Advertisement

ಸಂಘದಿಂದ ಸಮಾಜ ಬಾಂಧವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ: ಮುರಳಿ ಕೆ. ಶೆಟ್ಟಿ

11:36 AM Dec 08, 2021 | Team Udayavani |

ನವಿಮುಂಬಯಿ: ಪದಾಧಿಕಾರಿಗಳ ಹಾಗೂ ದಾನಿಗಳ ಸಹಕಾರದಿಂದ ಕಳೆದೆರಡು ವರ್ಷಗಳಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಕೋವಿಡ್‌ ಸಮಯದಲ್ಲೂ ಆರ್ಥಿಕವಾಗಿ ಹಿಂದುಳಿದ ಸದಸ್ಯರ ಸಂಕಷ್ಟಗಳಿಗೆ ಸಹಕರಿಸುವಲ್ಲೂ ಅಸೋಸಿಯೇಶನ್‌ ಯಶಸ್ವಿಯಾಗಿದೆ. ಆ ಸಮಯದಲ್ಲಿ ಮಹಾಸಭೆ ನಡೆಸಲಾಗದೆ ಇದ್ದರೂ ಇದೀಗ 37 ಹಾಗೂ 38ನೇ ವಾರ್ಷಿಕ ಮಹಾಸಭೆಯನ್ನು ಒಟ್ಟಾಗಿ ನಡೆಸಬೇಕಾದ ಅನಿವಾರ್ಯ ಉಂಟಾಗಿದೆ. ಕೋವಿಡ್‌ ಸಮಯದಲ್ಲಿ  ನಾವೆಲ್ಲರೂ ಸಮಾಜ ಬಾಂಧವರನ್ನು ಸಂಪರ್ಕಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತೆ ಕೆಲಸ ಮಾಡಿದ್ದೇವೆ ಎಂದು  ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಮುರಳಿ ಕೆ. ಶೆಟ್ಟಿ  ತಿಳಿಸಿದರು.

Advertisement

ನವಿಮುಂಬಯಿ ಜೂಯಿ ನಗರದ ಬಂಟ್ಸ್‌ ಸೆಂಟರ್‌ ಇದರ ಸೌಮ್ಯಲತಾ ಸದಾನಂದ ಶೆಟ್ಟಿ  ಸಭಾಗೃಹದಲ್ಲಿ  ಡಿ. 5ರಂದು ನಡೆದ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ 37 ಮತ್ತು 38ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೀಗ ನನ್ನ ಅಧ್ಯಕ್ಷ ಸ್ಥಾನವನ್ನು ಇನ್ನೊಂದು ವರ್ಷಕ್ಕೆ ಮುಂದೂಡಲಾಗಿದ್ದು, ಇದನ್ನು ಗೌರವದಿಂದ ಸ್ವೀಕರಿಸಿದ್ದೇನೆ. ಭವಿಷ್ಯದಲ್ಲಿ ಇನ್ನಷ್ಟು ಕಾರ್ಯ ಚಟುವಟಿಕೆಗಳನ್ನು ನಡೆಸಲು ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹದ ಅಗತ್ಯವಿದೆ. ಅಸೋಸಿಯೇಶನ್‌ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಇನ್ನಿತರ ಕ್ಷೇತ್ರಗಳಲ್ಲಿ  ಮಾಡುತ್ತಿರುವ ಸೇವೆ ಅನುಪಮವಾಗಿದೆ. ಹಿರಿಯರ ಮಾರ್ಗದರ್ಶನ, ಅವರು ಹಾಕಿಕೊಟ್ಟ ಆದರ್ಶಪಥದಲ್ಲಿ ಅಸೋಸಿಯೇಶನ್‌ ಮುನ್ನಡೆಯುತ್ತಿದೆ. ನಾವೆಲ್ಲರೂ ಒಗ್ಗಟ್ಟು ಹಾಗೂ ಒಮ್ಮತದಿಂದ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸೋಣ. ಅಸೋಸಿಯೇಶನ್‌ನ ಎಲ್ಲ ಸಮಾಜಪರ ಯೋಜನೆಗಳಿಗೆ ಮಹಿಳಾ ವಿಭಾಗ, ಯುವ ವಿಭಾಗದ ಸಹಕಾರವನ್ನು ಮರೆಯುವಂತಿಲ್ಲ. ಅದಕ್ಕಾಗಿ ಎರಡೂ ವಿಭಾಗಗಳು ಹಾಗೂ ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿಗೆ ಕೃತಜ್ಞನಾಗಿದ್ದೇನೆ. ಸಂಸ್ಥೆಯಿಂದ ಇನ್ನೂ ಅನೇಕ ಕಾರ್ಯ ಚಟುವಟಿಕೆಗಳು ನಡೆಯಲಿದ್ದು, ಎಲ್ಲರ ಸಹಾಯ, ಸಹಕಾರ ಸದಾ ಇರಲಿ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದು, ಕಾರ್ಯ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು. ನವಿ ಮುಂಬಯಿ ಬಂಟ್ಸ್‌ ಸೆಂಟರ್‌ ಈ ಪರಿಸರದಲ್ಲಿ ಒಂದು ಅತ್ಯುತ್ತಮ ಸಭಾಗೃಹವಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಅಸೋಸಿಯೇಶನ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಮಹಾಸಭೆ ಯನ್ನು ಉದ್ಘಾಟಿಸಿದರು. ಅಸೋಸಿಯೇಶನ್‌ನ ಉಪಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಸ್ವಾಗತಿಸಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. 37ಮತ್ತು 38ನೇ ವಾರ್ಷಿಕ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಸುನಿಲ್‌ ಶೆಟ್ಟಿ ವಾಚಿಸಿದರು. ಲೆಕ್ಕಪತ್ರವನ್ನು ಅಸೋಸಿಯೇಶನ್‌ನ ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್‌ ಶೆಟ್ಟಿ ಮಂಡಿಸಿದರು. ವರದಿ ಹಾಗೂ ಲೆಕ್ಕಪತ್ರವನ್ನು ಸಭೆಯಲ್ಲಿ ಸರ್ವಾನುಮತದಿಂದ ಅನುಮೋದಿಸಲಾಯಿತು.

ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ದಿವಾಕರ್‌ ಕೆ. ಶೆಟ್ಟಿ ಅವರನ್ನು, ಮುಖ್ಯ ಲೆಕ್ಕ ಪರಿಶೋಧಕರನ್ನಾಗಿ ರಾಕೇಶ್‌ ಶೆಟ್ಟಿ ಆ್ಯಂಡ್‌ ಕಂಪೆನಿಯನ್ನು ನೇಮಿಸಲಾಯಿತು. ಸಭಿಕರ ಪರವಾಗಿ ಮಾಜಿ ಅಧ್ಯಕ್ಷರು ಹಾಗೂ ವಿಶ್ವಸ್ಥರಾದ ಎನ್‌.ಸಿ. ಶೆಟ್ಟಿ, ಜಯರಾಮ್‌ ಮಲ್ಲಿ, ನ್ಯಾಯವಾದಿ ರತ್ನಾಕರ ಶೆಟ್ಟಿ, ನ್ಯಾಯವಾದಿ ಅಶೋಕ್‌ ಶೆಟ್ಟಿ, ಜಯಂತ್‌ ಶೆಟ್ಟಿ, ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್‌ ಶೆಟ್ಟಿ, ಮೋರ್ಲ ರತ್ನಾಕರ ಶೆಟ್ಟಿ, ಸರಳಾ ಶೆಟ್ಟಿ, ಜಯ ಸಿ. ಶೆಟ್ಟಿ, ಡಿ. ಕೆ. ಶೆಟ್ಟಿ  ಪೊವಾಯಿ, ಟಿ. ಆರ್‌. ಶೆಟ್ಟಿ, ಜಗದೀಶ್‌ ರೈ ಮೊದಲಾದವರು ತಮ್ಮ ಸಲಹೆ-ಸೂಚನೆಗಳನ್ನು ನೀಡಿ ಶುಭ ಹಾರೈಸಿದರು. ಕಳೆದ ಶೈಕ್ಷಣಿಕ ವರ್ಷದ ಎಚ್‌ಎಸ್‌ಸಿ ಹಾಗೂ ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜತೆ ಕಾರ್ಯದರ್ಶಿ ಶಂಕರ್‌ ಎ. ಶೆಟ್ಟಿ, ಜತೆ ಕೋಶಾಧಿಕಾರಿ ಶ್ಯಾಮ್‌ಸುಂದರ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಗೋಪಾಲ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶಶಿಕಾಂತ್‌ ರೈ  ಮತ್ತಿತರರಿದ್ದರು. ಮಹಾಸಭೆಯಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

-ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next