳು ಕೆಲವು ಕಥೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡರೂ ಸಂವೇದನೆಯ ಗರ್ಭ ಓದುಗನನ್ನು ಸೆಳೆದುಕೊಂಡು ಓದಿಗೆ ವೇಗವನ್ನು ನೀಡುತ್ತವೆ.

ಗದ್ಯ ಕಾವ್ಯದ ಸ್ಪರ್ಶದೊಂದಿಗೆ ಹೆಣೆದುಕೊಂಡ ‘ಬಿಂಬಗಳು’ ಕಥೆ, ಪ್ರಶ್ನೆ ಉತ್ತರಗಳಲ್ಲಿ ದುಃಖವನ್ನು ಹಂಚಿಕೊಳ್ಳುವುದರ ಮುಖೇನ ದುಃಖವನ್ನು ಸಾಕುವುದರಲ್ಲಿ ಲಾಭವಿಲ್ಲ, ಬದುಕಿನಲ್ಲಿ ಬದಲಾವಣೆ ಬೇಕು ಅದಕ್ಕೆ ಸಿದ್ಧನಾಗು ಎಂದು ಬುದ್ಧಿ ಹೇಳುವ ಕಥೆ… ಅಯ್ಯೋ ಇಷ್ಟು ಬೇಗ ಮುಗಿದು ಬಿಡ್ತಾ …? ಅಂತನ್ನಿಸುತ್ತದೆ.

ಜಗತ್ತಿನ ನಿರಂತರ ಪರಿವರ್ತನೆಯೊಂದಿಗೆ ಪರಿವರ್ತನೆಯಾಗದೆ ಅಲ್ಲಲ್ಲಿ ಉಳಿದುಹೋಗುವ ಕೆಲವು ವಿಚಾರಗಳು ನಮ್ಮನ್ನು ಪ್ರಶ್ನಿಸುತ್ತದೆ, ಸಂವೇದನೆಯ ವರ್ತನೆಯನ್ನು ಬದಲು ಮಾಡುತ್ತವೆ, ಬಯಕೆಗಳ ತುಡಿತವನ್ನು ವಿಚಿತ್ರವಾಗಿಸುತ್ತವೆ ಎನ್ನುವುದು ಸತ್ಯ.

ವೇಶ್ಯೆಯೊಬ್ಬಳ ಸುತ್ತ ನಡೆಯುವ ಕಥೆ  ‘ನನ್ನ ಹಾಡು ನನ್ಮದು’ ನಿಡುಸುಯ್ದು ಮಗ್ಗಲು ಬದಲಾಯಿಸಿದ ಬದುಕಿನ ಆರ್ಥ ನಾದವನ್ನು ಮೊಳಗಿಸುವ ಕಥೆ‌. ಅಗತ್ಯಗಳ ಮೇಲಷ್ಟೇ ನಿಂತಿರುವ ಸಂಬಂಧಗಳಿಂದ ಏನನ್ನು ಬಯಸಬಹುದು…? ಕೊರಗುವ ನೆನಪು, ಸಂಬಂಧ ಮೃದುವಾಗಿ ಇರಿತದಂತೆ ಎನ್ನುವ ಭಾವಾಂಶ, ಸಾರಾಂಶಗಳಿಂದ ಹೀಗೂ ಬದಲಾಗಬಹುದಾ…? ತಂದೆ ಮಗಳು ವೇಶ್ಯೆ ಹಾಗೂ ಗಿರಾಕಿಯಾಗಿ ಎದುರಾಗುವಾಗ ಅದು ಯಾವ ರೀತಿಯಲ್ಲಿ.. ಬದುಕಿನ ಎದೆ ಹಿಂಡಬಹುದು..?

 ಓದಿ : ಚುನಾವಣಾ ಆಯೋಗವನ್ನು ‘ಎಮ್ ಸಿ ಸಿ’ ಎಂದು ಮರು ನಾಮಕರಣ ಮಾಡಬೇಕು : ಮಮತಾ ಕಿಡಿ

‘ಮನಸು ಅಭಿಸಾರಿಕೆ’, ‘ಪಾಸಿಂಗ್ ಕ್ಲೌಡ್ಸ್’, ‘ಸುಳಿ’, ‘ಪಯಣ’ ಕಥೆಗಳಲ್ಲಿ ಕಾಣುವ ಆಧುನಿಕತೆ ಎನ್ನಿಸಿಕೊಂಡವುಗಳು ಸಹಜ ಹಾಗೂ ಅಸಹಜ ಸ್ಥಿತಿ ಅಂತ ಅನ್ನಿಸುತ್ತದೆ. ‘ಪಯಣ’ದ ಕಥಾ ನಾಯಕಿ ಮುಕ್ತವಾಗಿ ತನ್ನೆಲ್ಲಾ ಭಾವ ಸಹಜ, ದೇಹ ಸಹಜ ಆಂತರ್ಯವನ್ನು ತೆರೆದುಕೊಳ್ಳುತ್ತಾಳೆ.

ಉಳಿದ ಕಥೆಗಳಲ್ಲಿ ತುಂಬಿ ತುಳುಕುವ ಅಸಾಧ್ಯ ಸಂಕಟ, ಚಡಪಡಿಕೆ, ಪ್ರಶ್ನೆ, ಅಪರಾಧಿ ಭಾವ, ಸಿಡಿಯುವ, ಸಿಡಿದು ಗಟ್ಟಿಗೊಳ್ಳುವ, ಉದಾಹರಣೆಯನ್ನು ಮುಂದಿಟ್ಟುಕೊಂಡು ಸವೆದು, ಕೊರಗಿ ಕೋಪ ತಾಪಗಳಲ್ಲಿ ಬದುಕು ದೂಡುವ ಪಾತ್ರಗಳ ವರ್ತನೆಗಳು ಸಂವೇದನೆಯ ನಿಲುವುಗಳು ಅನುಕಂಪ ಪಡೆಯುತ್ತವೆ.

ಇಲ್ಲಿನ ಎಲ್ಲಾ ಕಥೆಗಳು ಸ್ತ್ರೀ ಕೇಂದ್ರಿತ ಕಥೆಗಳಾಗಿ ಹುಟ್ಟಿಕೊಂಡರು ನಿರೂಪಣೆಯ ಸಂಯೋಜನೆಯ ಗಟ್ಟಿತನದಿಂದಾಗಿ ಸ್ತ್ರೀವಾದ ಎಂದು ಅನ್ನಿಸಿಕೊಳ್ಳುವುದಿಲ್ಲ. ಇವೆಲ್ಲಾ ನಮ್ಮದೇ ಬದುಕಿನಲ್ಲಿ, ನಮ್ಮ ಸುತ್ತ ಮುತ್ತಲೆಲ್ಲೋ ನಡೆಯುತ್ತಿದೆ ಅಂತನ್ನಿಸುತ್ತದೆ.

ಇಲ್ಲಿನವುಗಳು ಹೊಸದನ್ನು ಹುಡುಕುವ ಕಥೆಯಾಗಿರುವುದರಿಂದ, ಸಂವೇದನೆಗೆ ಧ್ವನಿಕೊಟ್ಟಿರುವುದರಿಂದ ಈ ಕೃತಿ ವಿಶೇಷ ಅಂತನ್ನಿಸುತ್ತದೆ‌.

ಹೌದು, ಈ ಕೃತಿ ನಿಮ್ಮಿಂದ ಓದನ್ನು ಬಯಸುತ್ತಿದೆ.

-ಶ್ರೀರಾಜ್ ವಕ್ವಾಡಿ

 ಓದಿ : ಆರನೇ ವೇತನ ಆಯೋಗಕ್ಕೆ ಸಮನಾದ ವೇತನ ನೀಡಲ್ಲ: ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next