ಮುಂಬೈ : ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಅಮಿತಾಭ್ ಶನಿವಾರ ರಾತ್ರಿ (ಫೆ.27) ತಮ್ಮ ಬ್ಲಾಗ್‍ನಲ್ಲಿ ಸಂಕ್ಷಿಪ್ತವಾಗಿ ಈ ವಿಚಾರ ಹಂಚಿಕೊಂಡಿದ್ದಾರೆ. ಅಮಿತಾಭ್ ಅವರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಏನು? ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದೇಕೆ ? ಎಂಬುದನ್ನು ಹೇಳಿಕೊಂಡಿಲ್ಲ. ಅಭಿಮಾನಿಗಳು ಬಿಗ್ ಬಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
78 ವರ್ಷದ ಅಮಿತಾಭ್ ಅವರಿಗೆ ಕಳೆದ ವರ್ಷ ಕೋವಿಡ್ -19 ಸೋಂಕು ಕಾಣಿಸಿಕೊಂಡಿತ್ತು. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈ ಹಿಂದೆ ಬಾಲಿವುಡ್ ನಟ ಅಮೀರ್ ಖಾನ್ ಅವರ ಬಿಗ್ ಬಜೆಟ್‍ನ ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾ ಚಿತ್ರೀಕರಣದ ವೇಳೆಯೂ ಅಮಿತಾಭ್ ಅನಾರೋಗ್ಯಗೊಂಡಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಚಿತ್ರೀಕರಣ ಸ್ಥಳದಿಂದ ನೇರವಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜತೆ ಸದಾ ಟಚ್ ನಲ್ಲಿರುವ ಅಮಿತಾಭ್, ಪ್ರತಿಯೊಂದು ವಿಚಾರಗಳನ್ನು ಅಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಅವರ ಆರೋಗ್ಯದ ಸ್ಥಿತಿಗತಿ ಬಗ್ಗೆ ಹೇಳಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದನ್ನೂ ಅಭಿಮಾನಿಗಳ ಗಮನಕ್ಕೆ ತಂದಿದ್ದಾರೆ.
ಇನ್ನು ಅಮಿತಾಭ್ ಅವರು ಅತೀ ಹೆಚ್ಚು ಬಿಝಿ ಇರುವ ಬಾಲಿವುಡ್ ನಟ. ಈ ಇಳಿವಯಸ್ಸಿನಲ್ಲಿಯೂ ಅವಕಾಶಗಳ ರಾಶಿ ಅವರ ಮುಂದೆ ಇದೆ. ಸದ್ಯ ‘ಮೇ ಡೇ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.