2022 ರಲ್ಲಿ ಸಿನಿಮಾ ಬಾಲಿವುಡ್ ಹಾಗೂ ಟಿವಿ ರಂಗದಲ್ಲಿ ಹಲವಾರು ವಿವಾದ, ವಿಚಾರ- ವಿಷಯಗಳು ನಡೆದಿದೆ. ಕಾಶ್ಮೀರ್ ಫೈಲ್ಸ್ ನಿಂದ ಹಿಡಿದು ಬಾಯ್ಕಾಟ್ ವರೆಗೆ ನಡೆದ ಪ್ರಮುಖ ಘಟನೆಗಳ ಹಿನ್ನೆಲೆ ಇಲ್ಲಿದೆ..
ಮ್ಯಾಗ್ ಜಿನ್ ಫೋಟೋ ಶೂಟ್ ಗಾಗಿ ಬೆತ್ತಲಾದ ರಣ್ವೀರ್:
ನಟ ರಣವೀರ್ ಸಿಂಗ್ ಸಿನಿಮಾ ರಂಗದಲ್ಲಿ ತನ್ನ ನಟನೆಯಿಂದ, ಸ್ಟೈಲಿಷ್ಟ್ ಲುಕ್ ನಿಂದಲೇ ಖ್ಯಾತಿಗಳಿಸಿದವರು. ಖಡಕ್ ಪೊಲೀಸ್ ಪಾತ್ರ, ಲವರ್ ಬಾಯ್, ಕಾಮಿಡಿ ಪಾತ್ರ ಹೀಗೆ ಎಲ್ಲಾ ಪಾತ್ರಗಳಿಗೂ ಸೈ ಎನ್ನಿಸುವ ನಟ ಇದೇ ವರ್ಷದ ಸೆಪ್ಟೆಂಬರ್ ನಲ್ಲಿ ಮ್ಯಾಗ್ ಜಿನ್ ಫೋಟೋ ಶೂಟ್ ಗಾಗಿ ಪೂರ್ತಿ ಬಟ್ಟೆ ತೆಗೆದು ಬೆತ್ತಲಾಗಿದ್ದರು. ಈ ಫೋಟೋ ಎಷ್ಟು ವೈರಲ್ ಆಗಿ ವಿವಾದ ಸೃಷ್ಟಿಸಿತ್ತು ಎಂದರೆ ರಣ್ ವೀರ್ ಸಿಂಗ್ ಅವರ ಮೇಲೆ ಮುಂಬಯಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಎಲ್ಲೆಡೆ ಪ್ರತಿಭಟನೆ ವ್ಯಕ್ತವಾಗಿ ನಟನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.
‘ಹಿಂದಿʼ ಭಾಷೆಯ ಸುತ್ತ ಖ್ಯಾತ ನಟರ ಟ್ವೀಟ್ ವಾರ್: ಹಿಂದಿ ರಾಷ್ಟ್ರ ಭಾಷೆಯ ಬಗ್ಗೆ ಪ್ರತಿ ವರ್ಷ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳು ಏಳುತ್ತಲೇ ಇರುತ್ತದೆ. ಈ ವರ್ಷ ನಟ ಕಿಚ್ಚ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಮಾತನಾಡುತ್ತಾ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದರು.ಇದಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಅವರು ಗರಂ ಆಗಿ ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೆ ದಕ್ಷಿಣದ ಸಿನಿಮಾಗಳನ್ನು ಯಾಕೆ ಹಿಂದಿಯಲ್ಲಿ ಡಬ್ ಮಾಡಿ ರಿಲೀಸ್ ಮಾಡುತ್ತೀರಿ ಎಂದು ಅಜಯ್ ದೇವಗನ್ ಟ್ವೀಟ್ ಮೂಲಕ ಹೇಳಿದ್ದರು.
ನೀವು ಹಿಂದಿಯಲ್ಲಿ ಕಳುಹಿಸಿದ ಸಂದೇಶ ನನಗೆ ಅರ್ಥವಾಯಿತು. ನಾವೆಲ್ಲರೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ ಮತ್ತು ಹಿಂದಿಯನ್ನು ಕಲಿತಿದ್ದೇವೆ. ತಪ್ಪಿಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ನಾನು ಕನ್ನಡದಲ್ಲಿ ಟೈಪ್ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯ ಪಡುತ್ತಿದ್ದೇನೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಈ ಇಬ್ಬರ ನಡುವಿನ ಟ್ವೀಟ್ ಗಳು ಈ ವರ್ಷ ಸದ್ದು ಮಾಡಿತ್ತು.
