ಹೆಸರು, ಹಣ, ಕೀರ್ತಿ…ಇವೆಲ್ಲಾ ಏಕಕಾಲಕ್ಕೆ ಗಳಿಸಲು ಸಾಧ್ಯವೇ?ನಂ.1 ನಟ ಅಥವಾ ನಟಿ, ನಂ 1 ಕಾಮಿಡಿಯನ್ ಆಗಲು ಅದರ ಹಿಂದಿರುವ ಶ್ರಮ, ನೋವು, ಅವಮಾನ ಎಷ್ಟಿರುತ್ತೆ ಎಂಬುದಕ್ಕೆ ಅಂತಹ ಸಾಧಕರ ತೆರೆಯ ಹಿಂದಿನ ಬದುಕನ್ನು ಕೆದಕಿದರೆ ಸಾಧನೆಯ ಹಿಂದಿರುವ ನಿಜವಾದ ಬದುಕು ಅನಾವರಣಗೊಳ್ಳುತ್ತದೆ…
90ರ ದಶಕದಿಂದ ಹಿಡಿದು ಇಲ್ಲಿಯವರೆಗೂ ಬಾಲಿವುಡ್ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಾಮಿಡಿ ನಟ ಜಾನಿ ಲಿವರ್! ಜಾನಿ ತನ್ನದೇ ಆದ ವಿಶಿಷ್ಟ ನಟನೆ, ಹಾಸ್ಯದ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಜಾನಿ ಮೂಲತಃ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವರು. ಹುಟ್ಟು ಹೆಸರು ಜಾನಿ ಪ್ರಕಾಶ್ ರಾವ್ ಜಾನುಮಲ. ಭಾರತೀಯ ಚಿತ್ರರಂಗದಲ್ಲಿನ ಹಲವಾರು ಹಾಸ್ಯನಟರಿಗೆ ಸ್ಫೂರ್ತಿಯಾದವರು ಜಾನಿ. ಹಾಗಾದರೆ ಜಾನಿ ಪ್ರಕಾಶ್ ರಾವ್ “ಜಾನಿ ಲಿವರ್” ಆಗಿ ಫೇಮಸ್ ಆಗಿದ್ದು ಹೇಗೆ ಗೊತ್ತಾ?
ಜಾನಿಯ ತಂದೆ, ತಾಯಿ ಕೂಡಾ ಮಧ್ಯಮವರ್ಗಕ್ಕೆ ಸೇರಿದ್ದರು. ಅವರೇನೂ ಶ್ರೀಮಂತರಾಗಿರಲಿಲ್ಲ. ಬದುಕು ಕಟ್ಟಿಕೊಳ್ಳಲು ತಂದೆ, ತಾಯಿ ತಮ್ಮ ಮಕ್ಕಳೊಂದಿಗೆ ಆಂಧ್ರಪ್ರದೇಶದಿಂದ ಮುಂಬೈ ಮಹಾನಗರಿಗೆ ಬಂದಿದ್ದರು. ಜಾನಿ ಆಂಧ್ರ ತೆಲುಗು ಶಾಲೆಯಲ್ಲಿ 7ನೇ ತರಗತಿವರೆಗೆ ಶಿಕ್ಷಣ ಪಡೆಯುತ್ತಾರೆ. ಕಲಿಯಬೇಕೆಂಬ ಹಂಬಲ ಇದ್ದರೂ ಸಹ ಅದು ಸಾಧ್ಯವಾಗೋದಿಲ್ಲ, ಯಾಕೆಂದರೆ ಆರ್ಥಿಕವಾಗಿ ಜಾನಿ ಕುಟುಂಬ ತುಂಬ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕವಾಗಿ ನೆರವು ಒದಗಿಸುವ ಸಲುವಾಗಿ ಶಿಕ್ಷಣ ಮುಂದುವರಿಸದೇ ಕೆಲಸದ ಬೇಟೆಗೆ ಮುಂದಾಗಿದ್ದರು.
ಮುಂಬೈಯಂತಹ ಮಹಾನಗರಿಯಲ್ಲಿ ಏನ್ ಮಾಡೋದು. ಕೈಯಲ್ಲಿ ಹಣವಿಲ್ಲ, ತಂದೆ, ತಾಯಿಯೂ ಶ್ರೀಮಂತರಲ್ಲ. ಯಾರ ಬೆಂಬಲವೂ ಇಲ್ಲ, ಗಾಡ್ ಫಾದರ್ ಗಳಂತೂ ಇಲ್ಲವೇ ಇಲ್ಲ. ತುತ್ತಿನ ಚೀಲ ತುಂಬಿಸಿಕೊಳ್ಳಲು ಜಾನಿ ಮುಂಬೈನ ಬೀದಿಗಳಲ್ಲಿ ಪೆನ್ ಮಾರಾಟದಿಂದ ಹಿಡಿದು ಹಲವಾರು ಸಣ್ಣ, ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು!
ಜಾನಿಗೆ ಚಿಕ್ಕಂದಿನಲ್ಲಿ ಮಿಮಿಕ್ರಿ ಮಾಡುವ ಹವ್ಯಾಸ ಇತ್ತು. ಹೈದರಾಬಾದ್ ನಲ್ಲಿ ಚಿಕ್ಕವಯಸ್ಸಿನಲ್ಲಿದ್ದಾಗಲೇ ಬಾಲಿವುಡ್ ನ ಜಾನಿ ವಾಕರ್, ಕಿಶೋರ್ ಕುಮಾರ್ ಹಾಗೂ ಮೆಹಮೂದ್ ನಂತಹ ಘಟಾನುಘಟಿ ಕಲಾವಿದರಿಂದ ಸ್ಫೂರ್ತಿ ಪಡೆದು ಕಾಮಿಡಿಯನ್ನೂ ಮಾಡುತ್ತಿದ್ದರು. ತಾನು ಮಿಮಿಕ್ರಿ ಕಲಾವಿದನಾದರೆ ಹೇಗೆ ಎಂಬುದಾಗಿ ನಿರ್ಧರಿಸಿದ್ದ ಜಾನಿ ಪರಿಚಯಸ್ಥರ ನೆರವಿನೊಂದಿಗೆ ಪ್ರತಾಪ್ ಜಾನಿ ಹಾಗೂ ರಾಮ್ ಕುಮಾರ್ ಜತೆ ಮಿಮಿಕ್ರಿಯ ಪ್ರಾಥಮಿಕ ಪಟ್ಟುಗಳನ್ನು ಕಲಿತುಕೊಳ್ಳುತ್ತಾರೆ. ಈ ನಡುವೆ ಜಾನಿ ಮುಂಬೈನಲ್ಲಿ ಹಿಂದೂಸ್ತಾನ್ ಲಿವರ್ ಫ್ಯಾಕ್ಟರಿಯಲ್ಲಿ ತಂದೆ ಜೊತೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ!
ಫ್ಯಾಕ್ಟರಿ ಕೆಲಸದ ಬಿಡುವಿನ ವೇಳೆ ಜಾನಿ ಗೆಳೆಯರ ಬಳಿ ಅಮೆರಿಕನ್ ನಟ, ಸಂಗೀತಗಾರ ಎಲ್ವೀಸ್ ಪ್ರೆಸ್ಲೈಯನ್ನು ಅನುಕರಿಸಿ ಮಿಮಿಕ್ರಿ ಮಾಡುತ್ತಿದ್ದರಂತೆ. ಜಾನಿ ಪ್ರತಿಭೆಯನ್ನು ಕಂಡ ಸಹಪಾಠಿಗಳು ಹಿಂದೂಸ್ತಾನ್ ಲಿವರ್ ಆಯೋಜಿಸಿದ್ದ ಸಮಾರಂಭದಲ್ಲಿ ಮಿಮಿಕ್ರಿ ಮಾಡುವಂತೆ ಪ್ರೋತ್ಸಾಹಿಸಿದ್ದರು. ಗೆಳೆಯರ ಒತ್ತಾಸೆಯಂತೆ ಜಾನಿ ಮಿಮಿಕ್ರಿ ಮಾಡುವ ಮೂಲಕ ಜನರನ್ನು ರಂಜಿಸಿದ್ದರು. ಒಮ್ಮೆ ಯೂನಿಯನ್ ಮ್ಯಾನೇಜರ್ ಮತ್ತು ಸಹೋದ್ಯೋಗಿಗಳ ಮಿಮಿಕ್ರಿ ಮಾಡಿ ತೋರಿಸಿದರು… ಹೀಗೆ ಜಾನಿಯ ಜರ್ನಿ ಆರಂಭವಾದ ಮೇಲೆ ಜಾನಿ ಸಹೋದ್ಯೋಗಿಗಳು ಜಾನಿ ಲಿವರ್ ಎಂದು ಕರೆಯತೊಡಗಿದ್ದರು..ಮುಂದೆ ಜಾನಿಯ ಹೆಸರು ಜಾನಿ ಲಿವರ್ ಎಂದೇ ಖ್ಯಾತಿ ಪಡೆಯಿತು!
