Advertisement

ಬೋಜಪ್ಪನೂ ಲಟಾರಿ ಸ್ಕೂಟರೂ…

12:30 AM Feb 17, 2019 | |

ಬೋಜಪ್ಪನ ಗ್ಯಾರೇಜ್‌ ಆ ದಿನ ಜನರಿಂದ ತುಂಬಿ ತುಳುಕುತ್ತಿತ್ತು. ಹಾಗೆಂದು ಅವನ ಗ್ಯಾರೇಜಿನಲ್ಲೇನು ವಾಹನಗಳು ಸಾಲುಗ‌ಟ್ಟಿ ರಿಪೇರಿಗಾಗಿ ನಿಂತಿರಲಿಲ್ಲ. ಇದ್ದದ್ದು ಒಂದು ಲಟಾರಿ ಸೈಕಲ್‌ ಮಾತ್ರ. ಅದು ಪಂಚಾಯತ್‌ ಅಧ್ಯಕ್ಷ ವಾಸುರವರ ಮಗ ಆದಿತ್ಯನದ್ದು. ಅದರ ಟೈರಿನ ಗಾಳಿ ಹಾಕಿಸಲು ಅವನ ಪಟಾಲಮ್ಮಿನಲ್ಲಿದ್ದ ಎಲ್ಲ ಮಕ್ಕಳು ಹಾಜರಿ ಹಾಕಿದ್ದರು. ಬೋಜಪ್ಪನೇನೂ ಮಕ್ಕಳ ಕೆಲಸ ಎಂದು ಪಡಪೋಸಿ ಮಾಡುತ್ತಿರಲಿಲ್ಲ. ಟೈರನ್ನು ನಿಧಾನಕ್ಕೆ ಬಿಚ್ಚಿ ಅದರ ಟ್ಯೂಬ್‌ ತೆಗೆದು ಅವನ ಗ್ಯಾರೇಜಿನೆದುರಿದ್ದ ನೀರಿನ ಪುಟ್ಟ ಟ್ಯಾಂಕಿಗೆ ಮುಳುಗಿಸಿ ಎಲ್ಲಿ ಗಾಳಿ ಹೋಗುತ್ತಿದೆ ಎಂದು ತಿಳಿದುಕೊಂಡು ನಂತರ ಆ ಜಾಗದ ಪ್ಯಾಚ್‌ ಬಂದ್‌ ಮಾಡುತ್ತಿದ್ದ. ಆದಿತ್ಯನ ಸೈಕಲ್ಲಿನ ಟ್ಯೂಬಿನಲ್ಲಿ ಅದರ ಒರಿಜಿನಲ್‌ ಟ್ಯೂಬಿನಿಂದ ಹೆಚ್ಚಾಗಿ ಪ್ಯಾಚುಗಳಿದ್ದ ಜಾಗವೇ ಕಾಣಿಸುತ್ತಿತ್ತು. 

Advertisement

“”ಇದು ಲಾಸ್ಟ್‌ ನಾನು ನಿನ್ನ ಸೈಕಲ್‌ ಪಂಕ್ಚರ್‌ ಹಾಕಿ ಕೊಡೋದು. ನಂಗೆ ಈ ಕೆಲಸಕ್ಕೆ ಸಿಗುವ ದುಡ್ಡಲ್ಲಿ ಲಾಭ ಬಿಡು, ಅಸಲು ಸಹ ಗಿಟ್ಟೋದಿಲ್ಲ. ನಿನ್ನಪ್ಪನತ್ರ ಹೇಳಿ ಹೊಸಾ ಟೈರ್‌ ಹಾಕ್ಸು. ಟೈರ್‌ ಬೇಕಾದರೆ ನಾನೇ ತಂದುಕೊಡ್ತೀನಿ” ಎಂದು ಆದಿತ್ಯನ ತಲೆಗೆ ಹೊಸ ಟಯರಿನ ಆಸೆಯ ಹುಳ ಬಿತ್ತಿ ಟೈರ್‌ ಪ್ಯಾಚ್‌ ಮಾಡಿಸಿಕೊಟ್ಟ. ಒಂದೇ ಸಲ ನೆರೆ ನೀರು ಇಳಿದಂತೆ ಬೋಜಪ್ಪನ ಗ್ಯಾರೇಜು ಆದಿತ್ಯನ  ಸೈಕಲಿನೊಂದಿಗೆ ಖಾಲಿ ಆಯಿತು. ಈಗ ಉಳಿದದ್ದು ಒಂದು ರಿಪೇರಿಗೆ ಬಾರದ ಬೈಕಿನ ಎಂಜಿನ್‌ ಮತ್ತು ಮುರುಕು ಟೇಬಲ್ಲಿನ ಮೇಲಿದ್ದ ಹತ್ತಾರು ತರದ ಟೂಲ್ಸ್‌.

