ಪಿತೋರ್‌ಗಡ: ಹಿಮಾಲಯದಲ್ಲಿ ನಾಪತ್ತೆಯಾಗಿದ್ದ 7 ಪರ್ವತಾರೋಹಿಗಳ ಶವಗಳನ್ನು ಐಟಿಬಿಪಿ ಯೋಧರ ತಂಡ ಕೊನೆಗೂ ಪರ್ವತದಿಂದ ಕೆಳಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಂದಾ ದೇವಿ ಪೂರ್ವ ಪರ್ವತದಲ್ಲಿ ಮಿಷನ್ ಡೇರ್‌ಡೆವಿಲ್ಸ್ ಹೆಸರಿನಲ್ಲಿ ಐಟಿಬಿಪಿ ಪಡೆಗಳು ಕಾರ್ಯಾಚರಣೆ ನಡೆಸಿದ್ದವು.
ನಂದಾ ದೇವಿ ಪೂರ್ವ ಪರ್ವತದ ಬಳಿ ಹೆಸರಿಲ್ಲದ ಹಿಮಪರ್ವತದಲ್ಲಿ ಹಿಮದಲ್ಲಿ ಹೂತು ಹೋಗಿದ್ದ 7 ಮಂದಿಯ ಶವಗಳನ್ನು 32 ಮಂದಿ ಯೋಧರ ತಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ನಾಪತ್ತೆಯಾಗಿರುವ ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಪೈಕಿ ಓರ್ವ ಭಾರತೀಯ ಪರ್ವತಾರೋಹಿ ಮತ್ತು ಓರ್ವ ಮಹಿಳೆ ಸೇರಿ 7 ಮಂದಿಯ ಶವಗಳನ್ನು ವಾಯುಪಡೆಯ ಹೆಲಿಕ್ಯಾಪ್ಟರ್‌ಗಳ ಮೂಲಕ ಹಲ್‌ದ್ವಾನಿಯ ಸುಶೀಲಾ ತಿವಾರಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಪ್ರಖ್ಯಾತ ಬ್ರಿಟೀಷ್ ಪರ್ವತಾ ರೋಹಿ ಮಾರ್ಟಿನ್ ಮೊರನ್ ನೇತೃತ್ವದ 8 ಪರ್ವಾತರೋಹಿಗಳ ತಂಡ ಪಿತೋರ್‌ಗಡದ ನಂದಾ ದೇವಿ ಪರ್ವತದಲ್ಲಿ ನಾಪತ್ತೆಯಾಗಿದ್ದರು. ಮೇ 13 ರಂದು ಹೊರಟಿದ್ದ ತಂಡ ಮೇ 25 ರಂದು ಬೇಸ್ ಕ್ಯಾಂಪ್‌ಗೆ ವಾಪಾಸಾಗಬೇಕಿತ್ತು. ಜೂನ್ 13 ರಂದು ಅವರ ಪತ್ತೆಗಾಗಿ ಐಟಿಬಿಪಿ ತಂಡ ಕಾರ್ಯಾಚರಣೆ ಆರಂಭಿಸಿತ್ತು.