ಮುಂಬಯಿ : ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತನ್ನ ಹಣಕಾಸು ನೀತಿಯ ಪರಾಮರ್ಶೆಯನ್ನು ಪ್ರಕಟಿಸಿ ರಿಪೋ ರೇಟ್ ಸಹಿತ ಇತರ ಯಾವುದೇ ಬಡ್ಡಿದರಗಳನ್ನು ಕಡಿತಗೊಳಿಸದಿರುವ ಹಿನ್ನೆಲೆಯಲ್ಲಿ ನಿರಾಶೆಗೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಬುಧವಾರದ ವಹಿವಾಟನ್ನು 45.24 ಅಂಕಗಳ ನಷ್ಟದೊಂದಿಗೆ 28,289.92 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 0.75 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,769.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಬಡ್ಡಿ ದರ ಕಡಿತಗೊಳಿಸದಿರುವ ಆರ್‌ಬಿಐ ನಿರ್ಧಾರದ ಫಲವಾಗಿ ಹತ್ತು ವರ್ಷಗಳ ಬೆಂಚ್‌ಮಾರ್ಕ್ ಬಾಂಡ್‌ಗಳ ಇಳುವರಿಯು ಶೇ.0.25ರಷ್ಟು ಹೆಚ್ಚಿರುವುದು ಗಮನಾರ್ಹವಾಗಿದೆ. ಇಂದಿನ ಹಣಕಾಸು ನೀತಿ ಪ್ರಕಟನೆಯಲ್ಲಿ ಆರ್‌ಬಿಐ ತಾನು ಸದ್ಯಕ್ಕಂತೂ ಬಡ್ಡಿ ದರ ಕಡಿತಗೊಳಿಸುವ ಮಾತೇ ಇಲ್ಲ ಎಂದು ಸಾರಿರುವುದು ಕೂಡ ಗಮನಾರ್ಹವಾಗಿದೆ.
ಇಂದಿನ ವಹಿವಾಟಿನಲ್ಲಿ ಬಿಎಸ್‌ಇ ಮಿಡ್ ಕ್ಯಾಪ ಶೇ.0.5ರಷ್ಟು ಏರಿತು. ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,509 ಶೇರುಗಳು ಮುನ್ನಡೆ ಸಾಧಿಸಿದವು; 1,365 ಶೇರುಗಳು ಹಿನ್ನಡೆಗೆ ಗುರಿಯಾದವು.
ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಎಸ್‌ಬಿಐ ಶೇ.0.50 ಪ್ರಮಾಣಲ್ಲಿ ಏರಿದವು; ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಮತ್ತು ಎಚ್ ಡಿ ಎಫ್ ಸಿ ಶೇ.0.5ರಿಂದ ಶೇ.0.9ರಷ್ಟು ಏರಿದವು.