ಹೊಸದಿಲ್ಲಿ : ಸುಮಾರು 40 ಶಾಲಾ ಮಕ್ಕಳಿದ್ದ ಬೋಟ್ ಒಂದು ಮಹಾರಾಷ್ಟ್ರದ ದಹಾಣು ಸಮೀಪ ಮುಳುಗಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕನಿಷ್ಠ 4 ವಿದ್ಯಾರ್ಥಿಗಳು ಮೃತಪಟ್ಟಿರುವುದಾಗಿಯೂ 32 ಮಂದಿಯನ್ನು ಪಾರುಗೊಳಿಸಲಾಗಿದೆ ಎಂದೂ ವರದಿಗಳು ತಿಳಿಸಿವೆ.
ದಹಾಣು ಸಮುದ್ರ ತೀರದಲ್ಲಿ ಇಂದು ಶನಿವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿತೆಂದು ಜಿಲ್ಲಾಧಿಕಾರಿ ಪ್ರಶಾಂತ್ ನರ್ಣಾವಾರೆ ತಿಳಿಸಿದ್ದಾರೆ. ದೋಣಿ ಮಗುಚಿ ನೀರಲ್ಲಿ ಮುಳುಗಿರುವ ಶಾಲಾ ಮಕ್ಕಳನ್ನು ಪಾರು ಗೊಳಿಸುವ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ಸುಪರಿಂಟೆಂಡೆಂಟರು ಮತ್ತು ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನಡೆಸುತ್ತಿದ್ದಾರೆ ಎಂದವರು ಹೇಳಿದರು.
ಶಾಲಾ ಮಕ್ಕಳಿದ್ದ ಬೋಟ್ ಪರ್ಣಾಕಾ ಬೀಚಿನಿಂದ ಹೊರಟಿತ್ತು. ದುರ್ಘಟನೆ ಸಂಭವಿಸಿದಾಗ ಬೋಟು ಸಮುದ್ರದಲ್ಲಿ ಎರಡು ನಾಟಿಕಲ್ ಮೈಲು ದೂರವನ್ನು ಕ್ರಮಿಸಿತ್ತು. ಬೋಟಿನ ಸಾಮರ್ಥ್ಯ ಮೀರಿ ಮಕ್ಕಳನ್ನು ತುಂಬಿಸಲಾಗಿತ್ತು. ಬೋಟ್ ಮುಳುಗಲು ಅದೇ ಕಾರಣವಾಯಿತು ಎಂದು ತಿಳಿದು ಬಂದಿದೆ.
ಮಕ್ಕಳ ರಕ್ಷಣಾ ಕಾರ್ಯದಲ್ಲಿ ಭಾರತೀಯ ತಟ ರಕ್ಷಣಾ ಪಡೆ ನೆರವಾಗುತ್ತಿದೆ. ಜತೆಗೆ ಸಾಗರಿಕ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಸಮುದ್ರ ಮತ್ತು ವಾಯು ರಕ್ಷಣಾ ಕಾರ್ಯ ಕೂಡ ನಡೆಯುತ್ತಿದೆ ಎಂದು ವರದಿಗಳು ಹೇಳಿವೆ.
ಕನಿಷ್ಠ ಮೂರು ನಾವೆಗಳನ್ನು ಮತ್ತು ಎರಡು ವಿಮಾನಗಳನ್ನು ದುರಂತ ನಡದ ಸ್ಥಳಕ್ಕೆ ರವಾನಿಸಲಾಗಿದೆ. ದಮನ್‌ನಿಂದ ಡೋರ್ನಿಯರ್ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಬಂದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿವೆ.
ಮಹಾರಾಷ್ಟ್ರದ ಪಾಲಗಢ ಜಿಲ್ಲೆಯಲ್ಲಿರುವ ದಹಾಣು ಮುಂಬಯಿಯಿಂದ ಸುಮಾರು 110 ಕಿ.ಮೀ. ದೂರದಲ್ಲಿದೆ.