ನಿಮಗೀಗಾಗಲೇ ಬೋಜಪ್ಪನ ಪರಿಚಯವಿರಬಹುದು. ಇಲ್ಲದೇ ಹೋದಲ್ಲಿ ನಾನೇ ಪರಿಚಯ ಮಾಡಿಕೊಡುತ್ತೇನೆ. 
ಬೋಜಪ್ಪ ಕೋಳಿಮನೆ ವಂಶದ ಕುಡಿ. ಅವರ ಮನೆಯ ಹಿರಿಯರ್ಯಾರೋ ಮಡಿಕೇರಿಯ ರಾಜನಿಗೆ ನಾಟಿಕೋಳಿಯೊಂದನ್ನು ಒಪ್ಪಿಸಿ, ಅದರ ರುಚಿಗೆ ಸೋತು ಹೋದ ರಾಜ ಅವರಿಗೆ ಈಗವರು ವಾಸವಿರುವ ಮನೆಸ್ಥಳ ಮತ್ತು ಅದರ ಹಿಂದಿರುವ ನಾಲ್ಕೆಕರೆ ಗುಡ್ಡವನ್ನು ದಾನವಾಗಿ ಕೊಟ್ಟಿದ್ದನಂತೆ. ಅದಕ್ಕಾಗಿಯೇ ಅವರ ಮನೆಗೆ ಕೋಳಿ ಮನೆ ಎಂಬ ನಾಮಧೇಯವಂತೆ. ಅವರೀಗ ವಾಸವಿರುವ ಮನೆ ರಾಜವಂಶದ ಬಳುವಳಿಯಾದ ಕಾರಣ ಅದು ಒಂದು ಅರಮನೆಯೇ ಎಂಬ ಅಭಿಮಾನ ಬೋಜಪ್ಪನಿಗೆ. ಆದರೇನು ಮಾಡುವುದು. ಬರೀ ಅರಮನೆಯಲ್ಲಿದ್ದರೆ ಹೊಟ್ಟೆ ತುಂಬಬೇಕಲ್ಲ. ಒಬ್ಬನೇ ಮಗನಾದ ಬೋಜಪ್ಪನಿಗೆ ಅಪ್ಪ‌ಅಮ್ಮ ಸತ್ತ ಮೇಲೆ ಊಟ ಹಾಕುವವರೂ ಇಲ್ಲವಾಗಿದ್ದರು.ವಿದ್ಯೆ ತಲೆಗೆ ಹತ್ತದ ಕಾರಣ ತಾನೇ ಅವರಿವರ ಗಾಡಿಯ ಸೂð ಬಿಚ್ಚಿ ಮರು ಜೋಡಿಸುವಷ್ಟು ಕಲಿತು “ಗ್ಯಾರೇಜ್‌’ ಎಂದು ಬೋರ್ಡೆàರಿಸಿಕೊಂಡಿದ್ದ. ಊರಿನಲ್ಲಿರುವ ಬೆರಳೆಣಿಕೆಯ ಜೀಪುಗಳ ಓನರುಗಳು ಇಲ್ಲಿಂದ  ಬಿಟ್ಟಿಯಾಗಿ ಟೂಲ್ಸ್‌ ತೆಗೆದುಕೊಂಡು ಹೋಗುವ ಕಾರಣಕ್ಕೆ ಭೋಜಪ್ಪನ‌ ಮೇಲೆ ಪ್ರೀತಿ ತೋರಿಸುತ್ತಿದ್ದರು ಬಿಟ್ಟರೆ ಅವರಿಂದ ಇವನಿಗೇನೂ ಲಾಭವಿರಲಿಲ್ಲ. ಆ ಊರಲ್ಲಿದ್ದ  ಡಾಕ್ಟರರ ನಿತ್ಯ ರೋಗಿ ಸ್ಕೂಟರೊಂದೇ ವಾರಕ್ಕೆರಡು ಬಾರಿ ಸೈಲೆನ್ಸರಿನಲ್ಲಿ ಕರಿ ತುಂಬಿದೆ ಎಂದೋ, ಪ್ಲಗ್‌ ಕ್ಲೀನ್‌ ಮಾಡಲೆಂದೋ, ಪೆಟ್ರೋಲ್‌ ಟ್ಯಾಂಕಿನಲ್ಲಿ ಕಸ ಇದೆಯೆಂದೋ ರಿಪೇರಿಗೆ ಬರುತ್ತಿದ್ದುದು. ಅದು ಬಿಟ್ಟರೆ ಹಳ್ಳಿಯಿಂದ ವಾರಕ್ಕೊಮ್ಮೆ ಪೇಟೆಗೆ ಬರುತ್ತಿದ್ದ ಹೆಂಗಳೆಯರಿಗೆ ಬೋಜಪ್ಪನ ಅಂಗಡಿ ನಿಲುದಾಣ. ಅವರು ತರುತ್ತಿದ್ದ ತರಕಾರಿ, ಸೊಪ್ಪುಗಳ ಮಾರಾಟ ಕೇಂದ್ರವೂ ಇದೇ. ಅದಲ್ಲದೇ ಬೋಜಪ್ಪಸುತ್ತಿನ ಹಳ್ಳಿಗಳಿಂದ ಸೆಕೆಂಡ್‌ ಕ್ಲಾಸ್‌ ಕಾಫಿ, ಏಲಕ್ಕಿ, ಕಾಡುಜೇನು ಖರೀದಿಸಿ ಊರು ನೋಡಲು ಬರುತ್ತಿದ್ದ ಟೂರಿಸ್ಟುಗಳಿಗೆ ಫ‌ಸ್ಟ್‌ ಕ್ಲಾಸ್‌, ಫ್ರೆಶ್‌, ಎಂದೆಲ್ಲÉ ವಿಶೇಷಣಗಳನ್ನು ಕೊಟ್ಟು ಮಾರಾಟ ಮಾಡುತ್ತಿದ್ದ. ಅದಕ್ಕೋಸ್ಕರ ಆತ ಇಡೀ ದಿನ ಅಲೆಯುವಾಗ ಗ್ಯಾರೇಜಿಗೆ ಬೀಗ. ಆಗೆಲ್ಲ ತನಗೊಂದು ಟೂವ್ಹೀಲರ್‌ ಇದ್ದಿದ್ದರೇ ಸಮಯ ಉಳಿತಾಯ ಆಗುತ್ತಿತ್ತೆಂಬ ಬಯಕೆ ಅವನದು. ಅದೊಂದೇ ಅವನ ನಿತ್ಯದ ಕನಸು ಕೂಡ.  

