Advertisement
ಹೊಸ ಹೊಸ ಸಂಶೋಧನೆಗಳ ಪರಿಣಾಮವಾಗಿ ಕುರಿಸಾಕಾಣಿಕೆಯಲ್ಲಿಯೂ ಸಾಕಷ್ಟು ಪ್ರಗತಿಪರ ಬದಲಾವಣೆಗಳಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮಹಾರಾಷ್ಟ್ರದ ಫಲ್ಟಾನ್‌ನಲ್ಲಿರುವ ನಿಂಬಕರ್ ಸಂಶೋಧನಾ ಕೇಂದ್ರದವರು ಸಾಕಷ್ಟು ವರ್ಷಗಳ ಸಂಶೋಧನೆಯ ಫಲವಾಗಿ ಬೋಯರ್ ತಳಿಯ ಮೇಕೆಗಳ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಅವು ವರ್ಷಕ್ಕೆ ಎರುಡು ಬಾರಿಯಂತೆ, ಒಮ್ಮೆಗೆ ಎರಡು ಮರಿಗಳಿಗೆ ಜನ್ಮನೀಡುತ್ತಿವೆ. ಒಮ್ಮೊಮ್ಮೆ ಮೂರು ಮರಿಹಾಕಿದ್ದೂ ಉಂಟು. ಸೌತ್ ಆಫ್ರಿಕನ್ ತಳಿಯ ಈ ಬೋಯರ್ ಮೇಕೆಗಳು ಅಮೇರಿಕಾ, ಆಸ್ಟ್ರೇಲಿಯಾ, ಕೆನಡಾಗಳಲ್ಲಿ ಮಾಂಸಕ್ಕಾಗಿ ಪ್ರಖ್ಯಾತಿ ಹೊಂದಿವೆ. ತಮ್ಮ ಜಮೀನಿನಲ್ಲಿ ಐದು ಎಕರೆಗಳಷ್ಟು ಜಾಗವನ್ನು ಮೇಕೆ ಸಾಕಾಣಿಕೆಗಾಗಿಯೇ ಮೀಸಲಿರಿಸಿದ್ದು, ಸುಮಾರು 4.5 ಲಕ್ಷ ವೆಚ್ಚದಲ್ಲಿ ವಿಶಾಲ ಜಾಗದಲ್ಲಿ (30-50) ಆಧುನಿಕ ಶೆಡ್ ನಿರ್ಮಿಸಿದ್ದಾರೆ. ಮೇಕೆಗಳಿಗೆ ನೀರು, ಗಾಳಿ ಹಾಗೂ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ನೆಲಮಟ್ಟದಿಂದ ಸುಮಾರು ಐದು ಅಡಿಗಳಷ್ಟು ಎತ್ತರದಲ್ಲಿರುವ ಈ ಶೆಡ್‌ನಲ್ಲಿ ಮೇಕೆ¿ ಸ್ವತ್ಛತೆಗೆ ಆಧ್ಯತೆ ನೀಡಲಾಗಿದೆ. ಉಳಿದ ಜಾಗದಲ್ಲಿ ಮೇಕೆಗಳಿಗೆ ಅಗತ್ಯವಾದ ಮೇವನ್ನು ಬೆಳೆಯುತ್ತಿದ್ದು, ಮೇಕೆಗಳ ಪೋಷಣೆಗಾಗಿ ಇಬ್ಬರು ಕೆಲಸಗಾರರನ್ನು ನೇಮಿಸಿದ್ದಾರೆ.
Related Articles
ನೆರಳು ಹಾಗೂ ಗಾಳಿಮಳೆಯಿಂದ ರಕ್ಷಣೆಗಾಗಿ ನಿರ್ಮಿಸಿಕೊಂಡ ಶೆಡ್ಡಿನೊಳಗೆ ಈ ತಳಿಯ ಮೇಕೆಗಳಿಗೆ ಕಾಲಕಾಲಕ್ಕೆ ಸರಿಯಾಗಿ ಅಗಸೆ, ರೇಷ್ಮೆ ಸೊಪ್ಪು, ಒಣಮೇವು, ಕಡಲೆಬಳ್ಳಿ, ಮೆಕ್ಕೆಜೋಳದ ತೆನೆ – ಹೀಗೆ ಸಾಕಷ್ಟು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.
