ಸಸಿಹಿತ್ಲು: ಹಳೆಯಂಗಡಿ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಅಳಿವೆಯಲ್ಲಿ ಹೆಜಮಾಡಿಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ಐದು ಮಂದಿ ಪಾರಾಗಿ ಒರ್ವ ನಾಪತ್ತೆಯಾದ ಘಟನೆ ರವಿವಾರ ತಡಾರಾತ್ರಿ ನಡೆದಿದೆ.
ಸಮುದ್ರದಲ್ಲಿ ನಾಪತ್ತೆಯಾಗಿರುವ ಹೆಜಮಾಡಿ ಬಳಿಯ ಸುಕೇಶ್ ಬಪ್ಪನಾಡು (25) ಎಂದು ಗುರುತಿಸಲಾಗಿದೆ.
ಹೆಜಮಾಡಿ ಪ್ರದೇಶದ ಏಕನಾಥ ಕರ್ಕೇರ ಎಂಬವರ ಮಾಲಕತ್ವದ ಪಟ್ಟೆಬಲೆ ದೋಣಿಯಲ್ಲಿ ಏಕನಾಥ ಕರ್ಕೇರ, ಪಾಂಡುರಂಗ, ರಾಜೇಶ್, ನೀರಜ್ ಮತ್ತು ನಾಗೇಶ್, ಸುಕೇಶ್ ಸೇರಿ ಆರು ಮಂದಿ ಮೀನುಗಾರಿಕೆಗೆ ತೆರಳಿ ರಾತ್ರಿ ಹಿಂದುರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ:ವೈದ್ಯಕೀಯ ಶಿಕ್ಷಣ ಮತ್ತು “ಆರೋಗ್ಯ ಸಚಿವ” ಡಾ| ಸುಧಾಕರ್: ಶ್ರೀರಾಮುಲು ಖಾತೆ ಸುಧಾಕರ್ ಪಾಲಿಗೆ
ಭಾರೀ ಗಾಳಿಗೆ ದೋಣಿಯಲ್ಲಿದ್ದ ಸುಕೇಶ್ ಹೊರಗೆಸೆಯಲ್ಪಟ್ಟು ನೀರು ಪಾಲಾಗಿದ್ದರೆ ಉಳಿದವರನ್ನು ಇತರ ಮೀನುಗಾರರ ಬೋಟ್ ಮುಖಾಂತರ ರಕ್ಷಿಸಲಾಯಿತು ಎಂದು ಸಸಿಹಿತ್ಲುವಿನ ಮೀನುಗಾರ ಮುಖಂಡ ಚಂದ್ರಕುಮಾರ್ “ಉದಯವಾಣಿ”ಗೆ ತಿಳಿಸಿದ್ದಾರೆ.
ಕತ್ತಲೆಯಾದ ಕಾರಣ ಸಮುದ್ರದಲ್ಲಿ ನಾಪತ್ತೆಯಾದ ಸುಕೇಶ್ ಅವರನ್ನು ಹುಡುಕಲು ಕಷ್ಟವಾಯಿತು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸಸಿಹಿತ್ಲು ಮತ್ತು ಹೆಜಮಾಡಿಕೋಡಿಯ ಮೀನುಗಾರರು, ಜೀವ ರಕ್ಷಕರು, ಕರಾವಳಿ ಕಾವಲು ಪಡೆ ಪೊಲೀಸರು ಆಗಮಿಸಿ ಸೋಮವಾರ ಬೆಳಿಗ್ಗೆಯಿಂದ ಹುಡುಕಾಟ ಆರಂಭಿಸಿದ್ದಾರೆ.