Advertisement

ಬಾಂಬೆ ಬಾಯ್ಸ್ ,ಬ್ಲೂ ಬಾಯ್ಸ್, ಕರ್ನಾಟಕ ಬಾಯ್ಸ್ ಯಾರು: ಡಿ.ಕೆ.ಸುರೇಶ್ ಪ್ರಶ್ನೆ

07:21 PM Apr 20, 2022 | Team Udayavani |

ಹನೂರು: ರಾಜ್ಯದಲ್ಲಿ ಬಿಜೆಪಿ ಪಕ್ಷ ತನ್ನ ಅಸಿತ್ವ ಕಳೆದುಕೊಳ್ಳುತ್ತಿದೆ, ಉತ್ತಮ ಆಡಳಿತ ನಿಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಆದುದರಿಂದ ಅವರ ಪಕ್ಷದ ಆಂತರಿಕ ವ್ಯತ್ಯಾಸಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು.

Advertisement

ಹನೂರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಕಳೆದ ನಾಲ್ಕೈದು ತಿಂಗಳಿನಿಂದ ಸತತವಾಗಿ ಸುಳ್ಳು ಹೇಳುತ್ತಾ, ರಾಜ್ಯದಲ್ಲಿ ಅಶಾಂತಿಯ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ರಾಜ್ಯದಲ್ಲಿ ಅಸ್ಥಿತ್ವ ಕಳೆದುಕೊಳ್ಳುತ್ತಿರುವ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಅವರ ಪಕ್ಷದ ಆಂತರಿಕ ವ್ಯತ್ಯಾಸಗಳನ್ನು ಮುಚ್ಚಿಕೊಳ್ಳಲು ಸದಾ ಕಾಂಗ್ರೆಸ್‍ನ ಮೇಲೆ ಆರೋಪ ಮಾಡುತ್ತಾರೆ. ರಾಜ್ಯ ಭ್ರಷ್ಟಾಚಾರ ಮತ್ತು ಲಂಚಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆಯುತ್ತಿವೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿಯನ್ನು ಪರಿಗಣಿಸಬೇಕಿಲ್ಲ
ಕುಮಾರಸ್ವಾಮಿ ಅವರ ಅಜೆಂಡಾ ಏನು ಎಂಬುದು ಅಂತ ಮೊದಲು ತಿಳಿಸಲಿ. ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೊಳಿಸುವ ವೇಳೆ ಬೆಂಬಲ ನೀಡಿರುವುದು ಜಗಜ್ಜಾಹೀರಾಗಿದೆ. ಕುಮಾರಸ್ವಾಮಿ ಅವರಿಗೆ ಅವರ ಮಾತಿನಲ್ಲೇ ಆಗಲಿ, ತತ್ವದಲ್ಲೇ ಆಗಲಿ ಸ್ಪಷ್ಟ ನಿಲುವಿಲ್ಲ. ಜಾತ್ಯತೀತ ಎಂದರೆ ಏನು, ಆ ಪದದ ಅರ್ಥ ಏನು ಎಂದು ಕೇಳೆದ ವ್ಯಕ್ತಿ ಅವರು. ಆದುದರಿಂದ ಅವರ ಮಾತನ್ನು ಹೆಚ್ಚಾಗಿ ಪರಿಗಣಿಸಬೇಕಿಲ್ಲ, ಕಾಂಗ್ರೆಸ್ ಪಕ್ಷ ಅವರ ಮಾತಿಗೆ ಪ್ರತಿಕ್ರಿಯೆಯನ್ನೂ ನೀಡಬೇಕಿಲ್ಲ ಎಂದು ಕುಹುಕವಾಡಿದರು.