ಗುಟ್ಕಾ ಬ್ರ್ಯಾಂಡ್ ನಲ್ಲಿ ಕಾಣಿಸಿಕೊಂಡು ಟ್ರೋಲ್ ಆದ ಅಕ್ಷಯ್ ಕುಮಾರ್: ಬಾಲಿವುಡ್ ನಟ ಅಕ್ಷಯ್ ಈ ವರ್ಷ ಕೆಲ ವಿಚಾರಗಳಿಗೆ ಸುದ್ದಿಯಾಗಿದ್ದಾರೆ. ಈ ಹಿಂದೆ ಗುಟ್ಕಾ ಜಾಹೀರಾತಿನಲ್ಲಿ ಎಷ್ಟು ಹಣ ಕೊಟ್ಟರು ಕಾಣಿಸಿಕೊಳ್ಳುವುದಿಲ್ಲ ಎಂದಿದ್ದ ಅವರು ಗುಟ್ಕಾ ಪ್ರಚಾರ ಮಾಡುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ವಿಚಾರಕ್ಕೆ ಅಕ್ಷಯ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಇನ್ನು ಇತ್ತೀಚೆಗೆ ಅವರು ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ಲುಕ್ ಗೆ ಟ್ರೋಲ್ ಆಗಿದ್ದರು.
ಮೋಹದ ಬಲೆಯಲ್ಲಿ ಸಿಲುಕಿ ಮೋಸ ಹೋದ ಜಾಕ್ವೆಲಿನ್: ಈ ವರ್ಷ ದೊಡ್ಡ ಮಟ್ಟದಲ್ಲಿ ಸುದ್ದಿಯಾದದ್ದು ಖ್ಯಾತ ನಟಿಯರ ಅಕ್ರಮ ಹಣ ವರ್ಗಾವಣೆ ಪ್ರಕರಣ ಪ್ರಕರಣ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ವಂಚಕ ಸುಖೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇಡಿ ಹಲವು ಬಾರಿ ಜಾಕ್ವೆಲಿನ್ ಹಾಗೂ ನೂರ್ ಫತೇಹಿ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು.
‘ಕಾಳಿʼ ಪೋಸ್ಟರ್ ವಿವಾದ: ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ʼಕಾಳಿʼ ಸಿನಿಮಾದ ಪೋಸ್ಟರ್ ಬಲ ಪಂಥೀಯ ಜನರ ಕೆಂಗಣ್ಣಿಗೆ ಗುರಿಯಗಿತ್ತು. ಕಾಳಿ ಮಾತೆಯ ಕೈಯಲ್ಲಿ ಎಲ್ ಜಿಬಿಟಿ ಧ್ವಜ ಹಾಗೂ ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಇರುವ ಪೋಸ್ಟರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿತ್ತು.
ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟ್ ವಲ್… ʼಕಾಶ್ಮೀರ್ ಫೈಲ್ಸ್ʼ ಗೆ ಅವಮಾನ: ವಿವೇಕ್ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ ಈ ವರ್ಷ ದೊಡ್ಡ ಹಿಟ್ ಆದ ಸಿನಿಮಾ. ಗೋವಾ ಅಂತಾರಾಷ್ಟ್ರೀಯ ಫಿಲ್ಮ್ಸ್ ಫೆಸ್ಟ್ ವಲ್ ನಲ್ಲಿ ಪ್ರದರ್ಶನ ಕೂಡ ಕಂಡಿತ್ತು. ಈ ವೇಳೆ ಫೆಸ್ಟ್ ವಲ್ ನ ಕೊನೆಯ ದಿನ ಇಸ್ರೇಲಿ ಚಲನಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ ‘ಈ ಚಿತ್ರೋತ್ಸವದ 15ನೇ ಚಿತ್ರ, ದಿ ಕಾಶ್ಮೀರ್ ಫೈಲ್ಸ್‌ನಿಂದ ನಾವೆಲ್ಲರೂ ವಿಚಲಿತರಾಗಿದ್ದೇವೆ. ಆಘಾತಕ್ಕೊಳಗಾಗಿದ್ದೇವೆ. ಅದು ಅಪಾಯಕಾರಿ ಸಿದ್ಧಾಂತವೊಂದನ್ನು ಪ್ರಚಾರ ಮಾಡುವ ಅಸಭ್ಯ ಚಲನಚಿತ್ರ’,ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತ ಚಿತ್ರವಲ್ಲ ಇದು ಎಂದು ಭಾಸವಾಯಿತು. ವೇದಿಕೆಯಲ್ಲಿ ನಿಮ್ಮೊಂದಿಗೆ ಈ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ನನಗೆ ಸಂಪೂರ್ಣವಾಗಿ ಸ್ವಾತಂತ್ರ್ಯವಿದೆ ಎಂದ ಹೇಳಿದ್ದರು.
ಈ ಹೇಳಿಕೆ ಬಾಲಿವುಡ್ ಅನೇಕ ಹಿರಿಯ ಕಲಾವಿದರನ್ನು ಕೆರಳಿಸಿತ್ತು. ವಿವಾದ ಭುಗಿಲೆದ್ದ ಬಳಿಕ ನಾದವ್ ಲ್ಯಾಪಿಡ್ ಕ್ಷಮೆ ಕೇಳಿದ್ದರು.