 ಇದೇ ಕನಸು ಕಾಣುತ್ತ ಕಾಡುಜೇನನ್ನು ಕುಪ್ಪಿಗೆ ತುಂಬಿಸುತ್ತಿದ್ದ ಬೋಜಪ್ಪನನ್ನು ಹೊರಗೆಳೆದು ತಂದದ್ದು ಒಂದು ಭಯಂಕರ ಸದ್ದು. ಸ್ಕೈಲಾಬ್‌ ಎಂಬ ಉಪಗ್ರಹ ಕಕ್ಷೆಯಿಂದ ಜಾರಿ ಭೂಮಿಗೆ ಬೀಳಲಿದೆ ಎಂಬ ಸುದ್ದಿಯನ್ನು ಮೊದಲಿನ ದಿನ ತಾನೇ ಶಿಬೂ ತೋಮಸ್ಸನ ಬಟ್ಟೆ ಅಂಗಡಿಯಲ್ಲಿ ಕುಳಿತಿದ್ದ ಈರಣ್ಣ ಮೇಸ್ಟ್ರೆ ಓದಿ ಹೇಳಿದ್ದು ಬೋಜಪ್ಪನ ಕಿವಿಗೂ ಬಿದ್ದಿತ್ತು. ಪಕ್ಕನೆ ಅದು ನೆನಪಾಗಿ ಸತ್ತೆನೋ ಕೆಟ್ಟೆನೋ ಎಂದು ಕೈಯಲ್ಲಿದ್ದ ಜೇನುಕುಪ್ಪಿಯನ್ನು ಹಾಗೇ ಎಸೆದು ಹೊರಗೋಡಿ ಬಂದಿದ್ದ. 

ಅತಿ ಭಯಂಕರವಾದ ವಸ್ತುವೊಂದನ್ನು ನಿರೀಕ್ಷಿಸುತ್ತಿದ್ದವನ ಕಣ್ಣಿಗೆ ಕಂಡದ್ದು ಅರೆಬರೆ ಪೈಂಟ್‌ ಕಳೆದುಕೊಂಡ ಸೈಲೆನ್ಸರ್‌ ನೇತಾಡುತ್ತಿದ್ದ ಲ್ಯಾಂಬ್ರೆಟಾ ಸ್ಕೂಟರ್‌. ಅದರ ಮೇಲೆ ಕೊಳಕಾದ ಹಲ್ಲುಗಳನ್ನು ಬಿಟ್ಟು ನಕ್ಕ ಒಬ್ಬ ನಡುವಯಸ್ಸಿನವ. ಅವನ ಹಿಂದೆ ಇನ್ನೊಬ್ಬ ಹರೆಯದ ಹುಡುಗ. 
“”ಇದು ಗೆರೇಜಾ?” ಮಲೆಯಾಳ ಮಿಶ್ರಿತ ಧಾಟಿಯಲ್ಲಿ ಕೇಳಿದ್ದನಾತ. ಕೇರಳದ ಬಾರ್ಡರ್‌ ಬೋಜಪ್ಪನ ಗ್ಯಾರೇಜಿನಿಂದ ಕಾಗೆ ಹಾರುವ ದೂರ ಲೆಕ್ಕದಲ್ಲಾದರೆ ಕೇವಲ ಮೂರೇ ಕಿಲೋಮೀಟರ್‌. ಬಸ್ಸಿನಲ್ಲಾದರೆ ಒಂಬತ್ತು. ಹಾಗಾಗಿ, ಅಲ್ಲಿ ಮಲೆಯಾಳಿಗರು ಬರುವುದೇನೂ ಹೊಸತಾಗಿರಲಿಲ್ಲ. ಆದರೆ, ಆತ ಕೇಳಿದ ಧಾಟಿಗೆ ಬೋಜಪ್ಪನಿಗೂ ಡೌಟು ಬಂದು ನಿನ್ನೆ ತಾನೇ ಆಣಿ ಸರಿ ಮಾಡಿ ಹಾಕಿದ್ದ ಬೋರ್ಡಿನ ಕಡೆ ನೋಡಿದ್ದ. “ಶ್ರೀ ಮಹಾರಾಜಾ ಗ್ಯಾರೇಜು’ ಎಂಬ ಬೋರ್ಡ್‌ ಕಣ್ಣಿಗೆ ರಾಚುವಂತೆ ಕೆಂಬಣ್ಣದಲ್ಲಿದ್ದುದು ಇವನಿಗೆ ಕಾಣುವುದಿಲ್ಲವಾ ಎಂದು ಸಿಟ್ಟು ಬಂದು ಕೈಯೆತ್ತಿ ಬೋರ್ಡಿನ ಕಡೆ ತೋರಿಸಿದ. 

