Advertisement

ಉಡುಪಿ, ದ.ಕ ಪಡಿತರಾದಾರರಿಗೆ ಸ್ಥಳೀಯ ಕುಚ್ಚಲಕ್ಕಿಯನ್ನು ವಿತರಿಸಲು ಸಿಎಂ ಗೆ ಸಚಿವರ ಮನವಿ

07:17 PM Feb 18, 2021 | Team Udayavani |

ಬೆಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರದ ಮೂಲಕ ವಿತರಿಸುತ್ತಿರುವ ಕುಚ್ಚಲಕ್ಕಿ ಅತ್ಯಂತ ಕಳಪೆ ಗುಣಮಟ್ಟದ್ದಾಗಿರುವುದರಿಂದ ಎರಡು ಜಿಲ್ಲೆಗಳಿಗೆ ಬೇಕಾಗುವ ಕುಚ್ಚಲಕ್ಕಿಯನ್ನು ಸ್ಥಳೀಯ ರೈತರಿಂದ ಸಂಗ್ರಹಿಸಿ ಪಡಿತರದ ಮೂಲಕ ಜನಸಾಮಾನ್ಯರಿಗೆ ವಿತರಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಚಿವ ಎಸ್ ಅಂಗಾರ ರವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಮನವಿ ಮಾಡಿದರು.

Advertisement

ಈಗಾಗಲೇ ಪಡಿತರದಲ್ಲಿ ವಿತರಿಸಲಾಗುತ್ತಿರುವ ಅಕ್ಕಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಪಡಿತರಾದಾರರು ಇದನ್ನು ಖರೀದಿಸುತ್ತಿಲ್ಲ, ಕೆಲವು ಕಡೆಗಳಲ್ಲಿ ಖರೀದಿಸಿದರೂ ಕಡಿಮೆ ಬೆಲೆಗೆ ಮಾರಾಟ ಮಾಡಿ ಹೆಚ್ಚು ದರದ ಕೆಂಪು ಕುಚ್ಚಲಕ್ಕಿಯನ್ನು ಖರೀದಿಸುತ್ತಿದ್ದಾರೆ, ಇನ್ನು ಪಡಿತರ ಅಕ್ಕಿಯನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸುಗಳು ದಾಖಲಾಗುತ್ತಿವೆ, ಹಾಗಾಗಿ ಇಲ್ಲಿನ ಜನರಿಗೆ ಸ್ಥಳೀಯ ರೈತರಿಂದ ಕುಚ್ಚಲಕ್ಕಿಯನ್ನು ಸಂಗ್ರಹಿಸಿ ಪಡಿತರದ ಮೂಲಕ ವಿತರಿಸಲು ಸಚಿವರು ಮನವಿಯನ್ನು ಮಾಡಿದ್ದಾರೆ.

ಇದನ್ನೂ ಓದಿ:ಕೆಲವೇ ದಿನಗಳಲ್ಲಿ ವಿಸ್ಟ್ರಾನ್‌ ಕಂಪನಿಯ ಉತ್ಪಾದನೆ ಪುನರಾರಂಭ: ಜಗದೀಶ್‌ ಶೆಟ್ಟರ್‌

ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 58 ಸಾವಿರ ಕ್ವಿಂಟಲ್ ಪಡಿತರ ಅಕ್ಕಿಯ ಅಗತ್ಯವಿದ್ದು, ಉಡುಪಿ ಜಿಲ್ಲೆಗೆ 40 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ಬೇಕಾಗಿದ್ದು, ಒಟ್ಟು ಸರಾಸರಿ ತಿಂಗಳಿಗೆ ಒಂದು ಲಕ್ಷ ಕ್ವಿಂಟಲ್ ಆಗತ್ಯವಿದ್ದು ಇದಕ್ಕೆ ಬೇಕಾಗುವಷ್ಟು ಭತ್ತದ ಬೆಳೆ ಅವಳಿ ಜಿಲ್ಲೆಯಲ್ಲಿ ಲಭ್ಯವಿಲ್ಲದೇ ಇರುವುದರಿಂದ ಮೈಸೂರು, ಮಂಡ್ಯ ಮುಂತಾದೆಡೆಯಿಂದ ಜಯ ಮತ್ತು ಇನ್ನಿತರ ಭತ್ತದ ತಳಿಯ ಫಸಲನ್ನು ಸಂಗ್ರಹಿಸಿ ಕುಚಲಕ್ಕಿಯನ್ನು ತಯಾರಿಸುವ ಕುರಿತು ಮುಖ್ಯ ಮಂತ್ರಿಗಳಿಗೆ ಮನವಿ ಸಮರ್ಪಿಸಲಾಯಿತು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ತಕ್ಷಣ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ನಂತರ ವಿಧಾನಸೌಧದಲ್ಲಿ ಸಚಿವ ಕೋಟ ಅವರ ಕಛೇರಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಶ್ರೀ ಉಮೇಶ್ ವಿ, ಕತ್ತಿ, ಮಾನ್ಯ ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಎಸ್. ಅಂಗಾರ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷರಾದ ಶ್ರೀ ಕಿರಣ್ ಕೊಡ್ಗಿ, ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್, ಶ್ರೀ ಸಂಜೀವ ಮಠಂದೂರು ಮುಂತಾದ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಸಮಕ್ಷಮ ನಡೆದ ಸಭೆಯಲ್ಲಿ ಮುಂದಿನ ಒಂದು ವಾರಗಳಲ್ಲಿ ಕರಾವಳಿ ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕರು ಮತ್ತು ಆಹಾರ ನಿಗಮದ ಅಧಿಕಾರಿಗಳು ಮತ್ತು ಅವಳ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಮಕ್ಷಮ ಸಭೆ ನಡೆಸಿ ಕುಚಲಕ್ಕಿಯ ತಯಾರಿಕೆಗಾಗಿ ಭತ್ತದ ಖರೀದಿ, ಸಂಸ್ಕರಣೆ, ವಿತರಣೆ ಕುರಿತು ಸೂಕ್ತ ಮಾರ್ಗೋಪಾಯ ಕಂಡುಹಿಡಿಯಲು ಅಗತ್ಯ ಕ್ರಮಕೈಗೊಳ್ಳುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸಚಿವ ಶ್ರೀ ಉಮೇಶ್ ವಿ, ಕತ್ತಿಯವರು ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next