ಕಲಬುರಗಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವ ತಾಲೂಕಿನ ಕುರಿಕೋಟ ಸೇತುವೆ ಬಳಿಯ ಬೆಣ್ಣೆತೋರ ನದಿಯಲ್ಲಿ ಪತ್ತೆಯಾಗಿದೆ. ಹಣಕಾಸಿನ ವ್ಯವಹಾರವಾಗಿ ಕೊಲೆ ಮಾಡಿ ಶವವನ್ನು ಬಿಸಾಕಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
42 ವರ್ಷದ ಗೌಸುದ್ದೀನ್ ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಫಯಾಜ್, ನಿಜಾಮ್ ಬಾವರ್ಸಿ ಮತ್ತು ವಾಜೀದ್ ರನ್ನು ಬಂಧಿಸಲಾಗಿದೆ.
ಕೊಲೆಯಾದ ಗೌಸುದ್ದೀನ್ ಮತ್ತು ಆರೋಪಿಗಳು ಸೇರಿಕೊಂಡ ಹಳೆ ವಾಹನಗಳನ್ನು ಮಾರಾಟದ ವ್ಯವಹಾರ ಮಾಡುತ್ತಿದ್ದರು. ಫಯಾಜ್ ಹತ್ತಿರ ಗೌಸುದ್ದೀನ್ ಎರಡು ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಈ ಹಣ ನೀಡುವಂತೆ ಫಯಾಜ್ ಕೇಳಿದ್ದ. ಆದರೆ, ಗೌಸುದ್ದೀನ್ ಕೊಟ್ಟಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ನೀವು ಸರಿಯಿದ್ದರೆ ಈ ಪರಿಸ್ಥಿತಿ ಯಾಕೆ ಬರುತ್ತಿತ್ತು? ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ
ಹೀಗಾಗಿ ಅ.24ರಂದು ಎಲ್ಲರೂ ಒಟ್ಟಿಗೆ ಊಟ ಮಾಡುವ ನೆಪದಲ್ಲಿ ಗೌಸುದ್ದೀನ್ ಅನ್ನು ಕರೆಸಿಕೊಂಡು ಕೊಲೆ ಮಾಡಿದ್ದಾರೆ. ನಂತರ ಬೆಣ್ಣೆತೋರ ನದಿಯಲ್ಲಿ ಮೃತದೇಹವನ್ನು ಎಸದಿದ್ದಾರೆ. ಗೌಸುದ್ದೀನ್ ಕಾಣೆಯಾದ ದಿನ ಆರೋಪಿಗಳು ಜೊತೆಗಿದ್ದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೃತ್ಯವನ್ನು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಣೆಯಾದ ಬಗ್ಗೆ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಮೃತ ದೇಹ ಪತ್ತೆ ಹಿನ್ನೆಲೆಯಲ್ಲಿ ಅದನ್ನು ಕೊಲೆ ಪ್ರಕರಣ ಎಂದು ಪೊಲೀಸರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.