Advertisement

“”ಹೆಹೆ … ಕನ್ನಡ ಬರುದಿಲ್ಲ… ಎಂತಾದದು” ಎಂದನಾತ. 
 ಇವನಿಗ್ಯಾರಿನ್ನು ಪಾಠ ಮಾಡುವುದು ಎಂದುಕೊಂಡವನು ಪಕ್ಕನೆ ತನ್ನ ಮೆಕ್ಯಾನಿಕ್‌ ಸ್ಟೈಲಿನಲ್ಲಿ “”ಎಂತಾಗಿದೆ ಗಾಡಿಗೆ?” ಎಂದ. 
“”ಆಗಾಗ ಬಂದ್‌ ಬೀಳ್ತದೆ… ಸ್ಟಾರ್ಟ್‌ ಆಗುದಿಲ್ಲ… ಸ್ವಲ್ಪ$ ಶೆರಿ ನೋಡಿ” 
ಒಳ ಹೋದ ಬೋಜಪ್ಪಇರುವೆ ಮುತ್ತುತ್ತಿದ್ದ ಜೇನಿನ ಕುಪ್ಪಿಯನ್ನು ತೆಗೆದಿರಿಸಿ, ಕೆಳಗೆ ಚೆಲ್ಲಿದ್ದ ಕೊಂಚ ಜೇನನ್ನು ವೇಸ್ಟ್‌ ಬಟ್ಟೆಯಲ್ಲಿ ಒರೆಸಿ ಅದೇ ಬಟ್ಟೆಯ ಜೊತೆಗೆ ಸ್ಪಾನರ್‌ ಹಿಡಿದು ಹೊರಬಂದ. 

ಕೆಲವು ಸ್ಕ್ರೋಗಳನ್ನು ಸಡಿಲಿಸಿ. ಇನ್ನು ಕೆಲವನ್ನು ಟೈಟ್‌ ಮಾಡಿ, “”ಈಗ ಸ್ಟಾರ್ಟ್‌ ಮಾಡಿ” ಎಂದ.
“”ಗುರ್ರ…” ಎಂಬ ಸ್ವರ ಮಾತ್ರ ಗಾಡಿಯಲ್ಲಿ. ಪ್ಲಗ್‌ ಕ್ಲೀನ್‌ ಮಾಡಿ ನೋಡಿದ. ಉಹೂಂ… ಗಾಡಿ “ಟಿಕ್‌ ಟಿಕ್‌’ ಎನ್ನುವ ಸ್ವರಕ್ಕೆ ಇಳಿಸಿಕೊಂಡಿತು. “”ಕಾರ್ಬೋರೇಟರ್‌ ಕ್ಲೀನ್‌ ಮಾಡ್ಬೇಕು” ಎಂದ. ತಲೆಯಲುಗಿತು ಎದುರಿನವನದ್ದು. ಮತ್ತೆ ಅಷ್ಟು ಶಬ್ದವೂ ಇಲ್ಲದ ಗಾಡಿ ಮೌನ ವೃತ ಹಿಡಿದುಬಿಟ್ಟಿತು. “”ಇದಿಲ್ಲಿ ಆಗುವುದಿಲ್ಲ. ದೊಡ್ಡ ಗ್ಯಾರೇಜಿಗೆ ಹೋಗ್ಬೇಕು.  ಚಿಕ್ಕ ಪೇಟೆಲಿ ರಾಮಣ್ಣನ ಗ್ಯಾರೇಜು ಅಂತಿದೆ. ಅಲ್ಲಿ ಶರವಣ ಅಂತ ಹುಡುಗ ಇದ್ದಾನೆ. ಅವನನ್ನು ಕರ್ಕೊಂಡು ಬನ್ನಿ. ಅವ್ನು ಇದರಪ್ಪನಂತಹ ಗಾಡಿಯನ್ನು ರಿಪೇರಿ ಮಾಡ್ತಾನೆ. ಶಾಲೆಗೆ ಹೋಗಿ ರಿಪೇರಿ ಕಲಿತು ಬಂದವನು” ಉತ್ತರಕ್ಕಾಗಿ ಅವರ ಮುಖ ನೋಡಿದ.
ಅವರಿಬ್ಬರು ಅಂತಹ ಆಸಕ್ತಿಯೇನೂ ತೋರಿಸದೇ ಬೋಜಪ್ಪನಿಂದ ಸ್ವಲ್ಪ$ದೂರಕ್ಕೆ ಹೋಗಿ ನಿಂತು ಪಿಸುದನಿಯಲ್ಲಿ ಏನನ್ನೋ ಮಾತಾಡತೊಡಗಿದರು. ಈಗ ಬೋಜಪ್ಪನ ಹತ್ತಿರ ಬಂದು ಸ್ವರವೆತ್ತಿದ್ದ ಹರೆಯದ ಯುವಕ, “”ಅಣ್ಣಾ … ಗಾಡಿ ನೀವೇ ಇಟ್ಕೊಂಡು ದುಡ್ಡು ಕೊಡ್ತೀರಾ… ಇದು ನಮ್ಮಣ್ಣನ ಗಾಡಿ. ಸದ್ಯಕ್ಕೆ ನಿಮ್ಮಲ್ಲೇ ಇರಲಿ. ಪೂರ್ತಿ ಹಣಾ ಕೊಡುದೂ ಬೇಡ. ಈಗೊಂದೈನೂರು ಕೊಟ್ರೆ ಸಾಕು” ಎಂದ. 