Advertisement
ಸಂಪೂರ್ಣ ಬಿಳಿ ಬಣ್ಣದ ದೇಹ ಮತ್ತು ಕತ್ತಿನ ಸುತ್ತಲೂ ಕಡು ಕಂದು (ಮೆಹಂದಿ) ಬಣ್ಣವನ್ನು ಹೊಂದಿರುವ ಬೋಯರ್ ತಳಿಯ ಮೇಕೆಯ ಸರಾಸರಿ ಜೀವಿತಾವಧಿ ಹದಿನಾಲ್ಕು ವರ್ಷ. ಮೂರು ವರ್ಷದಲ್ಲೇ ಗಂಡು ಮೇಕೆಯು ಸರಾಸರಿ 130ಕಿ.ಲೋ ಗ್ರಾಂಗಳಷ್ಟು ತೂಕವಿರುತ್ತದೆ. ಹೆಣ್ಣು ಮೇಕೆಯು ಸರಾಸರಿ 100ಕೆ.ಜಿಯಷ್ಟಿರುತ್ತದೆ. ತನ್ನ ಜೀವಿತಾವಧಿಯಲ್ಲಿ ಆರರಿಂದ ಎಂಟು ವರ್ಷಗಳವರೆಗೂ ಸಂತಾನೋತ್ಪತ್ತಿ ಸಾಮರ್ಥ್ಯ ಹೊಂದಿರುವ ಈ ಮೇಕೆಯು ಹುಟ್ಟಿದ ಎಂಟರಿಂದ ಒಂಭತ್ತು ತಿಂಗಳಲ್ಲೇ ಸಂತಾನೋತ್ಪತ್ತಿಗೆ ಸಿದ್ಧಗೊಳ್ಳುವುದರಿಂದ ಲಾಭ ಹೆಚ್ಚು. ಗರ್ಭಧರಿಸಿದ ಐದೇ ತಿಂಗಳಲ್ಲಿ ಎರಡು ಮರಿಗಳನ್ನು ಹಾಕುತ್ತದೆ. ಒಮ್ಮೊಮ್ಮೆ ಮೂರು ಮರಿಗಳನ್ನೂ ಹಾಕುವುದುಂಟು. ಹುಟ್ಟಿದ ಮರಿಗಳು ಸುಮಾರು ನಾಲ್ಕು ಕೆ.ಜಿ ತೂಕವಿರುತ್ತವೆ. ಈ ಬೋಯರ್ ತಳಿಯ ಹಾಲೂ ಶ್ರೇಷ್ಠವಾಗಿದ್ದು ನಾಟಿ ಹಾಲಿಗಿಂತಲೂ ದುಪ್ಪಟ್ಟು ಕೊಬ್ಬಿನಂಶವನ್ನು ಹೊಂದಿರುತ್ತದೆಯೆಂದು ಸಂಶೋಧನೆಗಳು ದೃಢಪಡಿಸಿವೆ.ತಳಚರಿಯೊಂದಿಗೆ ಕ್ರಾಸಿಂಗ್
ಕೇರಳದಿಂದ ಕೊಂಡು ತಂದ ತಳಚರಿ ತಳಿಯೊಂದಿಗೆ ಬೋಯರ್ ಮೇಕೆಗಳನ್ನು ಕ್ರಾಸ್ ಮಾಡಿಸಿ ಸಾಕಷ್ಟು ಉತ್ತಮ ಗುಣಮಟ್ಟದ ಬೋಯರ್ ಮರಿಗಳನ್ನು ಅಭಿವೃದ್ಧಿಪಡಿಸುತ್ತಿರುವ ಭಾನುಪ್ರಕಾಶ್ ಮತ್ತು ನಜೀರ್‌ರವರು ಸುಮಾರು ಆರು ತಿಂಗಳವರೆಗೂ ಮರಿಗಳನ್ನು ಪೋಷಿಸಿ, ತದನಂತರ ಅದು ಗರ್ಭಕಟ್ಟುವ ಸಾಮರ್ಥ್ಯ ಹೊಂದುವ ಸಮಯಕ್ಕೆ ಬೇಡಿಕೆಗನುಗುಣವಾಗಿ ಮಾರಾಟ ಮಾಡುತ್ತಾರೆ. ಕಡಿಮೆ ಖರ್ಚು, ಅಧಿಕ ಲಾಭ