ಅಶ್ವಥ್‍ನಾರಾಯಣ್ ಮಹಾನ್ ವ್ಯಕ್ತಿ
ಅಶ್ವಥ್ ನಾರಾಯಣ್ ಅವರು ಓರ್ವ ಮಹಾನ್ ವ್ಯಕ್ತಿ, ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಮಾತನಾಡುವ ಮುನ್ನ ಯಡಿಯೂರಪ್ಪ ಅವರನ್ನು ಎಲ್ಲಿಂದ ಕರೆತಂದಿದ್ದರು ಎನ್ನುವುದನ್ನು ಹೇಳಲಿ, ಸಚಿವ ಸಂಪುಟದ ಎಷ್ಟು ಸದಸ್ಯರು ಲಂಚ ಮತ್ತು ಮಂಚ ಪ್ರಕರಣಗಳಲ್ಲಿ ಸಿಡಿ ಬಹಿರಂಗಪಡಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ ಎಂಬುದನ್ನು ತಿಳಿಸಲಿ. ನಮ್ಮ ಮೇಲೆ ಆರೋಪ ಮಾಡುವ ಮುನ್ನ ಬಾಂಬೆ ಬಾಯ್ಸ್ ಯಾರು, ಬ್ಲೂ ಬಾಯ್ಸ್ ಯಾರು, ಕರ್ನಾಟಕ ಬಾಯ್ಸ್ ಯಾರು ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು.

ಈಶ್ವರಪ್ಪ ಪ್ರಕರಣದಲ್ಲಿ ನ್ಯಾಯ ದೊರೆಯುವ ಭರವಸೆಯಿಲ್ಲ
ನಮ್ಮ ದೇಶದ ಕಾನೂನಿನ ಪ್ರಕಾರ ನಗರ ಪ್ರದೇಶವೇ ಆಗಲಿ, ಗ್ರಾಮೀಣ ಪ್ರದೇಶವೇ ಆಗಲಿ ಯಾವುದಾದರೂ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾದಲ್ಲಿ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸುತ್ತಾರೆ. ಆದರೆ ಈಶ್ವರಪ್ಪರನ್ನು ಬಂಧಿಸುವ ಬದಲು ಮುಖ್ಯಮಂತ್ರಿಗಳು ಪಕ್ಕದಲ್ಲೇ ಕೂರಿಸಿಕೊಳ್ಳುತ್ತಾರೆ, ಗೃಹ ಸಚಿವರು ಅವರನ್ನು ಭೇಟಿ ಮಾಡಿ ಸಾಂತ್ವನ ತಿಳಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯ ಎಲ್ಲಿ ಸಿಗುತ್ತದೆ, ತನಿಖೆ ಎಲ್ಲಿ ಸಾಗುತ್ತದೆ. ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

Advertisement

ಸನ್ಮಾನ

ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂಸದ ಡಿ.ಕೆ.ಸುರೇಶ್ ಅವರನ್ನು ಹನೂರು ಶಾಸಕ ಆರ್.ನರೇಂದ್ರ ಮತ್ತು ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿದ ಸಂಸದರನ್ನು ಅವರ ಅಭಿಮಾನಿಗಳು, ಮುಖಂಡರು ಮತ್ತು ಕಾರ್ಯಕರ್ತರು ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ಮಾತನಾಡಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯದ ಬಿಜೆಪಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರವನ್ನು ಮನೆಮನೆಗೆ ತಲುಪಿಸುವಂತಹ ಕೆಲಸ ಮಾಡಬೇಕು. ಎಲ್ಲಾ ಧರ್ಮ ಮತ್ತು ಸಮುದಾಯಗಳ ಜೊತೆ ಸಾಮರಸ್ಯವನ್ನು ಕಾಪಾಡಿಕೊಂಡು ಎಲ್ಲರನ್ನೂ ಒಟ್ಟಿಗೆ ಕೊಂಡಯ್ಯಬೇಕಿರುವುದು ನಮ್ಮ ಕರ್ತವ್ಯವಾಗಿದೆ. ಈ ಎಲ್ಲಾ ಕಾರ್ಯಗಳ ಜೊತೆ ಒಗ್ಗಟ್ಟಿನಿಂದ ಶ್ರಮಿಸಿದಲ್ಲಿ ಶಾಸಕ ನರೇಂದ್ರ ಅವರ ಗೆಲುವು ಮತ್ತಷ್ಟು ಸುಲಭವಾಗಲಿದೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಶಾಸಕ ನರೇಂದ್ರ ರಾಜೂಗೌಡ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜ್, ಮುಖಂಡರಾದ ಚಿಕ್ಕತಮ್ಮಯ್ಯಗೌಡ, ಮಹೇಶ್, ರವಿ, ಮಾದೇಶ್, ಸಿದ್ಧನಂಜೇಗೌಡ, ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next