ಮತ್ತೆ ಗಾಡಿಯ ಕಡೆಗೆ ನೋಡಿದ ಬೋಜಪ್ಪ. ಈ ಆಫ‌ರ್‌ ಯಾಕೋ ನಷ್ಟವಾಗುವಂಥದ್ದಲ್ಲ ಎನ್ನಿಸಿತು. ಆದರೆ, ಅಷ್ಟು ಹಣ ಒಮ್ಮೆಲೇ ಕೊಡುವುದು ಸಾಧ್ಯವಿಲ್ಲ. ವ್ಯಾಪಾರಿ ಬುದ್ಧಿª ಎಚ್ಚೆತ್ತಿತು. “”ಎಂತಾ ಐನೂರು ರೂಪಾಯಿಯ ಈ ಹಾಳಾದ ಸ್ಕೂಟರಿಗೆ. ಇದಿನ್ನು ರಿಪೇರಿಯಾದರೂ ಹೆಚ್ಚು ದಿನ ಬಾಳಿಕೆ ಬಾರದು. ಇಂಜಿನ್‌ ಕೂಡ ಲಟಾರಿಯಾಗಿದೆ. ನಂಗೆ ಬೇಡ. ಇಲ್ಲಿಂದ ತೆಗೊಂಡ್ಹೊàಗಿ” ಎಂದ. ಮತ್ತೆ ಗುಸುಗುಸು ಪಿಸುಪಿಸು. ರೇಟು ಇನ್ನೂರೈವತ್ತಕ್ಕೆ ಬಂತು. ಬೋಜಪ್ಪನ ತಲೆ ಆಗದು ಎಂದು ಪೆಂಡ್ಯುಲಮ್ಮಿನಂತೆ ಅಲುಗಾಡಿತು. ಕೊನೆಗೆ “ನೂರು’ ಎಂದರು. ಆಗಲೂ ಬೋಜಪ್ಪನ ನಿಲುವು ಬದಲಲಿಲ್ಲ. 
“”ಅಯ್ಯೋ ಅಣ್ಣಾ… ಬೇಡ ಬಿಡಿ. ಗಾಡೀಲಿ ಬಂದಿದ್ದೆವು ನೋಡಿ. ಬಸ್ಸಿಗೆ ಕೊಡಲು ಕಾಸಿಲ್ಲ. ಒಂದೈವತ್ತಾದ್ರೂ ಕೊಡಿ. ಗಾಡಿ ನಿಮಗೇ.  ರೆಕಾರ್ಡ್ಸ್‌ ಎಲ್ಲಾ ಗಾಡಿಯಲ್ಲೇ ಉಂಟು. ನಮಗೆ ಮತ್ತೆ ನಾಡಿದ್ದು ಬರಲಿಕ್ಕುಂಟು. ಆಗ ಅಣ್ಣನನ್ನು ಕರೆದುಕೊಂಡು ಬಂದು ಸೈನ್‌ ಹಾಕಿಸ್ತೇವೆ. ಈಗ ಕೊಟ್ಟ ದುಡ್ಡೇ. ಮತ್ತೆ ಮಾತಿಲ್ಲ.” 

ಗಲ್ಲಾಪೆಟ್ಟಿಗೆಯಲ್ಲಿ ಸರಿಯಾಗಿ ಲೆಕ್ಕ ಹಾಕಿದರೆ ಇದ್ದುದು ಮೂವತ್ತೇಳು ರೂಪಾಯಿ. ಅದರಲ್ಲಿ ಏಳು ರೂಪಾಯಿ ಉಳಿಸಿಕೊಂಡು ಮೂವತ್ತನ್ನು ಅವರ ಕೈಗೆ ಹಾಕಿದ. ಮಾತಾಡದೇ ಹೋದರು. ಅವರು ಅತ್ತ ಹೋದ ಕೂಡಲೇ ಮೊದಲು ಮಾಡಿದ ಕೆಲಸವೆಂದರೆ ಗಾಡಿಯನ್ನು ಎಳೆದು ಗ್ಯಾರೇಜಿನ ಒಳಗೆ ನಿಲ್ಲಿಸಿ ಬಾಗಿಲೆಳೆದುಕೊಂಡು, ಬೀಗ ಹಾಕಿ ಎರಡೆರಡು ಸಲ ಬೀಗ ಎಳೆದು ಗಟ್ಟಿಯಾಗಿ ಬಿದ್ದಿದೆ ಎಂದು ಚೆಕ್‌ ಮಾಡಿ ಬಸ್ಸೇರಿದ್ದ ಬೋಜಪ್ಪ. ಶರವಣನಲ್ಲಿ ಗಾಡಿಯ ತೊಂದರೆಯನ್ನೆಲ್ಲ ಹೇಳಿ ಅವನನ್ನೆಳೆದು ತಂದು ರಿಪೇರಿ ಮಾಡಿಸಿದ್ದ. “”ಗಾಡಿಗೆ ಮುನ್ನೂರು ರೂಪಾಯಿ ಕೊಟ್ಟಿದ್ದೇನೆ. ಇನ್ನೂ ಒಂದು ಸಾವಿರ ಕೊಡಬೇಕಿದೆ” ಎಂದು ಸುಳ್ಳು ಬೇರೆ ಹೇಳಿದ್ದ. ಶರವಣ ಗಾಡಿಗೆ ಸುತ್ತು ಬಂದು, “”ಇನ್ನೊಂದು ಏಳೂ°ರು ಕೊಡಿ” ಸಾಕು. 

