Advertisement

ಡಿ.ಕೆ.ರವಿ ದಕ್ಷ ಪ್ರಾಮಾಣಿಕ ಅಧಿಕಾರಿ

12:27 PM Oct 03, 2021 | Team Udayavani |

ಬೆಂಗಳೂರು: “ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಆತ್ಮಹತ್ಯೆಗೆ ಸಂಬಂಧಿಸಿದ ಸಿಬಿಐ ತನಿಖಾ ವರದಿಯನ್ನು ನಮ್ಮ ಸರ್ಕಾರ ಇದ್ದಾಗಲೇ ಜನರ ಮುಂದೆ ಇಡಬೇಕಾಗಿತ್ತು. ಆದರೆ, ಸಾವಿನ ಹಿಂದಿನ ಸತ್ಯ ಅದಾಗಲೇ ಬಹಿರಂಗವಾಗಿದ್ದರಿಂದ ಆ ಕೆಲಸ ನಾವು ಮಾಡಲಿಲ್ಲ’ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಐಎಎಸ್‌ ಅಧಿಕಾರಿ ಡಿ.ಕೆ.ರವಿ ಸಾವಿನ ಕುರಿತು ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಅವರು ಇಂಗ್ಲಿಷ್‌ ಭಾಷೆಯಲ್ಲಿ ಬರೆದಿರುವ “ಲ್ಯಾಂಡ್‌, ಲಸ್ಟ್‌ ಆ್ಯಂಡ್‌ ಆಡಿಯೋ ಟೇಪ್‌’ ಹಾಗೂ ಕನ್ನಡ ಭಾಷೆಯಲ್ಲಿ ಅ.ನಾ.ಪ್ರಹ್ಲಾದ್‌ ರಾವ್‌ ಭಾಷಾಂತರ ಮಾಡಿರುವ “ನಗ್ನ ಸತ್ಯ’ ಎಂಬ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು.

ಪುಸ್ತಕದಲ್ಲಿ ಹೇಳಿರುವಂತೆ ಭೂಮಿ, ಕಾಮ, ಆಡಿಯೊ ಟೇಪ್‌ ರವಿ ಆತ್ಮಹತ್ಯೆಗೆ ಕಾರಣವೇ ಹೊರತು ಬೇರೆ ಯಾರೂ ಕಾರಣರಲ್ಲ. ಸತ್ಯ ಎಂದಿದ್ದರೂ ಹೊರಗೆ ಬಂದೇ ಬರುತ್ತದೆ. ಸಿಬಿಐ ತನಿಖಾ ವರದಿಯನ್ನು ನಮ್ಮ ಸರ್ಕಾರ ಇದ್ದಾಗಲೇ ಜನರ ಮುಂದೆ ಇಡಬೇಕಾಗಿತ್ತು.

ಆದರೆ, ಸಾವಿನ ಹಿಂದಿನ ಸತ್ಯ ಅದಾಗಲೇ ಬಹಿರಂಗವಾಗಿದ್ದರಿಂದ ಆ ಕೆಲಸ ನಾವು ಮಾಡಲಿಲ್ಲ. ಡಿ.ಕೆ. ರವಿ ಆತ್ಮಹತ್ಯೆಗೆ ಸಂಬಂಧಿಸಿದ ಸಿಬಿಐ ವರದಿಯನ್ನು ಸದನದ ಮುಂದಿಟ್ಟು, ಸತ್ಯಸಂಗತಿಯನ್ನು ಜನರಿಗೆ ತಿಳಿಸಬೇಕಿತ್ತು, ನಾವದನ್ನು ಮಾಡಿಲ್ಲ.

ನಾವು ಮಾಡಬೇಕಿದ್ದ ಈ ಕೆಲಸವನ್ನು ರಾಮಕೃಷ್ಣ ಉಪಾಧ್ಯಾಯ ಅವರು ಮಾಡಿದ್ದಾರೆ. ಡಿ.ಕೆ.ರವಿ ಅವರ ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಹಲವಾರು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಈ ಪುಸ್ತಕದ ಮೂಲಕ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡಿದ್ದಾರೆ.

Advertisement

ಅದಕ್ಕಾಗಿ ಅವರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದರು. ಡಿ.ಕೆ.ರವಿ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬ ಬಗ್ಗೆ ಎರಡು ಮಾತಿಲ್ಲ. ಇದರ ಜೊತೆಗೆ ಪ್ರಚಾರ ಪ್ರಿಯರೂ ಆಗಿದ್ದರು. ಮರಳು ಮತ್ತು ಭೂ ಮಾμಯಾ ವಿರುದ್ಧ ಪ್ರತಿ ಬಾರಿ ಕ್ರಮಕೈಗೊಳ್ಳುವ ಮುಂಚೆ ಮೀಡಿಯಾಗಳಿಗೆ ಮೊದಲು ತಿಳಿಸಿ, ನಂತರ ಕ್ರಮ ಜರುಗಿಸುತ್ತಿದ್ದರು.

ಈ ಮೂಲಕ ಬಹುಬೇಗ ಜನಪ್ರಿಯತೆ ಗಳಿಸುವ ಪ್ರಯತ್ನ ಮಾಡಿದ್ದರು. ಇದು ನನ್ನ ಅನುಭವಕ್ಕೆ ಬಂದದ್ದಷ್ಟೇ ಅಲ್ಲ, ರಾಮಕೃಷ್ಣ ಉಪಾಧ್ಯಾಯ ಅವರ ಪುಸ್ತಕದಲ್ಲೂ ಉಲ್ಲೇಖೀಸಲಾಗಿದೆ. ಕಾನೂನು ರೀತಿ ಹಣ ಮಾಡಬೇಕೆಂಬ ಆಸೆಯಿಂದ ರಿಯಲ್‌ ಎಸ್ಟೇಟ್‌ ಆರಂಭಿಸಿದರು. ಅವರಿಗೆ ಹರಿಕೃಷ್ಣ ಮತ್ತು ಚಂದ್ರಶೇಖರ ಎಂಬ ಇಬ್ಬರು ಗೆಳೆಯರಿದ್ದರು. ಈ ಗೆಳೆಯರ ಜೊತೆಗೂಡಿ ಆರ್‌ ಆ್ಯಂಡ್‌ ಎಚ್‌ ಎಂಬ ರಿಯಲ್‌ ಎಸ್ಟೇಟ್‌ ಕಂಪನಿ ಶುರು ಮಾಡಿದರು. 500 ಕೋಟಿ ರೂ. ಸಂಪಾದನೆ ಮಾಡಿ, ನಂತರ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ ದೊಡ್ಡ ಉದ್ಯಮಿಯಾಗಬೇಕು ಎಂದು ಅವರ ಮಹದಾಸೆಯಾಗಿತ್ತು.

ಆದರೆ ಹಣ ಮಾಡುವ ಅವರ ಈ ಆಸೆ ಈಡೇರಲಿಲ್ಲ. ಇದು ಅವರ ಜೀವನದ ವೈಫ‌ಲ್ಯ. ಏಕಮುಖ ಪ್ರೀತಿ ಅಪಾಯಕಾರಿ. ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳುವುದು ಮೂರ್ಖತನದ ಪರಮಾವಧಿ ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಂ.ಸಿ.ನಾಣಯ್ಯ, ಪಿಜಿಆರ್‌ ಸಿಂಧ್ಯಾ, ನಟ, ನಿರ್ದೇಶಕ ಸುರೇಶ್‌ ಹೆಬ್ಳಿಕರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next