ಮೈಸೂರು: ಬೊಮ್ಮಾಯಿ ಯೋಗದಿಂದ ಸಿಎಂ ಆದವರು, ಯೋಗ್ಯತೆಯಿಂದಲ್ಲ. ಯೋಗದಿಂದ ಬಂದಿದ್ದು ಕ್ಷಣಿಕ. ಯೋಗ್ಯತೆಯಿಂದ ಬಂದಿದ್ದು ಶಾಶ್ವತ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಆರ್ ಧ್ರುವನಾರಾಯಣ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸಾರಥ್ಯ, ಬೊಮ್ಮಾಯಿ ನೇತೃತ್ವ ಎಂದು ಹೇಳುವ ನಳಿನ್ ಕುಮಾರ್, ಹಾಗಾದರೆ ಪಕ್ಷದ ಅಧ್ಯಕ್ಷರಾಗಿ ನಿಮ್ಮ ಪಾತ್ರ ಏನು? ಭಜನಾ ಮಂಡಳಿ ಅಧ್ಯಕ್ಷರಾಗಲು ನಳಿನ್ ಕುಮಾರ್ ಕಟೀಲ್ ಸರಿಯಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಚಿವರ ನಿಧನದಿಂದ ಶೋಕಾಚರಣೆ ಇರುವಾಗ ಬಿಜೆಪಿ ನಾಯಕರು ಡ್ಯಾನ್ಸ್ ಮಾಡುತ್ತಾರೆ. ರಾಜ್ಯದಲ್ಲಿ ಪ್ರವಾಹದಿಂದ ಜನ ಸಂಕಷ್ಟದಲ್ಲಿರುವಾಗ ಡ್ಯಾನ್ಸ್ ಮಾಡುವುದು ಶೋಚನೀಯ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸಿಎಂ ತಾಕತ್ತು, ಧಮ್ ಎನ್ನುವ ಪದ ಬಳಸುತ್ತಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ದೊಡ್ಡಬಳ್ಳಾಪುರದ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟು ನಡೆಸಿದ್ದಾರೆ. ಜನೋತ್ಸವ ಎಂಬುದು ಜನಸ್ಪಂದನ ಕಾರ್ಯಕ್ರಮ ಎಂದು ಬದಲಾಯಿಸಿದ್ದೆಕೆ? ಹೆಸರಿಗೆ ಮಾತ್ರ ಜನ ಸ್ಪಂದನೆ, ಇದು ಮೋಜಿನ ಕಾರ್ಯಕ್ರಮ. ವಿರೋಧ ಪಕ್ಷವನ್ನು ಟಿಕೀಸುವ ಕಾರ್ಯಕ್ರಮವಾಗಿತ್ತು. ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಜವಾಬ್ದಾರಿಯುತವಾಗಿ ಮಾತನಾಡಿಲ್ಲ. ತಾಕತ್ ಇದ್ರೆ, ಧಮ್ ಇದ್ರೆ ಎಂದು ಒಬ್ಬ ಸಿಎಂ ಮಾತನಾಡುತ್ತಾರೆ. ಭ್ರಷ್ಟಾಚಾರ ಎಂದು ನಮ್ಮನ್ನ ಟಿಕೀಸುವ ನೀವು, ನಿಮಗೆ ಧೈರ್ಯವಿದ್ದರೆ ಅಂದೇ ಪ್ರಶ್ನಿಸಬಹುದಿತ್ತು. ಕೇಂದ್ರ ಸರ್ಕಾರ ನಿಮ್ಮದಾಗಿತ್ತು. ಎಲ್ಲ ಇಲಾಖೆಗಳು ನಿಮ್ಮ ಬಳಿಯೇ ಇತ್ತು. ವಿರೋಧಪಕ್ಷದಲ್ಲಿದ್ದ ನೀವು ಭ್ರಷ್ಟಾಚಾರವನ್ನ ಬಯಲಿಗೆಳೆಯಬೇಕಿತ್ತು. ಅಧಿಕಾರಕ್ಕೆ ಬಂದು 3 ವರ್ಷವಾದರೂ ಡಬಲ್ ಇಂಜಿನ್ ಸರ್ಕಾರ ಯಾಕೆ ತನಿಖೆಗೆ ಆದೇಶ ಮಾಡಲಿಲ್ಲ.?
ಇದನ್ನೂ ಓದಿ:ಕ್ಲಿನಿಕ್ ಬಾಗಿಲು ತಡವಾಗಿ ತೆರೆದರೆಂದು ವೈದ್ಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಗುಂಪು
ಪ್ರವಾಹಕ್ಕೆ ತುತ್ತಾದ ಜನರು ಸಂಕಷ್ಟದಲ್ಲಿದ್ದಾರೆ. ಪ್ರವಾಹದಂತಹ ವೇಳೆ ಈ ರೀತಿಯ ಜನಸ್ಪಂದನ ಕಾರ್ಯಕ್ರಮ ಬೇಕಿರಲಿಲ್ಲ. ನಿಮ್ಮ ಸಾಧನೆ ಹೇಳುವ ಕಾರ್ಯಕ್ರಮವಾಗಬೇಕಿತ್ತು. ಕಾಂಗ್ರೆಸ್ ಮೇಲೆ ಭಯ ಹೆಚ್ಚಾಗಿರುವ ಕಾರಣ ಕಾಂಗ್ರೆಸ್ ಗುರಿಯಾಗಿಸಿಕೊಂಡು ಕಾರ್ಯಕ್ರಮ ನಡೆಸಿದ್ದೀರಿ ಎಂದು ವಾಗ್ದಾಳಿ ನಡೆಸಿದರು.