ಮುಂಬಯಿ/ ಹೈದರಾಬಾದ್: ಒಂದೇ ಸಮಯದಲ್ಲಿ ಎರಡು ದೊಡ್ಡ ಸ್ಟಾರ್ಗಳ ಸಿನಿಮಾ ರಿಲೀಸ್ ಆಗುವುದು ಹೊಸದೇನಲ್ಲ. ಸಾಮಾನ್ಯವಾಗಿ ಹಬ್ಬದ ರಜಾದಿನಗಳಲ್ಲಿ ಇಂತಹ ಸಿನಿಮಾಗಳು ತೆರೆಗೆ ಬರುತ್ತವೆ.
ಇತ್ತೀಚೆಗೆ ಬಾಲಿವುಡ್ನಲ್ಲಿ ʼಸಿಂಗಂ ಅಗೇನ್ʼ ಹಾಗೂ ʼಭೂಲ್ ಭುಲಯ್ಯʼ ಒಂದೇ ದಿನ ರಿಲೀಸ್ ಆಗಿವೆ. ಈ ಎರಡು ಸಿನಿಮಾಗಳು ಈಗಾಗಲೇ ಬಾಕ್ಸಾಫೀಸ್ 100 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.
ಡಿಸೆಂಬರ್ ತಿಂಗಳಿನಲ್ಲಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ʼಪುಷ್ಪ-2ʼ (Pushpa 2) ಸಿನಿಮಾ ರಿಲೀಸ್ ಆಗಲಿದೆ. ರಿಲೀಸ್ ಡೇಟ್ ಮುಂದೂಡುತ್ತಾ ಬಂದಿದ್ದ ಅಲ್ಲು ಅರ್ಜುನ್ (Allu Arjun) ಅವರ ಸಿನಿಮಾ ಡಿಸೆಂಬರ್ 5 ರಂದು ರಿಲೀಸ್ ಆಗಲಿದೆ.
ʼಪುಷ್ಪ-1ʼ ಬಾಕ್ಸಾಫೀಸ್ನಲ್ಲಿ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿತ್ತು. ಹಾಗಾಗಿ ಸಿನಿಮಾದ ಸೀಕ್ವೆಲ್ ಕೂಡ ಅಷ್ಟೇ ಅಬ್ಬರದ ಕಮಾಯಿ ಮಾಡುವ ನಿರೀಕ್ಷೆಯಿದೆ.
ʼಪುಷ್ಪ-2ʼ ಎದುರಿಗೆ ಬಾಲಿವುಡ್ನಿಂದ ವಿಕ್ಕಿ ಕೌಶಲ್ (Vicky Kaushal) ಅವರ
‘ಛಾವಾ’ (Chhaava) ರಿಲೀಸ್ ಆಗಲಿದೆ. ಡಿಸೆಂಬರ್ 6 ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿದೆ.
ಆದರೆ ಇದೀಗ ʼಪುಷ್ಪ-2ʼ ಬಗ್ಗೆ ಕೇಳಿ ಬರುತ್ತಿರುವ ನಿರೀಕ್ಷೆಯ ಮಾತುಗಳು ಹಾಗೂ ಹೈಪ್ ಹೆಚ್ಚಳದಿಂದಾಗಿ ʼಛಾವಾʼ ʼಪುಷ್ಪʼ ದಾರಿಯಿಂದ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.
ವಿಕ್ಕಿ ಕೌಶಲ್ ಶಿವಾಜಿ ಮಹಾರಾಜ್ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟೀಸರ್ ಸಖತ್ ಹಿಟ್ ಆಗಿದೆ. ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ(Rashmika Mandanna) ಅವರು ಸಂಭಾಜಿಯ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ʼಪುಷ್ಪ-2ʼ ಪ್ಯಾನ್ ಇಂಡಿಯಾ ಭಾಷೆಯಲ್ಲಿ ರಿಲೀಸ್ ಆಗಲಿದ್ದು, ಉತ್ತರ ಭಾರತದಲ್ಲಿಯೂ ಅಲ್ಲು ಅರ್ಜುನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಹಾಗಾಗಿ ʼಪುಷ್ಪ-2ʼ ಅಲ್ಲೂ ಕೂಡ ಕಮಾಲ್ ಮಾಡುವ ಸಾಧ್ಯತೆ ಹೆಚ್ಚಿದೆ.
ಹೀಗಾಗಿ ಲಕ್ಷ್ಮಣ್ ಉಟೇಕರ್ (Laxman Utekar) ನಿರ್ದೇಶನ ಮಾಡಿರುವ ʼಛಾವಾʼ ರಿಲೀಸ್ ಡೇಟ್ ಮುಂದೂಡಿಕೆ ಮಾಡುವ ಯೋಚನೆಯಲ್ಲಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಿದೆ ಎನ್ನಲಾಗಿದೆ.