ಅದರಿಂದ ಹೆಚ್ಚು ಬೇಡ ಎಂದು ಇನ್ನೂರ ಎಪ್ಪತ್ತೆಂಟು ರೂಪಾಯಿ ಕಿಸೆಗಿಳಿಸಿಕೊಂಡು ಹೋಗಿದ್ದ. ಮೀಸೆಯಡಿಯಲ್ಲೇ ನಕ್ಕಿದ್ದ ಬೋಜಪ್ಪ ತಾನದಕ್ಕೆ ಕೊಟ್ಟ ಹಣವನ್ನು ನೆನೆದು.  

ಒಂದೇ ಕಿಕ್ಕಿಗೆ ಗಾಡಿ ಸ್ಟಾರ್ಟ್‌ ಆಗಿತ್ತು, ಹೆಲಿಕಾಪ್ಟರ್‌ ಹತ್ತಿರಕ್ಕೆ ಬಂದ ಸದ್ದಿನ ಜೊತೆಗೆ. ಸೈಲೆನ್ಸರ್‌ ಇಲ್ಲದ ಸ್ಕೂಟರಿನ ಸದ್ದಿನಿಂದಾಗಿ  ಬೋಜಪ್ಪ ಬರುತ್ತಿದ್ದಾನೆಂಬುದು ಇಡೀ ಊರಿಗೇ ತಿಳಿಯುವಂತಾಗಿತ್ತು. ಆದರೆ, ಅವನಿಗದೇನೂ ದೊಡ್ಡ ಸಂಗತಿ ಎನ್ನಿಸಿರಲಿಲ್ಲ. ಇದು ಅವನ ಹಳ್ಳಿಯ ವ್ಯಾಪಾರಕ್ಕೆ ಬಹಳ ಪ್ರಶಸ್ತವಾಗಿದ್ದ ಗಾಡಿ. ಆಗೀಗ ಕೈ ಕೊಡುತ್ತಿದ್ದರೂ ಅಶ್ವಹೃದಯ ಬಲ್ಲ ನಳನಂತೆ ಈ ಸ್ಕೂಟರನ್ನು ಹಾರುವಂತೆ ಮಾಡಿ ಏರಿ ಸಾಗುವಷ್ಟು ಪಳಗಿದ ಬೋಜಪ್ಪ. ಅದಕ್ಕೊಂದು ಹೊಸಾ ಪೈಂಟ್‌ ಹೊಡೆಸಿದ್ದ. ಇದೀಗ ಹೊಸಾ ಗಾಡಿಯಂತೆ ಕಾಣುತ್ತಿದ್ದ ಸ್ಕೂಟರ್‌ ಬೋಜಪ್ಪನ ವ್ಯವಹಾರ ಚತುರತೆಯ ಕೀರ್ತಿ ಪತಾಕೆಯಂತೆ ಕಂಡಿತ್ತು ಬಹುಮಂದಿಗೆ ಮತ್ತು ಅವನಿಗೆ ಹೊಸಾ ಸ್ಥಾನಮಾನವನ್ನು ಒದಗಿಸಿಕೊಟ್ಟಿತ್ತು. ಗ್ಯಾರೇಜು ಎಂಬ ಬೋರ್ಡ್‌ ತೆಗೆದು ಒಳಗಿಟ್ಟು ಬೋರ್ಡಿಲ್ಲದೇ ಫ‌ುಲ್‌ ಟೈಮ್‌ ಕಾಫಿ, ಏಲಕ್ಕಿ, ಜೇನು ಮಾರಾಟಗಾರನಾದ. ತನ್ನ ಕೋಳಿಮನೆಯ ಎದುರಿಗೆ ನಿಂತಿರುವ ಸ್ಕೂಟರ್‌ ಅವನಿಗೆ ಮಹಾರಾಜರ ಕುದುರೆಯಂತೆಯೇ ಕಾಣುತ್ತಿತ್ತು. ಮಕ್ಕಳಿರುವ ಮನೆಯವರು ತಮ್ಮ ಮಕ್ಕಳನ್ನು ಇಂದ್ರ-ಚಂದ್ರ ಎಂದೆಲ್ಲ ಹೊಗಳುವಂತೆ ಬೋಜಪ್ಪನ ಬಳಿ ಯಾರೇ ಮಾತಿಗೆ ಬಂದರೂ ಮೊದಲವನ ಸ್ಕೂಟರಿನ ಪ್ರವರ ಕೇಳಲೇಬೇಕಿತ್ತು. ಮಕ್ಕಳಿಗಂತೂ  ಸದ್ದು ಮಾಡುವ ಇವನ ಸ್ಕೂಟರೆಂದರೆ ವಿಚಿತ್ರ ಜೀವಿ. ಸ್ಕೂಟರ್‌ ಮತ್ತು ಬೋಜಪ್ಪಆತ್ಮ ಮತ್ತು ದೇಹದಂಥ ಜೋಡಿಯಾಗಿತ್ತೀಗ. 

