ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಗೊಂಡು ಜಾರಿಗೆ ಬಂದ ನಂತರ ದೇಶದಲ್ಲಿ ಎರಡು ವರ್ಗ ಸೃಷ್ಟಿಯಾಗಿದೆ. ಒಂದು ಸಿಎಎಯನ್ನು ಬೆಂಬಲಿಸುವ ವರ್ಗ ಇನ್ನೊಂದು ಇದನ್ನು ವಿರೋಧಿಸುವ ವರ್ಗ. ಎರಡೂ ಕಡೆಗಳಲ್ಲಿ ಚಿಂತಕರು, ಚಿತ್ರ ನಟರು, ಲೇಖಕರು, ಶಿಕ್ಷಣ ತಜ್ಞರು… ಹೀಗೆ ಸಮಾಜದ ನಾನಾ ರಂಗಗಳಲ್ಲಿ ಹೆಸರು ಮಾಡಿರುವರಿದ್ದಾರೆ.
ಹಾಗೆಯೇ ಸಿಎಎ ವಿರೋಧಿ ಗುಂಪಿನಲ್ಲಿ ಕ್ರಿಯಾಶೀಲವಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವವರಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರೂ ಸಹ ಒಬ್ಬರು. ಸಿಎಎ ವಿಚಾರದಲ್ಲಿ ಕಶ್ಯಪ್ ಅವರು ಈಗಾಗಲೇ ಕೇಂದ್ರ ಸರಕಾರವನ್ನು ಹಲವು ವೇದಿಕೆಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಅನುರಾಗ್ ಕಶ್ಯಪ್ ಅವರು ಈ ಸಲ ಗರಂ ಆಗಿರುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ. ಆದಿತ್ಯವಾರ ದೆಹಲಿಯಲ್ಲಿ ನಡೆದಿದ್ದ ಶಾ ಅವರ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರನೊಬ್ಬರ ಮೇಲೆ ಅಮಿತ್ ಶಾ ಹಾಗೂ ಬಿಜೆಪಿ ಬೆಂಬಲಿಗರು ದರ್ಪ ಪ್ರದರ್ಶಿಸಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿ ಅನುರಾಗ್ ಅವರು ಅಮಿತ್ ಶಾ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕಶ್ಯಪ್ ಅವರು, ‘ ನಮ್ಮ ಗೃಹ ಸಚಿವರೊಬ್ಬ ಹೇಡಿ. ಅವರು ಪೊಲೀಸರನ್ನು ನಿಯಂತ್ರಿಸುತ್ತಾರೆ, ಗೂಂಡಾಗಳನ್ನು ತನ್ನ ಅಂಕೆಯಲ್ಲಿರಿಸಿಕೊಂಡಿದ್ದಾರೆ. ತನ್ನ ರಕ್ಷಣೆಗೆ ಭದ್ರತಾ ಪಡೆಗಳನ್ನು ಸುತ್ತಲೂ ಇರಿಸಿಕೊಂಡು ನಿಶ್ಯಸ್ತ್ರ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿಸುತ್ತಾರೆ. ಅಮಿತ್ ಶಾ ಅವರ ಈ ವರ್ತನೆ ತುಂಬಾ ಕೀಳು ಮಟ್ಟದ್ದಾಗಿದೆ. ಇಂತಹ ಮೃಗಗಳ ಮೇಲೆ ಇತಿಹಾಸ ಕ್ಯಾಕರಿಸಿ ಉಗುಳಲಿದೆ’ ಎಂದು ಕಟು ಶಬ್ದಗಳಿಂದ ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ಆಯೋಜಿಸಲಾಗಿದ್ದ ಅಮಿತ್ ಶಾ ಚುನಾವಣಾ ಪ್ರಚಾರ ಸಮಾವೇಶದ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಪ್ರತಿಭಟನಾಕಾರರ ಗುಂಪೊಂದು ಸಿಎಎ ವಿರೋಧಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಸಂದರ್ಭದಲ್ಲಿ ಒಬ್ಬ ಪ್ರತಿಭಟನಾಕಾರನನ್ನು ಹಿಡಿದ ಬಿಜೆಪಿ ಬೆಂಬಲಿಗರು ಆತನ್ನು ಥಳಿಸಲಾರಂಭಿಸಿದರು. ಬಳಿಕ ಅಮಿತ್ ಶಾ ಸೂಚನೆಯ ಮೇರೆಗೆ ಭದ್ರತಾ ಪಡೆಯವರು ಯುವಕನ್ನು ಗುಂಪಿನಿಂದ ಬಿಡಿಸಿ ಸುರಕ್ಷಿತವಾಗಿ ಕಳುಹಿಸಿಕೊಟ್ಟರು.