ಹೊಸದಿಲ್ಲಿ: ನಾಪತ್ತೆಯಾಗಿ ನಾಲ್ಕು ತಿಂಗಳ ನಂತರ ಮಹಿಳೆಯೊಬ್ಬಳ ಶವ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆ ಬಳಿ ಪತ್ತೆಯಾಗಿದೆ.
ಆರೋಪಿಯಾದ ವಿಮಲ್ ಸೋನಿ ಎಂಬಾತ ಗ್ರೀನ್ ಪಾರ್ಕ್ ಪ್ರದೇಶದಲ್ಲಿ ಜಿಮ್ ತರಬೇತುದಾರನಾಗಿದ್ದು, ಸರ್ಕಾರಿ ಅಧಿಕಾರಿಗಳಿಗೆ ಮಂಜೂರು ಮಾಡಿದ ಬಂಗಲೆಗಳನ್ನು ಒಳಗೊಂಡಿರುವ ಪ್ರದೇಶದಲ್ಲಿ ಉದ್ಯಮಿಯ ಪತ್ನಿಯ ಶವವನ್ನು ಹೂತಿಟ್ಟಿದ್ದಾಗಿ ಪೊಲೀಸರ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕಾನ್ಪುರದ ರಾಯ್ಪುರ್ವಾ ಪ್ರದೇಶದ ನಿವಾಸಿಯಾದ ಆರೋಪಿ ನೆಲವನ್ನು ಅಗೆದು ಶವವನ್ನು ಪೊಲೀಸರಿಗೆ ತೋರಿಸಿದ್ದಾನೆ.
ಜೂನ್ 24 ರಂದು ಮಹಿಳೆ ನಾಪತ್ತೆಯಾಗಿದ್ದು, ನಂತರ ತನಿಖೆ ನಡೆಸಿದಾಗ ಆಕೆ ಮೃತಪಟ್ಟಿರುವುದು ಪತ್ತೆಯಾಗಿದೆ.
ಆರೋಪಿ ಮತ್ತು ಮಹಿಳೆ ಪರಿಚಯಸ್ಥರಾಗಿದ್ದರು. ಆರೋಪಿಯ ವಿವಾಹವು ನಿಶ್ಚಯವಾಗುತ್ತಿರುವ ಬಗ್ಗೆ ಮಹಿಳೆ ಅಸಮಾಧಾನಗೊಂಡಿದ್ದಾಳೆ ಎಂದು ಹೇಳಲಾಗಿದೆ. ಘಟನೆ ನಡೆದ ದಿನ, ಆಕೆ ಸುಮಾರು 20 ದಿನಗಳ ನಂತರ ಜಿಮ್ ಗೆ ಬಂದಿದ್ದಳು. ಅಂದು ಇಬ್ಬರೂ ಕಾರಿನಲ್ಲಿ ಹೋಗಿದ್ದರು. ಈ ವೇಳೆ ಜಗಳ ನಡೆದು ಆತ ಆಕೆಯ ಕುತ್ತಿಗೆಗೆ ಗುದ್ದಿದ್ದು, ಬಳಿಕ ಆಕೆ ಮೂರ್ಛೆ ಹೋದಳು. ನಂತರ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಉತ್ತರ ಕಾನ್ಪುರ ಡಿಸಿಪಿ ಶ್ರವಣ್ ಕುಮಾರ್ ಸಿಂಗ್ ಹೇಳಿದರು.
ಆರೋಪಿಯು ಮೊಬೈಲ್ ಬಳಸದ ಕಾರಣ ಪತ್ತೆ ಕಾರ್ಯ ವಿಳಂಬವಾಯಿತು. ತನಿಖೆಗಾಗಿ ಪುಣೆ, ಆಗ್ರಾ ಮತ್ತು ಪಂಜಾಬ್ಗೆ ತಂಡಗಳನ್ನು ಕಳುಹಿಸಲಾಗಿತ್ತು. ಮಹಿಳೆ ಧರಿಸಿದ್ದ ಆಭರಣವನ್ನು ಆರೋಪಿ ತೆಗೆದುಕೊಂಡಿದ್ದಾನೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು.