Advertisement
ಶಿಲಾಯುಗದ ಇತಿಹಾಸವನ್ನಾಧರಿಸಿ, ಅದರಲ್ಲಿಯೂ ಪ್ರಮುಖವಾಗಿ ದಕ್ಷಿಣ ಭಾರತದ ಶಿಲಾಯುಗವನ್ನು ಆಧರಿಸಿ ಈ ಕಾದಂಬರಿಯನ್ನು ಕಟ್ಟಿದ್ದಾರೆ. ಇದು ಒಂದು ರೋಚಕ ಕಾದಂಬರಿಯಷ್ಟೇ ಆಗದೆ ಸಮಾಜದ ಹಲವಾರು ಮೂಢನಂಬಿಕೆಗಳಿಗೆ ಕೊಡಲಿಯನ್ನಿಟ್ಟಿದೆ. ಶಿಲಾಯುಗದ ಮಾನವನ ಬದುಕು ಬಿಂಬಿಸುತ್ತಾ, ಅವರ ಪದ್ದತಿಗಳು ಕ್ರಮಬದ್ಧವಾಗಿ ಹೇಗೆ ಈಗಿನ ಸಮಾಜ ವ್ಯವಸ್ಥೆಗೆ ಅಡಿಪಾಯವಾಗಿವೆ ಎಂಬುದನ್ನು ತಿಳಿಸುತ್ತದೆ ಈ ಪುಸ್ತಕ.
Related Articles
Advertisement
‘ಅತಿಯಾದ ನಂಬಿಕೆ ಮತ್ತು ಭಕ್ತಿ ಹಾಗೂ ತೀವ್ರವಾದ ಮೋಹ ಮತ್ತು ಮಮಕಾರ, ಇವೆಲ್ಲವೂ ಮನುಷ್ಯನನ್ನು ಒಂದೇ ತೆರನಾಗಿ ಕುರುಡನನ್ನಾಗಿಸುತ್ತವೆ. ಅವುಗಳ ಪ್ರಭಾವದಲ್ಲಿ ತರ್ಕ ಸೋಲುತ್ತದೆ, ಕಟ್ಟಿಕೊಂಡ ಚಿತ್ರಣವೇ ಸತ್ಯ ಎಂಬ ಭ್ರಮೆ ಸೃಷ್ಟಿಯಾಗುತ್ತದೆ. ಸಾವಿರಾರು ವರ್ಷಗಳಿಂದ ಮಾನವ ಇಂತಹ ಅದೆಷ್ಟೋ ಭ್ರಮೆಗಳಲ್ಲಿ ಬದುಕುತ್ತಿದ್ದಾನೆ. ಆ ಭ್ರಮೆಗಳ ಪ್ರಪಂಚದಲ್ಲಿ ಮಿಂದ ಮಾನವ ತನ್ನ ಅಂತಃ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾನೆ ಎನ್ನಬಹುದು.’ ಎಂದು ಕಾದಂಬರಿಯ ಒಂದು ಪಾತ್ರ ಹೇಳುತ್ತದೆ. ಸದ್ಯ ದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಕಲಹಗಳನ್ನು ಗಮನಿಸಿದರೆ, ನಮ್ಮ ಸಮಾಜ ಈ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಸಮಯವಿದು.
ಓದುವಾಗ ಈ ಕಾದಂಬರಿಯ ಮೊದಲ ಅರವತ್ತು ಪುಟಗಳು ಸ್ವಲ್ಪ ಬೇಸರವೆನಿಸುತ್ತವೆ. ಅನಂತರ ಹಂತ ಹಂತವಾಗಿ ಬೆಳೆಯುವ ಕಥೆ ಹಲವಾರು ಪ್ರಮುಖ ಮಾಹಿತಿಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ. ಲೇಖಕರು ಕಾದಂಬರಿಯನ್ನು ಊಹೆ ಮತ್ತು ಕಲ್ಪನೆಗಳಿಂದ ಮಾತ್ರ ಬರೆಯದೆ ಹಲವಾರು ಆಕರ ಗ್ರಂಥಗಳ ಸಹಾಯದಿಂದ ಬರೆದಿದ್ದಾರೆ. ಭಾರತೀಯ ಸಮಾಜದ ಚಾರಿತ್ರಿಕ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಲು ಈ ಕಾದಂಬರಿ ಒಳ್ಳೆಯದು.
ಪುಸ್ತಕ : ಕಾನನ ಜನಾರ್ದನಲೇಖಕರು: ಡಾ. ಕೆ. ಎನ್. ಗಣೇಶಯ್ಯ
ಪ್ರಕಾಶಕರು : ಅಂಕಿತ ಪುಸ್ತಕ
ಬೆಲೆ : ರೂ. 395/-
ಪುಟಗಳು : 399 – ಓಂಕಾರ ಕುಡಚೆ, ಎಸ್.ಡಿ.ಎಮ್ ಕಾಲೇಜು ಉಜಿರೆ