ನವ ದೆಹಲಿ : ಅಪ್ರಾಪ್ತ ಬಾಲಕಿಯ ಕೈ ಹಿಡಿದು ಪ್ಯಾಂಟ್ ಜಿಪ್ ತೆಗೆಯುವುದು ಪೋಕ್ಸೊ ಅಡಿಯಲ್ಲಿ ಲೈಂಗಿಕ ದೌರ್ಜನ್ಯವಲ್ಲ ಎಂದು ತೀರ್ಪು ನೀಡಿದ್ದ ನ್ಯಾಯಮೂರ್ತಿ ಪುಷ್ಪಾ ಗಣೆದಿವಾಲಾ ಅವರಿಗೆ ಮಹಿಳೆಯೋರ್ವಳು 150 ಕಾಂಡೋಮ್ ಕಳಿಸುವ ಮೂಲಕ ಪ್ರತಿಭಟಿಸಿದ್ದಾರೆ.
ಇತ್ತೀಚಿಗಷ್ಟೆ ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿ ಪುಷ್ಪಾ ಗಣೆದಿವಾಲಾ ಅವರ ಏಕ ಸದಸ್ಯ ನಾಗ್ಪುರ ಪೀಠವು 50 ವರ್ಷದ ವ್ಯಕ್ತಿಯೊಬ್ಬ 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶವನ್ನು ಹೊರಡಿಸಿತ್ತು. ನೇರ ದೈಹಿಕ ಸಂಪರ್ಕ ಅಥವಾ ಸ್ಪರ್ಶಿಸುವುದು, ಸ್ತ್ರೀಯ ಗುಪ್ತಾಂಗವನ್ನು ಪ್ರವೇಶಿಸುವುದನ್ನು “ಲೈಂಗಿಕ ಸಂಪರ್ಕ ಎಂದು ನ್ಯಾಯಪೀಠ ವ್ಯಾಖ್ಯಾನಿಸಿತ್ತು.
ಬಾಂಬೆ ಹೈಕೋರ್ಟ್ ನೀಡಿದ ಈ ತೀರ್ಪು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ನ್ಯಾಯಮೂರ್ತಿ ಪುಷ್ಪಾ ವಿರುದ್ಧವೂ ಟೀಕೆಗಳು ಕೇಳಿ ಬಂದಿದ್ದವು. ಇದೀಗ ಗುಜರಾತ್ ನ ಅಹ್ಮದಾಬಾದ್ ಮೂಲದ ದೇವರ್ಶಿ ತ್ರಿವೇದಿ ಎಂಬುವರು ಪುಷ್ಪಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜಕೀಯ ವಿಶ್ಲೇಷಕರಾಗಿರುವ ದೇವರ್ಶಿ, ಪುಷ್ಪಾ ಅವರಿಗೆ 150 ಕಾಂಡೋಮ್ ಕಳುಹಿಸಿ ಕೊಟ್ಟಿರುವುದಾಗಿ ಹೇಳಿದ್ದಾರೆ. “ನಾನು ಅನ್ಯಾಯವನ್ನು ಸಹಿಸಲಾರೆ. ನ್ಯಾಯಮೂರ್ತಿ ಗಣೆದಿವಾಲಾ ಅವರ ತೀರ್ಪಿನಿಂದಾಗಿ ಅಪ್ರಾಪ್ತ ಬಾಲಕಿಗೆ ನ್ಯಾಯ ದೊರಕಲಿಲ್ಲ. ಆಕೆಯನ್ನು (ನ್ಯಾಯಮೂರ್ತಿ ಗಣೆದಿವಾಲಾ) ಅಮಾನತು ಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ ತ್ರಿವೇದಿ.
ಇನ್ನು ಪುಷ್ಪಾ ಗಣೆದಿವಾಲಾ ನೀಡಿದ್ದ ತೀರ್ಪು ವಿವಾದ ಪಡೆದುಕೊಳ್ಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹಾಗೂ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಮತ್ತು ವಿ. ರಾಮ ಸುಬ್ರಮಣಿಯನ್ ಅವರ ಅಧ್ಯಕ್ಷತೆಯ ನ್ಯಾಯಪೀಠ ಈ ಆದೇಶವನ್ನು ತಡೆಹಿಡಿದಿತು. ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠ ಜನವರಿ 19 ರಂದು ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಎಜಿಗೆ ಅನುಮತಿ ನೀಡಿತ್ತು.