ಆರು ತಿಂಗಳ ಬೋಯರ್ ಮರಿಯೊಂದು 20ರಿಂದ 25 ಕೆಜಿ ತೂಗುತ್ತಿದ್ದು ಅದು ಇಂದಿನ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯಕ್ಕೆ ಮಾರಾಟಗೊಳ್ಳುತ್ತದೆ. ಈ ಮೇಕೆ ಸಾಕಾಣಿಕೆಯು ಆರ್ಥಿಕ ಹಾಗೂ ಶ್ರಮದ ದೃಷ್ಟಿಯಿಂದ ಅಷ್ಟೊಂದು ತ್ರಾಸದಾಯಕವಲ್ಲ ಎನ್ನುತ್ತಾರೆ ನಜೀರ್. ಇದರ ಅಂದಾಜು ವಾರ್ಷಿಕ 2 ಲಕ್ಷಗಳಷ್ಟು ವ್ಯಯಮಾಡಿ, ತಮ್ಮ ಫಾರ್ಮನಲ್ಲಿ ಪ್ರತೀ ವರ್ಷ ನೂರೈವತ್ತರಿಂದ ಇನ್ನೂರು ಮರಿಗಳನ್ನು ಮಾರಾಟ ಮಾಡುತ್ತಿದ್ದು. ತಮ್ಮೆಲ್ಲಾ ಖರ್ಚು ಕಳೆದು ಅಂದಾಜು 10 ರಿಂದ 12 ಲಕ್ಷಗಳಷ್ಟು ಲಾಭ ಪಡೆಯುತ್ತಿದ್ದಾರಂತೆ. ಇನ್ನು ಹಾಲು ಹಾಗೂ ಗೊಬ್ಬರ ಮಾರಾಟದಿಂದ ಸಿಗುವ ಲಾಭದ ಲೆಕ್ಕವೇ ಬೇರೆ. ಈ ತಳಿಯ ಮೇಕೆಗಳ ಮರಿಗಳನ್ನು ಅವು ಸಂತಾನೋತ್ಪತ್ತಿಗೆ ಸಿದ್ಧವಾಗುವ ವೇಳೆಗೆ ಹಣತೆತ್ತು ಕೊಂಡೊಯ್ಯುವ ಸಾಕುದಾರರು, ಅವುಗಳನ್ನು ನಾಟಿ ಮೇಕೆಗಳೊಂದಿಗೆ ಕ್ರಾಸ್ ಮಾಡಿಸುತ್ತಾರೆ. ಹೀಗೆ ಹುಟ್ಟಿದ ನಾಟಿ ಮೇಕೆಗಳೂ ಸಹ ಸಾಕಷ್ಟು ಕಡಿಮೆ ಅವಧಿಯಲ್ಲಿಯೇ ಮರಿಗಳಿಗೆ ಜನ್ಮನೀಡಿ ಮಾಂಸೋತ್ಪಾದನೆಯು ದ್ವಿಗುಣಗೊಳ್ಳುವುದರಿಂದ ಲಾಭದಾಯಕವಂತೆ. ಮಾಹಿತಿಗೆ-9900204718. – ಪ.ನಾ.ಹಳ್ಳಿ.ಹರೀಶ್ ಕುಮಾರ್