Advertisement

ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ ಸುಶಾಂತ್ ಸಿಂಗ್ ತಂದೆ

07:57 PM Jul 28, 2020 | Hari Prasad |

ಪಟ್ನಾ: ನಟಿ ರಿಯಾ ಚಕ್ರವರ್ತಿ ತನ್ನ ಮಗನ ಕೈಯಿಂದ ಸಿಕ್ಕಾಪಟ್ಟೆ ಹಣ ಪಡೆದುಕೊಂಡಿದ್ದಾಳೆ ಮತ್ತು ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದಾಳೆ ಎಂದು ಆರೋಪಿಸಿ ನಟ ಸುಶಾಂತ್ ಸಿಂಗ್ ಅವರ ತಂದೆ ಇಂದು ದೂರು ದಾಖಲಿಸಿದ್ದಾರೆ.

Advertisement

ಈ ಕುರಿತಾಗಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಅವರು ಪಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದಾರೆ.

ಜೂನ್ 14 ರಂದು ಮುಂಬಯಿಯ ತನ್ನ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ನಟ ಸುಶಾಂತ್ ಸಿಂಗ್ ಅವರು ಕೆಲವು ಸಮಯ ನಟಿ ರಿಯಾ ಚಕ್ರವರ್ತಿಯೊಂದಿಗೆ ಡೇಟಿಂಗ್ ನಡೆಸಿದ್ದರು.

ದೂರು ದಾಖಲಿಸಿಕೊಂಡಿರುವ ಪಟ್ನಾ ಪೊಲೀಸರು ಈ ವಿಷಯಕ್ಕೆ ಸಂಬಂಧಿಸಿದಂತೆ ಸುಶಾಂತ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬಯಿ ಪೊಲೀಸ್ ತಂಡದ ಡಿಸಿಪಿಯವರನ್ನು ಭೇಟಿ ಮಾಡಿದ್ದಾರೆ.

ಜೂನ್ ತಿಂಗಳಿನಲ್ಲಿ ಮುಂಬಯಿ ತನಿಖಾ ತಂಡದ ಪೊಲೀಸ್ ಅಧಿಕಾರಿಗಳು ಸುಶಾಂತ್ ಅವರ ತಂದೆಯನ್ನು ಪ್ರಶ್ನಿಸಿ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಕೆ.ಕೆ. ಸಿಂಗ್ ಅವರು ಅಲ್ಲಿ ಯಾವುದೇ ದೂರು ದಾಖಲಿಸಿರಲಿಲ್ಲ.

Advertisement

ಮಾತ್ರವಲ್ಲದೇ ಈ ವಿಚಾರದಲ್ಲಿ ನನಗೆ ಯಾರ ಮೇಲೂ ಆರೋಪ ಮಾಡಲು ಏನೂ ಇಲ್ಲ ಎಂದು ಹೇಳಿದ್ದರು. ಆದರೆ ಇದೀಗ ಸುಶಾಂತ್ ಅವರ ತಂದೆ ಪಟ್ನಾದಲ್ಲಿ ತನ್ನ ಮಗನ ಮಾಜೀ ಗೆಳತಿಯ ವಿರುದ್ಧ ದೂರು ದಾಖಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನಟ ಸುಶಾಂತ್ ಸಿಂಗ್ ಅವರ ಆತ್ಮಹತ್ಯೆ ಪ್ರಕರಣದ ವಿಚಾರಣೆಯನ್ನು ಬಾಂದ್ರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟಿ ರಿಯಾ ಅವರನ್ನು ಪೊಲೀಸರು ಈ ಹಿಂದೆ ವಿಚಾರಣೆ ನಡೆಸಿದ್ದರು. ಆ ಸಂದರ್ಭದಲ್ಲಿ ರಿಯಾ ಅವರು, ‘ಸುಶಾಂತ್ ಯಶ್ ರಾಜ್ ಪಿಲಂಸ್ ಜೊತೆಗಿನ ಒಪ್ಪಂದವನ್ನು ರದ್ದುಮಾಡಿಕೊಂಡಿದ್ದರು ಮತ್ತು ತನಗೂ ಹಾಗೇ ಮಾಡುವಂತೆ ಹೇಳಿದ್ದರು’ ಎಂಬ ಹೇಳಿಕೆಯನ್ನು ನೀಡಿದ್ದರು.

‘ಶುದ್ದ್ ದೇಸೀ ರೊಮ್ಯಾನ್ಸ್’, ‘ಡಿಟೆಕ್ಟಿವ್ ಭ್ಯೋಮ್ ಕೇಶ್ ಭಕ್ಷಿ’ ಮತ್ತು ಶೇಖರ್ ಕಪೂರ್ ಅವರ ‘ಪಾನೀ’ ಸಹಿತ ಒಟ್ಟು ಮೂರು ಚಿತ್ರಗಳಲ್ಲಿ ನಟಿಸಲು ಸುಶಾಂತ್ ಸಿಂಗ್ ಅವರು ಯಶ್ ರಾಜ್ ಫಿಲಂಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next