ಅಲ್ಲಿಂದ ನಿಧಾನಕ್ಕೆ ಜಾನಿ ತಬ್ಸಸಮ್ ಹಿಟ್ ಪರಾಡೆ ಆಯೋಜಿಸಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡತೊಡಗಿದ್ದರು. ಇದರಿಂದ ಜಾನಿಗೆ ಹೆಸರು ಬರಲಾರಂಭಿಸಿತ್ತು. ಸಂಗೀತ ನಿರ್ದೇಶಕರಾದ ಕಲ್ಯಾಣ್ ಜೀ, ಆನಂದ್ ಜೀ ಜೊತೆ ಸೇರಿ ಜಗತ್ತಿನಾದ್ಯಂತ ಜಾನಿ ಹಲವಾರು ಪ್ರದರ್ಶನಗಳನ್ನು ನೀಡಿದ್ದರು. 1982ರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಹೋಗಿ ನಡೆಸಿಕೊಟ್ಟ ಕಾರ್ಯಕ್ರಮ ಜಾನಿ ಲಿವರ್ ಬದುಕಿಗೆ ತಿರುವನ್ನೇ ಕೊಟ್ಟು ಬಿಟ್ಟಿತು!
ಈ ಒಂದು ಷೋ ಮೂಲಕ ಬಾಲಿವುಡ್ ಹಿರಿಯ ನಟ ಸುನಿಲ್ ದತ್ ಜಾನಿಯನ್ನು ಗುರುತಿಸಿ ತಮ್ಮ ದರ್ದ್ ಕಾ ರಿಷ್ತಾ ಸಿನಿಮಾದಲ್ಲಿ ಒಂದು ಪಾತ್ರವನ್ನು ಕೊಟ್ಟಿದ್ದರು. 1980ರಲ್ಲಿ ತಮ್ಮದೇ ಆದ ಮಿಮಿಕ್ರಿ ಶೋನ ಧ್ವನಿ ಸುರುಳಿಯನ್ನು ತಯಾರಿಸಿ ವಿತರಿಸಿದ್ದರು. ಮಿಮಿಕ್ರಿ ಕಾಮಿಡಿ “ಹಸೀ ಕೆ ಹಂಗಾಮೆ” ದೇಶ ವಿದೇಶಗಳಲ್ಲೂ ಮನೆಮಾತಾಗುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ದತ್ ಕೃಪೆಯಿಂದ ಜಾನಿ ಮುಂದೆ ಜ್ವಾಲಾ ಸಿನಿಮಾದಲ್ಲೂ ನಟಿಸಿದರು. ಆದರೆ ಜಾನಿ ನಟಿಸಿದ್ದ ಬಾಝಿಗರ್ ಸಿನಿಮಾ ಹಿಟ್ ಆಗುವುದರೊಂದಿಗೆ ಮುಂದೆ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು.
ಜಾನಿ ಲಿವರ್ ಟೆಲಿವಿಷನ್ ನ ಮೊದಲ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಎಂಬ ಹೆಸರು ಮಾಡಿದ್ದಾರೆ. 13 ಫಿಲ್ಮ್ ಫೇರ್ ಪ್ರಶಸ್ತಿ ಗಳಿಸಿ ಹೆಗ್ಗಳಿಕೆ ಅವರದ್ದು, ಜಾನಿ ತುಳು ಸಿನಿಮಾ ರಂಗ್ ನಲ್ಲಿ ಅಭಿನಯಿಸಿದ್ದರು. ಈ ಚಿತ್ರ ದಾಖಲೆ ಬರೆದಿತ್ತು. ಮುಂಬೈಯಲ್ಲಿರುವ ನೆರೆಹೊರೆಯರು, ಗೆಳೆಯರ ಪ್ರಭಾವದಿಂದಾಗಿ ಜಾನಿ ನಿರರ್ಗಳವಾಗಿ ತುಳು ಕೂಡಾ ಮಾತನಾಡುತ್ತಾರೆ! ತಮಿಳು, ತೆಲುಗು ಸಿನಿಮಾಗಳಲ್ಲೂ ಜಾನಿ ನಟಿಸಿದ್ದರು. ಝೀ ಟಿವಿಯಲ್ಲಿ ತಮ್ಮದೇ ನಿರ್ಮಾಣದ ಜಾನಿ ಅಲಾರೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈಗಲೂ ಬೇಡಿಕೆಯಲ್ಲಿರುವ ನಟ ಜಾನಿ ಪತ್ನಿ ಸುಜಾತ ಹಾಗೂ ಮಗಳು ಜಾಮಿ ಹಾಗೂ ಮಗ ಜೆಸ್ಸೆ ಜತೆ ಮುಂಬೈನಲ್ಲಿ ವಾಸವಾಗಿದ್ದಾರೆ. ಅಂದ ಹಾಗೆ ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಸಾಧು ಕೋಕಿಲಾಗೆ ಜಾನಿ ಲಿವರ್ ಮೇಲೆ ಪ್ರಭಾವ ಬೀರಿದ ನಟ!