ಬಿಗ್ ಬಾಸ್ 16 ನಲ್ಲಿ ಸಾಜೀದ್ ಖಾನ್ ಎಂಟ್ರಿಗೆ ಹಲವರ ಅಪಸ್ವರ: ಮೀಟೂ ಪ್ರಕರಣದಲ್ಲಿ ಆರೋಪ ಕೇಳಿ ಬಂದ ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ಅವರು ಬಿಗ್ ಬಾಸ್ 16 ನಲ್ಲಿ ಸ್ಪರ್ಧಿಯಾಗಿ ಎಂಟ್ರಿಯಾದದಕ್ಕೆ ಹಲವರು ವಾಹಿನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಬಾಯ್ಕಾಟ್ ಗೆ ಬಲಿಯಾದ ಬಾಲಿವುಡ್: ಈ ಬಾಲಿವುಡ್ ಸಿನಿಮಾಗಳಿಗೆ ಅತೀ ಹೆಚ್ಚು ಕಾಡಿದ್ದು. ಬಾಯ್ಕಾಟ್ ಟ್ರೆಂಡ್. ಒಂದು ಸಿನಿಮಾವನ್ನು ಬಹಿಷ್ಕಾರ ಹಾಕುವ ಟ್ರೆಂಡ್. ಇದಕ್ಕೆ ಮೊದಲು ಟಾರ್ಗೆಟ್ ಆದದ್ದು ಆಮೀರ್ ಖಾನ್ ಆಭಿನಯ ʼಲಾಲ್ ಸಿಂಗ್ ಚಡ್ಡಾʼ. ಆಮೀರ್ ಖಾನ್ಅ ವರು ಹಿಂದೆ ಹೇಳಿದ್ದ ʼಅಸಹಿಷ್ಣುತೆʼ ಹೇಳಿಕೆಯನ್ನೇ ಗುರಿಯಾಗಿಸಿಕೊಂಡು ಚಿತ್ರವನ್ನು ಕೆಲವರು ಬಾಯ್ಕಾಟ್ ಮಾಡಿದ್ದರು. ಈ ಕಾರಣದಿಂದ ಸಿನಿಮಾ ಹೆಚ್ಚು ದಿನ ಓಡಲೇ ಇಲ್ಲ.
ರಣ್ಬೀರ್ ಕಪೂರ್ ಅವರ ʼಬ್ರಹ್ಮಾಸ್ರʼ ಚಿತ್ರವೂ ಬಾಯ್ಕಾಟ್ ಗೆ ಗುರಿಯಾಗಿತ್ತು. ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಂಡಿತ್ತು. ಇತ್ತೀಚೆಗೆ ಈಗಲೂ ಸುದ್ದಿಯಲ್ಲಿರುವ ವಿವಾದವೆಂದರೆ ಅದು ʼಪಠಾಣ್ʼ ಸಿನಿಮಾದ ʼಬೇಷರಂ ರಂಗ್ʼ ಹಾಡಿನ ಕುರಿತು. ʼಪಠಾಣ್ʼ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕೆಂದು ಕೆಲ ಸಂಘಟನೆಗಳು ಆಗ್ರಹಿಸುತ್ತಿದೆ.
ಇಷ್ಟು ಮಾತ್ರವಲ್ಲದೆ ʼಆದಿಪುರುಷ್ʼ ಚಿತ್ರದಲ್ಲಿನ ಕೆಲ ಪಾತ್ರಗಳು ವಿವಾದಕ್ಕೆ ಕಾರಣವಾಗಿದ್ದವು. ರಾವಣ ಮಿಲಿಟಿರಿ ಕಟಿಂಗ್ ಮಾಡಿಕೊಂಡು, ಕೂದಲನ್ನು ಸ್ಪೈಕ್ ಮಾಡಿಕೊಂಡಿದ್ದಾನೆ. ಹಿಂದು ಧಾರ್ಮಿಕ ಭಾವನೆಗೆ ಚಿತ್ರದಲ್ಲಿ ಧಕ್ಕೆ ತಂದಿದೆ ಎಂದು ಭಾಯ್ಕಾಟ್ ಗೆ ಕರೆ ನೀಡಿದ್ದರು.
ಇದಲ್ಲದೆ ನಟಿ ಸಾಯಿಪಲ್ಲವಿ ಅವರು ʼಕಾಶ್ಮೀರ್ ಫೈಲ್ಸ್ʼ ಬಿಡುಗಡೆ ಸಮಯದಲ್ಲಿ ಗೋರಕ್ಷಕರ ಕುರಿತು ಹೇಳಿದ ಮಾತೊಂದು ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು. ಇದಾದ ಬಳಿಕ ಸಾಯಿ ಪಲ್ಲವಿ ಅವರ ಯಾವ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿಲ್ಲ.