ನವದೆಹಲಿ : ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬೀದಿ ಜಗಳದ ವಿಡಿಯೋವೊಂದರಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರ ಹೆಸರು ತಳುಕು ಹಾಕಿಕೊಂಡಿದೆ.
ನವದೆಹಲಿಯ ಏರೋಸಿಟಿ ಮಾಲ್ ಎದುರು ಎರಡು ಗುಂಪುಗಳ ನಡುವೆ ಜಗಳ ಏರ್ಪಟ್ಟು, ಪರಸ್ಪರ ಹೊಡೆದಾಟ ನಡೆದಿರುವುದು ಈ ವಿಡಿಯೋದಲ್ಲಿದೆ. ಇಲ್ಲಿ ಜನರ ಗುಂಪು ವ್ಯಕ್ತಿಯೋರ್ವನಿಗೆ ಮನಬಂದಂತೆ ಥಳಿಸಿದ್ದಾರೆ. ಥಳಿತಕ್ಕೋಳಗಾದ ವ್ಯಕ್ತಿ ಬಾಲಿವುಡ್ ನಟ ಅಜಯ್ ದೇವಗನ್ ಎನ್ನುವ ಸುದ್ದಿ ಜೋರಾಗಿ ಕೇಳಿ ಬಂದಿದೆ. ಪಬ್‍ವೊಂದರ ಪಾರ್ಟಿಯಲ್ಲಿ ಜಗಳ ನಡೆದು ನಟನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಂಜು-ಮಂಜಾಗಿರುವ ಈ ವಿಡಿಯೋದಲ್ಲಿ ಹಲ್ಲೆಗೊಳಗಾದವರ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ.
ಆಧಾರ ರಹಿತ ಸುದ್ದಿ :
ಇನ್ನು ಸದ್ಯ ಕೇಳಿ ಬರುತ್ತಿರುವ ಹಲ್ಲೆಯ ಸುದ್ದಿಯನ್ನು ನಟ ಅಜಯ್ ದೇವಗನ್ ಅವರ ಸಹಚರರ ತಂಡ ಅಲ್ಲಗಳೆದಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಏರೋಸಿಟಿ ಮಾಲ್ ನಲ್ಲಿ ಘಟನೆಯಲ್ಲಿ ಅಜಯ್ ದೇವಗನ್ ಅವರ ಮೇಲೆ ಹಲ್ಲೆ ನಡೆದಿದೆ ಎನ್ನುವುದು ಆಧಾರ ರಹಿತ ಸುದ್ದಿ. ಕಳೆದು 14 ತಿಂಗಳಿಂದ ಅಜಯ್ ದೇವಗನ್ ದೆಹಲಿಗೆ ಹೋಗಿಯೇ ಇಲ್ಲ ಎಂದಿದ್ದಾರೆ.
ಜನವರಿ 2020 ರಲ್ಲಿ ತಾನಾಜೀ ಚಿತ್ರದ ಪ್ರಮೋಷನ್ ನಂತರ ಅಜಯ್ ದೇವಗನ್ ಅವರು ದೆಹಲಿಯತ್ತ ಮುಖಮಾಡಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ದೆಹಲಿಯಲ್ಲಿ ನಡೆದ ಘಟನೆಯಲ್ಲಿ ಅಜಯ್ ದೇವಗನ್ ಇದ್ದಾರೆ ಎನ್ನುವುದು ಸುಳ್ಳು. ಅಜಯ್ ದೇವಗನ್ ಅವರು ಮೈದಾನ್, ಮೇ ಡೇ ಹಾಗೂ ಗಂಗೂಬಾಯಿ ಕಾಥಿವಾಡು ಸಿನಿಮಾಗಳ ಶೂಟಿಂಗ್‍ಗಾಗಿ ಕಳೆದ ಕೆಲವು ತಿಂಗಳಿನಿಂದ ಮುಂಬೈನಲ್ಲಿಯೇ ಉಳಿದುಕೊಂಡಿದ್ದಾರೆ. ಹೀಗಾಗಿ ಸುಳ್ಳು ಸುದ್ದಿಗಳನ್ನು ಭಿತ್ತರಿಸಬಾರದು. ಇಂತಹ ಸುದ್ದಿಗಳನ್ನು ಪಬ್ಲಿಷ್ ಮಾಡುವ ಮುನ್ನ ಸತ್ಯಾಸತ್ಯತೆಯ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.