ತಿಂಗಳುರುಳಿದ್ದವು. ವರ್ಷವೂ ಕಳೆದಿತ್ತು. ಮೊದ ಮೊದಲು ಪೇಟೆಯಲ್ಲಿಡೀ ಸ್ಕೂಟರಿನದ್ದೇ ಚರ್ಚೆಯಾಗುತ್ತಿದ್ದುದು ಈಗ ತಣ್ಣಗಾಗಿ, ಮೇಲಿನ ಮನೆ ತಾಯಮ್ಮ, ತಟ್ಟಿ ಹೊಟೇಲಿನ ಕ್ಲೀನರ್‌ ರಂಗಪ್ಪನೊಂದಿಗೆ ಓಡಿ ಹೋದ ಸುದ್ದಿ ಚರ್ಚಿಸಲ್ಪಡುತ್ತಿದ್ದ ಕಾಲವದು. ಬೋಜಪ್ಪತನ್ನ ಸ್ಕೂಟರನ್ನು ಎಷ್ಟು ಅಪ್‌ಗೆಡ್‌ ಮಾಡಿದರೂ ಜನ ಆ ವಿಷಯವನ್ನು ಮಾತಾಡುವುದು ಬಿಟ್ಟು ಬೇರೇನೆಲ್ಲ ವ್ಯಾವಹಾರಿಕ ಮಾತಾಡುವುದು ಬೋಜಪ್ಪನಿಗೆ ಕಷ್ಟವಾಗುತ್ತಿತ್ತು. ಅದಕ್ಕೆಂದೇ ಸ್ಕೂಟರನ್ನು ದಿನಕ್ಕೊಂದು ಮಾದರಿಯಲ್ಲಿ ಅಲಂಕರಿಸುತ್ತಿದ್ದ. ಅದರ “ಕೀಕ್‌ ಕೀಕ್‌’ ಹಾರನ್ನಿನ ಬದಲಾಗಿ ಮೀನಿನ ಮಮ್ಮದೆಯ ಸೈಕಲ್ಲಿನ ಮೇಲಿರುತ್ತಿದ್ದ ಬಲೂನಿನಂತಹ ಹಾರನ್ನನ್ನು ಅಳವಡಿಸಿದ್ದ. ದಾರಿಹೋಕ ಮಕ್ಕಳು ಆಗೀಗ ಅದರ ಮುಟ್ಟಿ, ಆ ಮಕ್ಕಳನ್ನು ಬೋಜಪ್ಪಬಯೊªà, ಹೊಡೆದೋ ಮರುದಿನ ಅವರ ಮನೆಯವರು ಬಂದು ಬೋಜಪ್ಪನಲ್ಲಿ ಜಗಳ ಕಾದು ಸ್ಕೂಟರಿನ ಸುದ್ದಿಯನ್ನು ಜೀವಂತ ಇಡುವಲ್ಲಿ ಸಹಕರಿಸುತ್ತಿದ್ದರು.  ಇದು ಕೂಡಾ ಅವನಿಗೆ ಸಮಾಧಾನವನ್ನೇ ನೀಡುತ್ತಿತ್ತು. ಸ್ಕೂಟರೂ ಸೆಕೆಂಡ್‌ಹ್ಯಾಂಡ್‌ ಸೈಲೆನ್ಸರ್‌ ಅಳವಡಿಸಿಕೊಂಡು ತನ್ನ ಸ್ವರವನ್ನು  ಸ್ವಲ್ಪವಷ್ಟೇ ಕಡಿಮೆ ಮಾಡಿಕೊಂಡಿತ್ತು. 

 ಮಳೆಗಾಲದ ಚಳಿ ಮುಗಿದು ಚಳಿಗಾಲದ ಚಳಿ ಹೆಗಲೇರಿತ್ತು. ಎಂಟು ಗಂಟೆಯಾದರೂ ಹಾಸಿಗೆ ಬಿಟ್ಟೇಳುವ ಮನಸ್ಸಾಗದ ದಿನಗಳವು. ಮಂಜಿನಿಂದ ಮುಚ್ಚಿಯೇ ಹೋಗಿದ್ದ ಇಂತಹ ಒಂದು ದಿನ ಬೋಜಪ್ಪನ ಕೋಳಿಮನೆಯ ಬಾಗಿಲನ್ನು ಯಾರೋ ಟಕಟಕಿಸಿದರು. ಚಳಿಯಿಂದಾಗಿ ಹೊದೆದ ಕಂಬಳಿಯನ್ನೇ ಸುತ್ತಿಕೊಂಡು ಬಾಗಿಲು ತೆಗೆದವನಿಗೆ ಕಂಡದ್ದು ಅದೇ ಕೊಳಕು ಹಲ್ಲಿನವ, ಅಂದು ಬಂದಿದ್ದ  ಹರೆಯದ ಹುಡುಗ ಮತ್ತು ಅವನ ಹಿಂದೆ ಮತ್ತೆರಡು ಜನ. “ಅಣ್ಣನನ್ನು ಕರೆದು ತರುತ್ತೇನೆ’ ಎಂದು ಹೋದವ ವರ್ಷವಾದ ನಂತರ ಯಾರನ್ನೋ  ಕರೆದುಕೊಂಡು ಬಂದಿದ್ದಾನಲ್ಲಾ, ಏನಾದರೂ ಸರಿ ಇನ್ನು ಈ ಸ್ಕೂಟರಿಗೆಂದು ಪುನಃ ಕಾಸು ಬಿಚ್ಚಬಾರದು ಎಂದುಕೊಂಡು ಬಾಗಿಲು ಅಗಲವಾಗಿ ತೆರೆಯಹೊರಟ. ಅವರಲ್ಲೊಬ್ಬ “”ಇದೇ ಶಾರ್‌, ನನ್ನ ಗಾಡಿ ನೋಡಿ ಇಲ್ಲಿದೆ. ನಂಬರ್‌ ನೋಡಿ. ಇದುವೇ, ಬಣ್ಣ ಮಾತ್ರ  ಬದಲಾಯಿಸಿದ್ದಾನೆ ನೋಡಿ ಕಳ್ಳ”.

ಅಲ್ಲಿಯವರೆಗೆ ಹಿಂದಿದ್ದವರು ಎರಡು ಜನ ಎಂದು ಮಾತ್ರ ಕಂಡಿದ್ದ ಬೋಜಪ್ಪನಿಗೆ ಆ ಒಬ್ಬನ ಅಂಗಿಯ ಬಣ್ಣ ಖಾಕಿಯಿರುವುದು ಗೋಚರವಾಗಿ ಕೈಕಾಲುಗಳು ನಡುಗತೊಡಗಿದವು. “ನಿಮ್ಮ ಮೇಲೂ ಕೇಸ್‌ ಹಾಕಬೇಕಾಗುತ್ತದೆ’ ಎಂದ ಪೊಲೀಸಿನವನು. ಅವನನ್ನು ಶಾಂತಗೊಳಿಸಲು ಮುನ್ನಾದಿನವಷ್ಟೇ ಜೇನು ಮಾರಿದ ಹಣ ಮುನ್ನೂರು ರೂಪಾಯಿಗಳನ್ನು ಅವನ ಕೈಗೆ ಹಾಕಿದ. ಸ್ಕೂಟರು ತನ್ನದೆಂದು ಹೇಳಿದ ವ್ಯಕ್ತಿ ಒಂದಿಷ್ಟು ಇಂಗ್ಲೀಷಿನಲ್ಲಿ ಬರೆದ ಕಾಗದಗಳನ್ನು ತೋರಿಸಿ, “ನೋಡು ಈ ಸ್ಕೂಟರ್‌ ನನ್ನದು’ ಎಂದ.   

 ಅಲ್ಲಿಯವರೆಗೆ ಸ್ಕೂಟರು ಹೀಗೆ ತನ್ನನ್ನು ಅಗಲಬಹುದು ಎನ್ನುವುದನ್ನು ಕನಸಿನಲ್ಲೂ ಕಲ್ಪಿಸದ ಬೋಜಪ್ಪನ ಕಣ್ಣ ಹನಿಗಳು ಅವನ ಅಪ್ಪಣೆಯನ್ನು ಪಡೆಯದೇ ಉರುಳುತ್ತಿದ್ದವು. ತನ್ನೆದುರೇ ಆತ ಸ್ಕೂಟರಿನ ಮೇಲೆ ಕುಳಿತು ಹೋಗುತ್ತಿದ್ದರೆ ಬೋಜಪ್ಪತನ್ನಾತ್ಮವೇ ಎದ್ದು ನಡೆದಂತೆ  ನಿಶ್ಯಕ್ತಿಯಿಂದ ಮನೆಯ ಬಾಗಿಲಿಗೊರಗಿಯೇ ನೋಡುತ್ತಿದ್ದ. ಎಷ್ಟೋ ಹೊತ್ತಿನ ಬಳಿಕ ಎದ್ದವನ ಕಾಲುಗಳು ಹೊರ ನಡೆದವು.   ಮತ್ತೂಮ್ಮೆ ಬೋಜಪ್ಪ ಮತ್ತು ಅವನ ಸ್ಕೂಟರಿನ ಸುದ್ದಿ ಈಗ ಊರ ತುಂಬೆಲ್ಲ. 

ಅನಿತಾ ನರೇಶ್‌ ಮಂಚಿ

Advertisement

Udayavani is now on Telegram. Click here to join our channel and stay updated with the latest news.

Next